ಸುರಪುರ: ನಮ್ಮ ದೇಶದ ಅತ್ಯಂತ ಜನಪ್ರಿಯ ಕ್ರೀಡೆ ಕ್ರಿಕೆಟ್ ಈಗ ರೂಪಾಂತರ ತಾಳುತ್ತಿದೆ. ಲೆದರ್ ಬಾಲ್ ಕ್ರಿಕೆಟ್‍ನಲ್ಲಿ ತೀವ್ರ ಸ್ಪರ್ಧೆ ಇರುವ ಕಾರಣ ರಾಜ್ಯ ಮತ್ತು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಹಲವಾರು ಪ್ರತಿಭಾವಂತರಿಗೆ ಸಾಧ್ಯವಾಗುತ್ತಿಲ್ಲ.
ಇಂತಹ ಅಸಂಖ್ಯೆ ಆಟಗಾರರು ಟೆನಿಸ್ ಬಾಲ್, ಸಾಫ್ಟ್‌ಬಾಲ್ ಕ್ರಿಕೆಟ್ ಮೊರೆ ಹೋಗುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲೂ ಇಂತಹ ಟೂರ್ನಿ ಹೆಚ್ಚು ಜನಪ್ರಿಯತೆ ಹೊಂದಿವೆ. ಸಂಘಟಕರು ಆಟಗಾರರಿಗೆ ಆಕರ್ಷಕ ಬಹುಮಾನ ನೀಡುತ್ತಿದ್ದಾರೆ. ಗೆದ್ದ ತಂಡಕ್ಕೆ ಲಕ್ಷಾಂತರ ಹಣ ದೊರಕುತ್ತಿದೆ. ಈ ಆಟ ವೀಕ್ಷಿಸಲು ಪ್ರೇಕ್ಷಕರ ದೊಡ್ಡ ದಂಡೇ ಸೇರಿರುತ್ತದೆ.
ಸುರಪುರದಲ್ಲೂ ಸಾಫ್ಟ್ ಬಾಲ್ ಕ್ರಿಕೆಟ್ ವೇಗ ಪಡೆದುಕೊಳ್ಳುತ್ತಿದೆ. 100ಕ್ಕೂ ಹೆಚ್ಚು ಆಟಗಾರರು ನಿತ್ಯ ಈ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದಾರೆ. ತಾಲ್ಲೂಕು ಕ್ರೀಡಾಂಗಣದಲ್ಲಿ ದಿನ ಬೆಳಿಗ್ಗೆ 6 ರಿಂದ 9 ಗಂಟೆವರೆಗೆ ಆಟಗಾರರು ಕ್ರಿಕೆಟ್ ಆಡುತ್ತಾರೆ. ಇಲ್ಲಿಯ ಕ್ರಿಕೆಟಿಗರು ಶಿವಮೊಗ್ಗ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ ಇತರೆಡೆ ನಡೆಯುವ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಈ ಆಟಗಾರರಿಗೆ ಯಾವುದೇ ಸೌಲಭ್ಯ ಇಲ್ಲ. ಪಿಚ್ ತಾವೇ ಸಿದ್ಧಪಡಿಸಿದ್ದಾರೆ. ಬ್ಯಾಟ್, ಬಾಲ್, ಸ್ಟಂಪ್ ಇತರ ಸಾಮಗ್ರಿಗಳನ್ನು ತಾವೇ ಖರೀದಿಸುತ್ತಾರೆ. ಟೂರ್ನಿಗಳಲ್ಲಿ ಭಾಗವಹಿಸಲು ಧನ ಸಹಾಯ ದೊರೆಯುತ್ತಿಲ್ಲ.
ಸಾಫ್ಟ್‌ಬಾಲ್ ಕ್ರಿಕೆಟ್ ಉತ್ತೇಜಿಸಲು ಬೆಂಗಳೂರಿನಲ್ಲಿ ಗಂಗಾಧರ ರಾಜ್ ಎಂಬುವವರು ಕೆಎಸ್‍ಪಿಎಲ್ (ಕರ್ನಾಟಕ ಸಾಫ್ಟ್‌ಬಾಲ್ ಪ್ರಿಮಿಯರ್ ಲೀಗ್) ಸಂಸ್ಥೆ ಹುಟ್ಟು ಹಾಕಿದ್ದಾರೆ. ವರ್ಷಕ್ಕೆ ಎರಡು ಬಾರಿ ಬೆಂಗಳೂರಿನಲ್ಲಿ ಕೆಪಿಎಲ್ ಮಾದರಿಯಲ್ಲಿ ಟೂರ್ನಿ ಆಯೋಜಿಸುತ್ತಿದ್ದಾರೆ.
ಈ ಸಂಸ್ಥೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ನಿಂದ ಮಾನ್ಯತೆ ದೊರೆತಿದೆ. ಪ್ರತಿ ಜಿಲ್ಲೆಗೆ ಒಂದು ತಂಡ ಆಯ್ಕೆ ಮಾಡಲಾಗುತ್ತದೆ. ಯಾದಗಿರಿ ಜಿಲ್ಲಾ ತಂಡಕ್ಕೆ ಸುರಪುರದ ಮಾನಪ್ಪ ಕಲಬುರಗಿ ನಾಯಕನಾಗಿದ್ದಾರೆ. ಸುರಪುರದ ನಾಲ್ಕೈದು ಆಟಗಾರರು ಈ ತಂಡದಲ್ಲಿದ್ದಾರೆ.
ಕಳೆದ ತಿಂಗಳು ನಡೆದ ಟೂರ್ನಿಯಲ್ಲಿ ಯಾದಗಿರಿ ತಂಡ ಉತ್ತಮ ಪ್ರದರ್ಶನ ನೀಡಿದೆ. ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್‌ಮನ್ ಆಗಿರುವ ಮಾನಪ್ಪ ಕಲಬುರಗಿ ರನ್ ಹೊಳೆ ಹರಿಸಿದ್ದಾರೆ.
ಕೆಎಸ್‍ಪಿಎಲ್ ಸಂಸ್ಥೆ ಮುಂಬರುವ ದಿನಗಳಲ್ಲಿ ಕೆಪಿಎಲ್ ಮಾದರಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಿದೆ. ಈಗ ಆಟಗಾರರಿಗೆ ಬಸ್ ಖರ್ಚು, ಊಟ, ವಸತಿ ಮತ್ತು ತಕ್ಕ ಮಟ್ಟಿಗೆ ಹಣ ನೀಡಲಾಗುತ್ತಿದೆ. ಬೆಂಗಳೂರಿನಿಂದ ಬೇರೆ ಕಡೆಗೂ ಟೂರ್ನಿ ಆಯೋಜಿಸುವ ಯೋಚನೆ ಇದೆ. ಜಾಹೀರಾತುದಾರರು ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ಗಂಗಾಧರ ರಾಜ್.
ಸುರಪುರ ಕ್ರೀಡಾಂಗಣದಲ್ಲಿ ರಾತ್ರಿ ವೇಳೆ ಕುಡುಕರು ಬಾಟಲಿಗಳನ್ನು ಬೀಸಾಡುತ್ತಿದ್ದಾರೆ. ಗಲೀಜು ಮಾಡುತ್ತಾರೆ. ಒಡೆದು ಚೂರಾದ ಬಾಟಲಿಗಳನ್ನು ದಿನ ತೆಗೆದು ಎಸೆಯುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಆಟಗಾರರು.
80ರ ದಶಕದ ಉಚ್ಛ್ರಾಯ ಸ್ಥಿತಿ:
1981ರಲ್ಲಿ ದಿವಂಗತ ಮಲ್ಕಣ್ಣ ಜೇವರ್ಗಿ ಅಧ್ಯಕ್ಷತೆಯಲ್ಲಿ ಸುರಪುರದಲ್ಲಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಆರಂಭವಾಯಿತು. 2000ರವರೆಗೆ ಪ್ರತಿ ವರ್ಷ ಲೆದರ್ ಬಾಲ್ ಟೂರ್ನಿ ಆಯೋಜಿಸಲಾಗುತ್ತಿತ್ತು.
ರಾಜಾ ಶ್ರೀನಿವಾಸನಾಯಕ, ಅಯ್ಯಣ್ಣ ಪತ್ರಿಮಠ, ವೇಣುಗೋಪಾಲ ರಫುಗಾರ, ದತ್ತಾತ್ರೇಯ ಗುತ್ತೇದಾರ, ಶೇಖರ ಹೂಗಾರ, ಹಸನ ಅಸ್ಕರಿ, ಕೇಶವ ಅಗರವಾಲ, ಅಮರೇಶ ಜಾಗೀರದಾರ, ಚಂದ್ರಶೇಖರ ಜಮದ್ರಖಾನಿ ಇತರ ಕೆಲ ಪ್ರತಿಭಾವಂತ ಆಟಗಾರರು ಹೊರಹೊಮ್ಮಿದರು. ಅದರಲ್ಲಿ ಕೆಲವರು ರಣಜಿ ತಂಡದ ಬಾಗಿಲು ತಟ್ಟಿದ್ದರು.
ಬಳ್ಳಾರಿ, ಕೊಪ್ಪಳ, ಗಂಗಾವತಿ, ಕಂಪ್ಲಿ, ಕಲಬುರಗಿ, ಹಟ್ಟಿ, ತಾಳಿಕೋಟಿ, ಮುದ್ದೇಬಿಹಾಳ ಇತರೆಡೆ ನಡೆಯುತ್ತಿದ್ದ ಲೆದರ್ ಬಾಲ್ ಟೂರ್ನಿಗಳಲ್ಲಿ ಸುರಪುರ ಕ್ರಿಕೆಟಿಗರದ್ದೆ ಪಾರುಪತ್ಯ ಇತ್ತು ಎಂದು ನೆನಸಿಕೊಳ್ಳುತ್ತಾರೆ ಸುದರ್ಶನ ರಫುಗಾರ.
ಸಾಫ್ಟ್‌ಬಾಲ್ ಕ್ರಿಕೆಟ್ ಈಗ ಲೆದರ್ ಬಾಲ್ ಕ್ರಿಕೆಟ್‍ಗೆ ಪೂರಕವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಈ ಮಾದರಿಯ ಚುಟುಕು ಕ್ರಿಕೆಟ್‍ಗೂ ಬೇಡಿಕೆ ಬರಲಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಆಟಗಾರರು ಪ್ರಭಾವಿತರಾಗುತ್ತಿದ್ದಾರೆದೇವು ಹವಾಲ್ದಾರ್ ಸಾಫ್ಟ್‌ಬಾಲ್ ಕ್ರಿಕೆಟ್ ತರಬೇತುದಾರ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸಾಫ್ಟ್‌ಬಾಲ್ ಕ್ರಿಕೆಟ್ ಆಟಗಾರರಿಗೆ ಕಿಟ್ ಮತ್ತು ಟೂರ್ನಿಗಳಲ್ಲಿ ಭಾಗವಹಿಸಲು ಹಣದ ನೆರವು ಒದಗಿಸಬೇಕುಮಾನಪ್ಪ ಕಲಬುರಗಿ ಜಿಲ್ಲಾ ಕ್ರಿಕೆಟ್ ತಂಡದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.