ಯರಗೋಳ: ‘ಯಾದಗಿರಿ ಜಿಲ್ಲೆಯಲ್ಲಿ ಹೆರಿಗೆ ಸಮಯದಲ್ಲಿ ರಕ್ತಸ್ರಾವದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಾಯಿಂದಿರು ಮೃತರಾಗುತ್ತಿದ್ದಾರೆ. ಹೀಗಾಗಿ, ಗರ್ಭಿಣಿಯರು ಪೌಷ್ಟಿಕಾಂಶ ಆಹಾರ ಸೇವನೆ ಮಾಡಬೇಕು. ಹಸಿರು ತರಕಾರಿ, ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಗ್ರಾಮದ ಶಾದಿಮಹಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಪೋಷಣ್ ಅಭಿಯಾನ’ ಯೋಜನೆಯಡಿಯಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯರಗೋಳ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ರಾಠೋಡ ಮಾತನಾಡಿ, ‘ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮದ ಮನೆಗಳಿಗೆ ತೆರಳಿ ಗರ್ಭಿಯಣಿಯರ ಆರೋಗ್ಯ ವಿಚಾರಿಸುತ್ತಾರೆ. ತಾಯಿಂದಿರು ಪೌಷ್ಟಿಕ ಆಹಾರ ಸೇವಿಸಿ’ ಎಂದು ಸಲಹೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಿಜ್ವಾನಾ ಬೇಗಂ ಮಾತನಾಡಿ, ‘ಮಕ್ಕಳ ನಡುವೆ ಅಂತರವಿರಲಿ, ಹೆಚ್ಚಿನ ಮಕ್ಕಳು ಬೇಡ. ಮನೆಯಲ್ಲಿಯೇ ಸಿಗುವ ಪೌಷ್ಟಿಕ ಆಹಾರ ಸೇವನೆ ಮಾಡುವಂತೆ’ ತಿಳಿಹೇಳಿದರು.
ಕಾರ್ಯಕರ್ತೆಯರಾದ ಈರಮ್ಮ, ಕವಿತಾ, ಸಂಪತಕುಮಾರಿ, ರೇಣುಕಾ, ಗಂಗಮ್ಮ ಅವರಿಗೆ ಮೊಬೈಲ್ ಫೋನ್‌ಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಸಮಾರಂಭದಲ್ಲಿ ಗ್ರಾಮದ ಮಹಿಳೆಯರು ಕಡಿಮೆ ವೆಚ್ಚದ ಪದಾರ್ಥಗಳು ಬಳಸಿ ತಯಾರಿಸಲಾದ ಚಕೋಲಿ, ಹೋಳಿಗೆ, ಹುಗ್ಗಿ, ಮೊಸರನ್ನ, ಪಲಾವ್, ಪೊಂಗಲ್, ಶೇಂಗಾದ ಹೋಳಿಗೆ, ರವೆಹುಂಡಿ, ಸವಿಸರು. ನಂತರ ಆಹಾರ ತಯಾರಿಸುವ ವಿಧಾನ, ಬಳಕೆ ಮಾಡಿದ ಪದಾರ್ಥಗಳ ವಿವರ ಪಡೆದರು. ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಿದರು. ಗರ್ಭಿಣಿಯರಾದ ರೇಣುಕಾ, ಅಶ್ವಿನಿ, ಶೈಲಜಾ, ದೇವಮ್ಮ, ಶ್ರೀದೇವಿ, ಮಲ್ಲಮ್ಮ ಅವರಿಗೆ ಸೀಮಂತ, ಮಹಿಳಾಧಿಕಾರಿಗಳಿಗೆ ಅರಿಸಿನ, ಕುಂಕುಮ ಕಾರ್ಯಕ್ರಮ ನಡೆಯಿತು.
ಅಪೌಷ್ಟಿಕ ಮಕ್ಕಳಿಗೆ ₹ 2 ಸಾವಿರ ಮೊತ್ತದ ಔಷಧಿ ಕಿಟ್ ವಿತರಿಸಲಾಯಿತು. ಐಎಎಸ್ ಪ್ರೊಬೆಷನರಿ ಅಧಿಕಾರಿ ಅಶ್ವಿಜಾ, ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಭೀಮರಾಯ ಕುನ್ನೂರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು ಪವಾರ, ಅಂಗನವಾಡಿ ಮಹಿಳಾ ಮೇಲ್ವಿಚಾರಕಿ ರೇಣುಕಾ ಯಲಗೋಡ, ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಸಂಕ್ರಡಗಿ, ಕಂಪ್ಯೂಟರ್ ಆಪರೇಟರ್ ರವಿಕುಮಾರ, ಗ್ರಾಮದ ಸಾಬಣ್ಣ ಹಿರಿಬಾನರ, ಯಂಕಾರೆಡ್ಡಿ ಇದ್ದಿ, ಮಹಿಳೆಯರು, ಕಿಶೋರಿಯರು, ಮಕ್ಕಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.