ADVERTISEMENT

ವಡಗೇರಾ: ಹದಗೆಟ್ಟ ಗ್ರಾಮೀಣ ರಸ್ತೆಗಳು

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ; ಆರೋಪ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 4:59 IST
Last Updated 22 ನವೆಂಬರ್ 2024, 4:59 IST
ವಡಗೇರಾ ಪಟ್ಟಣದ ಹಾದಿ ಬಸವಣ್ಣ ದೇವಾಲಯದಿಂದ ಕೋನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ದುಸ್ಥಿತಿ
ವಡಗೇರಾ ಪಟ್ಟಣದ ಹಾದಿ ಬಸವಣ್ಣ ದೇವಾಲಯದಿಂದ ಕೋನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ದುಸ್ಥಿತಿ   

ವಡಗೇರಾ: ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ.

ಅಕಾಲಿಕ ಮಳೆಯಿಂದ ತಾಲ್ಲೂಕಿನ ಕೋನಹಳ್ಳಿಯಿಂದ ರೋಟ್ನಡಗಿ, ವಡಗೇರಾದಿಂದ ತುಮಕೂರ, ಗಡ್ಡೆಸೂಗುರದಿಂದ ಮಾಲಹಳ್ಳಿ, ಗುರುಸುಣಗಿಯಿಂದ ಹುಲ್ಕಲ್, ಹಾದಿ ಬಸವಣ್ಣ ದೇವಾಲಯದಿಂದ ಕೋನಹಳ್ಳಿ ಹೋಗುವ ರಸ್ತೆ ಹೀಗೆ ಅನೇಕ ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟು ಹೋಗಿದ್ದು, ಜಲ್ಲಿಕಲ್ಲುಗಳು ರಸ್ತೆಯ ಮೇಲೆದಿದ್ದು, ಸವಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ರಸ್ತೆಯ ಅಲ್ಲಲ್ಲಿ ದೊಡ್ಡ ಕಂದಕಗಳು ನಿರ್ಮಾಣವಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿರುವ ಉದಾಹರಣೆಗಳಿವೆ. ಹಾಗಾಗಿ ಈ ರಸ್ತೆಗಳಲ್ಲಿ ಸವಾರರು ಬಹಳ ಎಚ್ಚರಿಕೆಯಿಂದ  ವಾಹನಗಳನ್ನು ಚಲಾಯಿಸಬೇಕಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಬಹುತೇಕ ಗ್ರಾಮೀಣ ಕೂಡು ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಪಟ್ಟಣ ಪ್ರದೇಶದತ್ತ ತೆರಳಲು ಸಂಕಷ್ಟ ಅನುಭವಿಸಬೇಕಿದೆ.

ADVERTISEMENT

‘ರಸ್ತೆಗಳು ಹಾಳಾದ ಪರಿಣಾಮ ರೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಕಾಲದಲ್ಲಿ ತಲುಪಬೇಕಾದ ಸ್ಥಳಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ಶಾಸಕರು ಇತ್ತ ಗಮನಹರಿಸಿ ಗ್ರಾಮೀಣ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಕರವೇ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಶರಣು ಇಟಗಿ ಒತ್ತಾಯಿಸಿದರು.

ವಡಗೇರಾದಿಂದ ತುಮಕೂರಿಗೆ ಹೋಗುವ ರಸ್ತೆ ಮೇಲೆ ಜಲ್ಲಿಕಲ್ಲು ಹರಡಿವೆ. ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ರಸ್ತೆ ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಶರಣು ಕುರಿ ವಡಗೇರಾ ಗ್ರಾ.ಪಂ.ಸದಸ್ಯ
ವಡಗೇರಾ– ತುಮಕೂರ ರಸ್ತೆ ಕಾಮಗಾರಿಗೆ ಅನುಮೋದನೆ ದೊರೆತಿದೆ. ಶೀಘ್ರದಲ್ಲಿಯೇ ಕಾಮಗಾರಿಯನ್ನು ಆರಂಭಿಸಲಾಗುವುದು. ಹಾಗೆಯೇ ಹಂತ ಹಂತವಾಗಿ ಮುಖ್ಯ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು
ಸೂಗರಡ್ಡಿ ಎಇಇ ಲೋಕೋಪಯೋಗಿ ಇಲಾಖೆ ಯಾದಗಿರಿ
ಅನುದಾನದ ಕೊರತೆ ಇರುವದರಿಂದ ಗ್ರಾಮೀಣ ರಸ್ತೆಗಳನ್ನು ದುರಸ್ತಿ‌ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಅನುದಾನ ಬಂದ ಬಳಿಕ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
ಸೋಮನಗೌಡ ಜೆಇ ಜಿಲ್ಲಾ ಪಂಚಾಯತ್‌ ಎಂಜಿನಿಯರಿಂಗ್‌ ವಿಭಾಗ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.