ಸುರಪುರ:‘ಅಂಗವಿಕಲರು ಎಲ್ಲರಂತೆ ಸಾಮಾನ್ಯರು. ಅಂಗವೈಕಲ್ಯ ಇರುವ ಅನೇಕರು ಅನನ್ಯ ಸಾಧನೆ ಮಾಡಿದ್ದು ನಮ್ಮ ಕಣ್ಣ ಮುಂದೆ ಇದೆ. ಪರಿಶ್ರಮ, ನಿಗದಿತ ಗುರಿ, ಛಲ ಇದ್ದರೆ ಅಂಗವಿಕಲರು ಏನನ್ನಾದರೂ ಸಾಧಿಸಬಹುದು’ ಎನ್ನುತ್ತಾರೆ ಮಹ್ಮದ್ ಅಜೀಮ ತಂಬಾಕವಾಲೆ.
ನಗರ ವ್ಯಾಪ್ತಿಯ ರಂಗಂಪೇಟೆಯ ನಿವಾಸಿ ಮಹ್ಮದ್ ಅಜೀಮ ತಂಬಾಕವಾಲೆ (27) ಅವರಿಗೆ ಹುಟ್ಟಿನಿಂದ ಎರಡು ಕಾಲುಗಳ ಸ್ವಾಧೀನವಿಲ್ಲ. ಶಾಲೆಯಲ್ಲಿ ಸಹಪಾಠಿಗಳು ಹಂಗಿಸುತ್ತಿದ್ದರಿಂದ ಶಾಲೆಗೆ ಹೋಗಲು ಮನಸ್ಸಾಗಲಿಲ್ಲ. ಆದರೂ ಬೇರೆಯವರು ಶಾಲೆಗೆ ಹೋಗುವುದನ್ನು ನೋಡಿ ತಮಗೂ ಓದಬೇಕೆನ್ನುವ ಇಚ್ಛೆ ಶುರುವಾಯಿತು. ತರಗತಿಗಳಿಗೆ ಹೋಗದೆ ಮನೆಯಲ್ಲಿಯೇ ಓದಿ ಪಿಯುಸಿ ಪಾಸಾಗಿದ್ದು ಅಜೀಮ ಅವರ ಅದಮ್ಯ ಸಾಧನೆ. ಮನೆಯಲ್ಲಿ ಬಡತನ. ಅಪ್ಪನಿಗೆ ನೆರವಾಗಬೇಕೆಂಬ ಆಸೆ.
ಅಪ್ಪನ ಹೋಟೆಲ್‍ನಲ್ಲಿ ಕೆಲಸ ಆರಂಭಿಸಿದರು. ಮೊದಲು ಪಾತ್ರೆ ತೊಳೆಯುತ್ತಿದ್ದರು. ನಂತರ ಬಜ್ಜಿ, ಒಗ್ಗರಣೆ, ಚಹ ಮಾಡುವುದನ್ನು ಕಲಿತರು. ಕೆಲ ವರ್ಷಗಳ ಹಿಂದೆ ಕೌಂಟರ್‌ನಲ್ಲಿ ಕುಳಿತು ತಾವೇ ಹೋಟೆಲ್ ನಡೆಸತೊಡಗಿದರು. ಒಂದು ತಿಂಗಳ ಹಿಂದೆ ಹೋಟೆಲ್ ಪಕ್ಕದಲ್ಲಿ ಪಾನಡಬ್ಬಾ ಇಟ್ಟು ಅದನ್ನೂ ನಡೆಸುತ್ತಿದ್ದಾರೆ. ಶೇ 85 ಅಂಗವೈಕಲ್ಯ ಹೊಂದಿದ್ದು ₹ 1,400 ಮಾಸಾಶನ ಪಡೆಯುತ್ತಾರೆ. ಇತರ ಅಂಗವಿಕಲರಿಗೆ ಧೈರ್ಯ ತುಂಬಿ ಅವರಿಗೆ ಸಹಾಯಹಸ್ತ ಚಾಚುತ್ತಾರೆ.
ಅಜೀಮ ಅವರಿಗೆ ಮದುವೆಯಾಗಿಲ್ಲ. ಅಂಗವಿಕಲ ಎಂದು ಯಾರೂ ಹೆಣ್ಣು ಕೊಡಲು ಮುಂದೆ ಬರಲಿಲ್ಲ. ಅವರ ಕಾರ್ಯತತ್ಪರತೆ, ವ್ಯಾಪಾರ, ವಹಿವಾಟಿನಲ್ಲಿ ಮಾಡಿದ ಅಭಿವೃದ್ಧಿ ಕಂಡು ಈಗ ಮದುವೆ ಸಂಬಂಧ ಬರುತ್ತಿವೆ.
‘ಅಂಗವಿಕಲರ ಬಗ್ಗೆ ಅನುಕಂಪ, ಸಹಾನುಭೂತಿ ಖಂಡಿತ ಬೇಡ. ಸಹಾಯ ಹಸ್ತ ಇರಲಿ. ಸರ್ಕಾರದ ಯೋಜನೆಗಳು ಅಂಗವಿಕಲರಿಗೆ ತಲುಪಬೇಕು. ಅಂಗವಿಕಲರು ಜನಸಾಮಾನ್ಯರಂತೆ ನೆಮ್ಮದಿಯ ಜೀವನ ನಡೆಸುವಂತಾಗಬೇಕು’ ಎನ್ನುತ್ತಾರೆ ಅಜೀಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.