ADVERTISEMENT

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ: ಬಾಳೆಹೊನ್ನೂರಿನ ರಂಭಾಪುರಿ ಪ್ರಸನ್ನ ಸ್ವಾಮೀಜಿ

ಎಲ್ಹೇರಿ ವಾರಣಾಸಿ ಹಿರೇಮಠದಲ್ಲಿ ಗಂಗಾಧರ ಶಿವಾಚಾರ್ಯರ 92ನೇ ಜನ್ಮದಿನ: ಧರ್ಮ ಸಭೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 5:06 IST
Last Updated 4 ಫೆಬ್ರುವರಿ 2021, 5:06 IST
ಗುರುಮಠಕಲ್ ತಾಲ್ಲೂಕಿನ ಎಲ್ಹೇರಿ ಗ್ರಾಮದಲ್ಲಿ ವಾರಣಾಸಿ ಹಿರೇಮಠದ ಹಿರಿಯ ಪೂಜ್ಯ ಗಂಗಾಧರ ಶಿವಾಚಾರ್ಯರ 92ನೇ ಜನ್ಮದಿನ ನಿಮಿತ್ತ ಧರ್ಮಸಭೆ ನಡೆಯಿತು
ಗುರುಮಠಕಲ್ ತಾಲ್ಲೂಕಿನ ಎಲ್ಹೇರಿ ಗ್ರಾಮದಲ್ಲಿ ವಾರಣಾಸಿ ಹಿರೇಮಠದ ಹಿರಿಯ ಪೂಜ್ಯ ಗಂಗಾಧರ ಶಿವಾಚಾರ್ಯರ 92ನೇ ಜನ್ಮದಿನ ನಿಮಿತ್ತ ಧರ್ಮಸಭೆ ನಡೆಯಿತು   

ಯಾದಗಿರಿ: ‘ಧರ್ಮ ಪರಿಪಾಲನೆ ಮಾಡದ ವ್ಯಕ್ತಿ ಪಶುವಿಗಿಂತಲೂ ಕಡೆ. ಧರ್ಮ ಮತ್ತು ರಾಜಕೀಯ ಬೆರೆಸಬಾರದು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ಶಿವಾಚಾರ್ಯ ಅಭಿಪ್ರಾಯಪಟ್ಟರು.

ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಎಲ್ಹೇರಿ ಗ್ರಾಮದಲ್ಲಿ ವಾರಣಾಸಿ ಹಿರೇಮಠದ ಗಂಗಾಧರ ಶಿವಾಚಾರ್ಯರ 92ನೇ ಜನ್ಮದಿನದ ಪ್ರಯುಕ್ತ ನಡೆದ ಧರ್ಮಸಭೆ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವೀರಶೈವ ಧರ್ಮ ಸ್ಥಾಪನೆ ಮಾಡಿದ ರೇಣುಕಾಚಾರ್ಯರು ವ್ಯಕ್ತಿತ್ವ ವಿಕಸನಕ್ಕೆ 10 ಸೂತ್ರಗಳನ್ನು ನೀಡಿದ್ದಾರೆ. ಅವುಗಳ ಪಾಲನೆ ಮಾನವ ಧರ್ಮದ ಕರ್ತವ್ಯ. ಈ ಭಾಗದಲ್ಲಿ ಧಾರ್ಮಿಕ ಸಂಸ್ಕಾರ ಉಳಿಸುವ ಕೆಲಸವನ್ನು ಗಂಗಾಧರ ಸ್ವಾಮೀಜಿ ಮಾಡಿದ್ದಾರೆ. ಅವರ ಜನ್ಮದಿನೋತ್ಸವ ಕಾರ್ಯಕ್ರಮ ಏರ್ಪಡಿಸಿದ್ದು, ಅಭಿನಂದನಾರ್ಹ.ಧರ್ಮ ಸೇವೆಯಲ್ಲಿ ಪಾಲ್ಗೊಂಡ ಶಾಸಕ ನಾಗನಗೌಡ ಕಂದಕೂರ ಪರಿವಾರಕ್ಕೆ ದೇವರು ಸನ್ಮಂಗಳ ಉಂಟುಮಾಡಲಿ’ ಎಂದರು.

ADVERTISEMENT

ಹೆಡಗಿಮದ್ರಾ ಗ್ರಾಮದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ,‘ಭಕ್ತಿ ಹೆಚ್ಚಾದಲ್ಲಿ ಭಗವಂತನೂ ಸಣ್ಣವನಾಗುತ್ತಾನೆ. ಎಂಬುದಕ್ಕೆ ಎಲ್ಹೇರಿ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಸಾಕ್ಷಿಯಾಗಿದೆ. ಸಂತರು ದೇಶದೊಳಗೆ ಧರ್ಮ ಕಾಪಾಡಿದರೆ, ಸೈನಿಕರು ಗಡಿಯಲ್ಲಿ ದೇಶ ಕಾಪಾಡುತ್ತಿದ್ದಾರೆ’ ಎಂದು ಹೇಳಿದರು.

ದೇವಾಪುರದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಜಾತಿ, ಮತ, ಪಂಥ ಮೀರಿ ಗಂಗಾಧರ ಸ್ವಾಮೀಜಿ ತಪೋನಿಷ್ಠರಾಗಿ ಕಿರಿಯ ಸ್ವಾಮಿಗಳಿಗೆ ಆಶೀರ್ವಾದ ಮಾಡಿ ಬೆಳೆಸಿದ್ದಾರೆ’ ಎಂದರು.

ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ,‘ಗಂಗಾಧರ ಸ್ವಾಮೀಜಿ ಜನ್ಮದಿನ ಕಾರ್ಯಕ್ರಮದ ನಡೆಸಲು ಅವಕಾಶ ಸಿಕ್ಕಿರುವುದು ಪುಣ್ಯ’ ಎಂದು ಹೇಳಿದರು.

‘ಎಲ್ಹೇರಿ ಗಂಗಾಧರ ಶಿವಾಚಾರ್ಯರು ನಮ್ಮ ತಂದೆ ತಾಯಿ ಮತ್ತು ನಮ್ಮ ಕುಟುಂಬದ ಗುರುಗಳಾಗಿದ್ದಾರೆ. ಎಲ್ಹೇರಿ ಗಂಗಾಧರ ಶ್ರೀಗಳು ನೂರು ವರ್ಷ ತುಂಬುವರೆಗೂ ಆರೋಗ್ಯದಿಂದ ಇರಲಿ. ನೂರನೇ ಜನ್ಮದಿನದ ವರೆಗೂ ನಮ್ಮ ಕುಟುಂಬದಿಂದಲೇ ಪೂಜ್ಯರ ಜನ್ಮದಿನ ಕಾರ್ಯಕ್ರಮದ ಸೇವೆ ಮಾಡಲು ಬೇಡಿಕೊಳ್ಳುತ್ತೇನೆ’ ಎಂದರು.

ಗಂಗಾಧರ ಶಿವಾಚಾರ್ಯರಿಗೆ ರಂಭಾಪುರಿ ಶ್ರೀಗಳು ಬೃಹತ್ ರುದ್ರಾಕ್ಷಿ ಮಾಲೆ ಹಾಕಿ ಜನ್ಮದಿನಕ್ಕೆ ಶುಭ ಕೋರಿದರು.

ಶ್ರೀಗಳ 92ನೇ ಜನ್ಮದಿನದ ಸಂಪೂರ್ಣ ಸೇವೆ ಮಾಡಿದ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ದಂಪತಿ ಮತ್ತು ಪುತ್ರಿ ರೋಹಿಣಿ ಅವರನ್ನು ಸನ್ಮಾನಿಸಲಾಯಿತು.

ಎಲ್ಹೇರಿ–ಮಳಖೇಡ ಉಭಯ ಮಠಗಳ ಕೊಟ್ಟೂರೇಶ್ವರ ಸ್ವಾಮೀಜಿ, ತಂಗೆಡಪಲ್ಲಿ ಮಠದ ಶಿವಯೋಗಿ ಶಿವಾಚಾರ್ಯ, ಗದಗ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ, ದಿಗ್ಗಾಂವನ ಸಿದ್ಧವೀರ ಶಿವಾಚಾರ್ಯ, ಕೆಂಭಾವಿಯ ಚನ್ನಬಸವ ಶ್ರೀ, ದೋರನಹಳ್ಳಿ ಚಿಕ್ಕಮಠದ ಶಿವಲಿಂಗ ದೇಶಿಕೇಂದ್ರ ಸಾಮೀಜಿ, ಶಹಾಪುರ ಗದ್ದುಗೆಯ ಬಸಯ್ಯ ಶರಣ, ಜೆಡಿಎಸ್ ಮುಖಂಡ ಅಜಯರೆಡ್ಡಿ, ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪಗೌಡ ಮಲ್ಹಾರ, ಶಂಭುಲಿಂಗಪ್ಪ ಅರುಣಿ, ಡಾ. ವೀರಭದ್ರಪ್ಪ ಇದ್ದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಪ್ರಸ್ತಾವಿಕ ಮಾತನಾಡಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

* ಗಡಿ ಭಾಗದ ಗುರುಮಠಕಲ್ ಕ್ಷೇತ್ರಕ್ಕೆ ಜಗದ್ಗುರುಗಳು ಆಗಮಿಸಿ ಕ್ಷೇತ್ರದ ಜನತೆಗೆ ಆಶೀರ್ವಾದ ಮಾಡಿದ್ದು ಎಲ್ಲಿಲ್ಲದ ಸಂತಸ ತಂದಿದೆ

-ಶರಣಗೌಡ ಕಂದಕೂರ, ಜೆಡಿಎಸ್ ರಾಜ್ಯ ಯುವ ನಾಯಕ

* ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತಗೊಂಡ ವೀರಶೈವ ಧರ್ಮ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕಾಲದಲ್ಲೂ ಮತ್ತಷ್ಟು ಪ್ರವರ್ಧಮಾನಕ್ಕೆ ಬಂದಿತು

-ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ, ರಂಭಾಪುರಿ ಜಗದ್ಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.