ಹುಣಸಗಿ: ಸೂರಿಲ್ಲದ ಬಡವರಿಗೆ ಸರ್ಕಾರ ಅನೇಕ ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ ತಾಲ್ಲೂಕಿನ ಗೆದ್ದಲಮರಿ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಶಿಷ್ಟ ಸಮುದಾಯದ ಬಡ ಕುಟುಂಬಗಳು ಮೂರು ದಶಕಗಳಿಂದಲೂ ಗುಡಿಸಲಿನಲ್ಲಿಯೇ ಬದುಕು ಸಾಗಿಸುತ್ತಿವೆ.
ಗೆದ್ದಲಮರಿ ಗ್ರಾಮ ಪಂಚಾಯಿತಿ 19 ಸದಸ್ಯರನ್ನು ಹೊಂದಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಮನೆಗಳಿವೆ. ಈ ಗ್ರಾಮದಲ್ಲಿ 250ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಕುಟುಂಬಗಳಿವೆ. ಆದರೆ, ಇಲ್ಲಿ ಇನ್ನೂ ಕೆಲ ಕುಟುಂಬಗಳಿಗೆ ‘ವಸತಿ ಭಾಗ್ಯ’ ಸಿಗದಿರುವುದರಿಂದ ಈ ಕುಟುಂಬದವರ ಬದುಕು ಗುಡಿಸಲಿನಲ್ಲೇ ಕಮರುತ್ತಿವೆ.
ಶರಣಮ್ಮ ಗೊಜ್ಜಿಗೇರ, ತಾಯಮ್ಮ ನಾಗಪ್ಪ ಹಾಗೂ ಶ್ರೀದೇವಿ ಅವರ ಕುಟುಂಬಗಳು 30 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿವೆ. ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
‘ನಮ್ಮ ಕುಟುಂಬದಲ್ಲಿ ಮೂವರು ಮಕ್ಕಳು ಸೇರಿ ಐದು ಜನರಿದ್ದೇವೆ. ಇಬ್ಬರು ಶಾಲೆಗೆ ಹೋಗುತ್ತಾರೆ. ಮೂರು ದಶಕಗಳಿಂದ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದೇವೆ. ಸೂರಿಗಾಗಿ ಗ್ರಾಮ ಪಂಚಾಯಿತಿಗೆ ಅಲೆದಾಡಿ ಸುಸ್ತಾಗಿದ್ದೇವೆ. ಕಳೆದ ವರ್ಷ ಡಾ.ಬಾಬು ಜಗಜೀವನರಾಂ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದೆವು. ಅದರ ಸ್ಥಿತಿ ಏನಾಯಿತು ಎನ್ನುವ ಮಾಹಿತಿ ಇನ್ನೂ ತಿಳಿದಿಲ್ಲ’ ಎಂದು ಶರಣಮ್ಮ ಬೇಸರ ವ್ಯಕ್ತಪಡಿಸಿದರು.
ಶರಣಮ್ಮ ಅವರ ಗುಡಿಸಲಿಗೆ ಹೊಂದಿಕೊಂಡು ತಾಯಮ್ಮ ಅವರೂ ಗುಡಿಸಲಿನಲ್ಲೇ ವಾಸಿಸುತ್ತಿದ್ದಾರೆ. ಅವರು ಒಬ್ಬರೇ ವಾಸವಾಗಿದ್ದು, ಹಣ್ಣು–ಹಂಪಲು ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
‘ಮಳೆ ಬಂದರೆ ಗುಡಿಸಲುಗಳಿಗೆ ನೀರು ನುಗ್ಗುತ್ತದೆ. ಆಗ ತೊಂದರೆ ಅನುಭವಿಸುತ್ತೇವೆ. ಸರ್ಕಾರ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಬೇಕು’ ಎಂದು ಶ್ರೀದೇವಿ ಒತ್ತಾಯಿಸುತ್ತಾರೆ.
‘ಗ್ರಾಮದಲ್ಲಿ ಇನ್ನೂ ಇಂಥ ಅನೇಕ ಕುಟುಂಬಗಳಿವೆ. ಸರ್ವೆ ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಇತರ ವಸತಿ ಯೋಜನೆ ಅಡಿ ಸೂರು ಕಲ್ಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು’ ಎಂದು ಮಾದಿಗ ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಗರಟಗಿ ಹಾಗೂ ಅಮಲಪ್ಪ ಹಳ್ಳಿ ಒತ್ತಾಯಿಸಿದ್ದಾರೆ.
ಎರಡು ವರ್ಷಗಳಿಂದ ವಸತಿ ಯೋಜನೆಗಳಡಿ ಗ್ರಾಮ ಪಂಚಾಯಿತಿಗೆ ಮನೆಗಳು ಮಂಜೂರಾಗಿಲ್ಲ. ಬಂದ ತಕ್ಷಣ ಅರ್ಹರಿಗೆ ಹಂಚಿಕೆ ಮಾಡಲಾಗುವುದುಮೋಹನ್ ಹುಲ್ಲೂರುಪಿಡಿಒ ಗೆದ್ದಲಮರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.