ADVERTISEMENT

ಯಾದಗಿರಿ | ಸಾಂಕ್ರಾಮಿಕ ರೋಗ ತಡೆಗೆ ಬೇಕಿದೆ ಮುಂಜಾಗ್ರತೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 5:53 IST
Last Updated 31 ಜುಲೈ 2023, 5:53 IST
ಯಾದಗಿರಿ ನಗರದ ಕೋಲಿವಾಡದ ಏರಿಯಾದಲ್ಲಿ ಶೌಚಾಲಯದ ಪಕ್ಕದಲ್ಲಿ ಸಂಗ್ರಹವಾಗಿರುವ ಘನ ತ್ಯಾಜ್ಯ
ಯಾದಗಿರಿ ನಗರದ ಕೋಲಿವಾಡದ ಏರಿಯಾದಲ್ಲಿ ಶೌಚಾಲಯದ ಪಕ್ಕದಲ್ಲಿ ಸಂಗ್ರಹವಾಗಿರುವ ಘನ ತ್ಯಾಜ್ಯ   

ಬಿ.ಜಿ.ಪ್ರವೀಣಕುಮಾರ

ಯಾದಗಿರಿ: ಜಿಲ್ಲೆಯಲ್ಲಿ ಕಳೆದ 10–12 ದಿನಗಳಿಂದ ನಿರಂತರವಾಗಿ ಜಿಟಿಜಿಟಿ ಮಳೆಯಿಂದ ಹೈರಾಣಗೊಂಡಿದ್ದ ಜನತೆಗೆ ಈಗ ಅದರ ಮಗ್ಗಲು ಬದಲಾವಣೆಯಾಗಿದ್ದು, ಆರೋಗ್ಯದಲ್ಲಿ ತುಸು ಏರುಪೇರು ಕಾಣಿಸಿಕೊಂಡಿವೆ. ವಾತಾವರಣ ಬದಲಾವಣೆಯಿಂದ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿವೆ. ಆದರೆ, ಚಿಕೂನ್ ಗುನ್ಯಾ, ಮಲೇರಿಯಾ, ಡೆಂಗಿ ಪತ್ತೆಯಾಗಿಲ್ಲ ಎಂಬ ವೈದ್ಯರ ಹೇಳಿಕೆ ಕೊಂಚ ಸಮಧಾನ ತಂದಿದೆ.

ನಿರಂತರ ಮಳೆಯಿಂದ ಹಳ್ಳಿಗಳ ರಸ್ತೆಗಳು ಕೆಸರು ಗದ್ದೆಗಳಂತೆ ಆಗಿದ್ದು, ಅಲ್ಲಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು ಎನ್ನುವಂತಾಗಿದೆ.

ADVERTISEMENT

ಈ ಗುಂಡಿಗಳಲ್ಲಿನ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದ್ದು, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಆಡಳಿತಗಳು ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ನಗರ, ಪಟ್ಟಣದ ಕೆಲ ರಸ್ತೆಗಳಲ್ಲಿ ಆಳುದ್ದ ಗುಂಡಿಗಳು ಬಿದ್ದು, ನೀರು ನಿಂತು ಕಲುಷಿತಗೊಂಡಿವೆ. ಮಳೆ ನೀರಿನಿಂದ ಕೃತಕ ಹೊಂಡಗಳು ನಿರ್ಮಾಣವಾಗಿವೆ.

ಕಳೆದ ತಿಂಗಳು ಗುರುಮಠಕಲ್‌ ತಾಲ್ಲೂಕಿನ ಹಿಮಾಲ‍ಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ನೂರಾರು ಜನರು ವಾಂತಿ ಭೇದಿಯಿಂದ ಬಳಲಿದ್ದರು. ನಂತರ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಸಾವು ನೋವು ಸಂಭವಿಸಿರಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಕಾಲರಾ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗ ಬಾರದಂತೆ ಕ್ರಮ ಕೈಗೊಳ್ಳಬೇಕಿದೆ.

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ರೋಗ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಡೆಂಗಿ ಚಿಕೂನ್‌ ಪ್ರಕರಣಗಳು ಜುಲೈ ತಿಂಗಳಲ್ಲಿ ಪತ್ತೆಯಾಗಿಲ್ಲ
ಡಾ.ಎಂ.ಎ.ಸಾಜೀದ್‌ ಜಿಲ್ಲಾ ಸರ್ವೇಕ್ಷಣಾಧಿಕಾರಿ

‘ಮಳೆಯಿಂದ ನೀರು ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದೆ. ಇನ್ನೂ ಅದರ ಪರಿಣಾಮ 15 ದಿನದ ಬಳಿಕ ಬರುತ್ತದೆ. ಈಗಾಗಲೇ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಹಳ್ಳಿಯಲ್ಲಿ ಆರೋಗ್ಯ ರಕ್ಷಣೆಯ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸಿದೆ’ ಎನ್ನುತ್ತಾರೆ ಶಹಾಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ.

ಮಳೆಗಾಲಕ್ಕೆ ಸಂಬಂಧಿಸಿದಂತೆ ಎಲ್ಲ ಕಡೆ ಸ್ವಚ್ಛತೆಗೆ ಕ್ರಮಕೊಳ್ಳಲಾಗಿದೆ. ಅಂಬೇಡ್ಕರ್‌ ನಗರದಲ್ಲಿ ಈಚೆಗೆ ಕಾಲುವೆ ತೆರವು ಮಾಡಲಾಗಿದೆ.
ಸಂಗಮೇಶ ಉಪಾಸೆ ನಗರಸಭೆ ಪೌರಾಯುಕ್ತ

‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನೀರು ಹರಿದು ಬರುತ್ತಿರುವುದರಿಂದ ಗದ್ದೆಯಲ್ಲಿ ನೀರು ಸಂಗ್ರಹ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದೆ. ಸೊಳ್ಳೆಗಳ ಉತ್ಪತ್ತಿ ಶುರುವಾಗುತ್ತದೆ. ಆಗ ಕಾಯಿಲೆಗಳು ಬರುವುದು ಇಲ್ಲಿನ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ವಿಪರೀತ ಸೊಳ್ಳೆಗಳ ಹಾವಳಿ ತಡೆಗಟ್ಟಲು ಜಾನುವಾರುಗಳಿಗೂ ಸೊಳ್ಳೆ ಪರದೆ ಕಟ್ಟುತ್ತಾರೆ’ ಎನ್ನುತ್ತಾರೆ ರೈತ ಶಿವಪ್ಪ.

ಯಾದಗಿರಿ–ಗುರುಮಠಕಲ್‌ ತಾಲ್ಲೂಕಿನಲ್ಲಿ ಆರೋಗ್ಯ ಇಲಾಖೆಯಿಂದ ಜಾಗೃತಿ ಕೈಗೊಂಡು ಎಲ್ಲ ಔಷಧಿಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ. ಆಶಾ ಕಾರ್ಯಕರ್ತೆಯರ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ.
ಡಾ.ಹಣಮಂತರೆಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ಯಾದಗಿರಿ

‘ನೀರು ನಿಂತ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದರಿಂದಾಗಿ ಸೊಳ್ಳೆಗಳ ಹತೋಟಿಗೆ ಮತ್ತು ಸಾಂಕ್ರಾಮಿಕ ರೋಗಗಳು ಹರಡುದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ತಕ್ಷಣಗಳನ್ನು ಕಾರ್ಯಕ್ರಮ ರೂಪಿಸಿಕೊಳ್ಳಬೇಕಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಮುಖರಾದ ಮಹಾದೇವಿ ಬೇನಾಳಮಠ ಹೇಳಿದರು.

ಜಿಲ್ಲೆಯಲ್ಲಿ ಮಳೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಶುದ್ಧ ನೀರಿನ ಘಟಕಗಳು ಬಂದ್ ಆಗಿದ್ದು ಕಲುಷಿತ ನೀರು ಸೇವಿಸಿದರೆ ಅನಾರೋಗ್ಯ ಉಂಟಾಗಲಿದೆ. ಸ್ಥಳೀಯ ಸಂಸ್ಥೆಗಳು ಸ್ವಚ್ಛತೆ ಕಾಪಾಡಬೇಕು
ಬಿ.ಎನ್‌.ವಿಶ್ವನಾಥ, ಸಾಮಾಜಿಕ ಕಾರ್ಯಕರ್ತ

ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ

ಹುಣಸಗಿ: ತಾಲ್ಲೂಕಿನಲ್ಲಿ ಎರಡು ತಿಂಗಳ ಹಿಂದೆ ಕುಡಿಯುವ ನೀರಿನ ತೊಂದರೆಯಿಂದಾಗಿ ಹಾಗೂ ಕಲುಷಿತ ನೀರಿನ ಸೇವನೆಯಿಂದಾಗಿ ತಾಲ್ಲೂಕಿನ ಮಾರನಾಳ ಹಾಗೂ ಬೈಲಾಪುರ ತಾಂಡಾದಲ್ಲಿ ವಾಂತಿಭೇದಿ ಹಾಗೂ ಚಿಕೂನ್ ಗುನ್ಯಾದಂತಹ ಪ್ರಕರಣಗಳು ಕಂಡುಬಂದಿದ್ದವು. ತಕ್ಷಣವೇ ಆರೋಗ್ಯ ಇಲಾಖೆ ಎಚ್ಚರಗೊಂಡು ಸೂಕ್ತ ಕ್ರಮ ಕೈಗೊಂಡಿದ್ದರಿಂದಾಗಿ ಎರಡು ಗ್ರಾಮಗಳಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಈ ಕುರಿತಂತೆ ಹುಣಸಗಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಗ್ರಾಮೀಣ ಭಾಗದಲ್ಲಿ ಸುರಕ್ಷತೆ ಮತ್ತು ಸ್ವಚ್ಛತೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ‌.ಆರ್.ವಿ. ನಾಯಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಾಗರಿಕರು ತಮ್ಮ ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ವಾಹನಕ್ಕೆ ನೀಡಿ. ನೈರ್ಮಲ್ಯ ಕಾಪಾಡಲು ನಗರಸಭೆಯೊಂದಿಗೆ ಕೈಜೊಡಿಸಿ
ಶಿವಪುತ್ರ ನಡಿಗೇರಿ, ಸುರಪುರ ನಗರಸಭೆ ಆರೋಗ್ಯ ನಿರೀಕ್ಷಕ

‘ಗ್ರಾಮೀಣ ಭಾಗದಲ್ಲಿ ಜನರು ತಮ್ಮ ಮನೆಯ ಸುತ್ತಮುತ್ತಲು ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಕಲುಷಿತ ನೀರು ಶೇಖರಣೆಯಾಗದಂತೆ ನೀರು ಸಾರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳುವುದು ಅಗತ್ಯವಿದೆ ಹಾಗೂ ಮನೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನೀರು ಶೇಖರಣೆ ಮಾಡಿಕೊಳ್ಳುವುದು ಉತ್ತಮ’ ಎಂದು ಹೇಳಿದರು. ‘ಮಲೇರಿಯಾ ಚಿಕೂನ್ ಗುನ್ಯಾ ಟೈಫಾಯಿಡ್ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಯಲ್ಲಿ ಏನಾದರೂ ತೊಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವಂತೆ’ ಮನವಿ ಮಾಡಿದ್ದಾರೆ.

ಮಲೇರಿಯಾ ಹಾಗೂ ಇನ್ನಿತರ ಕಾಯಿಲೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಡಂಗೂರ ಸಾರಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿದೆ. ಸದ್ಯಕ್ಕೆ ಡೆಂಗಿ ಮಲೇರಿಯಾ ಕಾಯಿಲೆ ಬಗ್ಗೆ ವರದಿ ಬಂದಿಲ್ಲ
ಡಾ.ರಮೇಶ ಗುತ್ತೆದಾರ, ಶಹಾಪುರ ತಾಲ್ಲೂಕು ಆರೋಗ್ಯ ಅಧಿಕಾರಿ

ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ

ಸುರಪುರ: ಮಳೆಯಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ಪಂಚಾಯಿತಿ ಇಲಾಖೆ ಮತ್ತು ನಗರಸಭೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿವೆ. ಸುರಪುರ ನಗರ ಎತ್ತರದ ಪ್ರದೇಶದಲ್ಲಿದೆ. ಮಳೆ ನೀರು ಸಹಜವಾಗಿ ಕೆಳಗಿನ ಪ್ರದೇಶದಲ್ಲಿ ಹರಿದು ಹೋಗುತ್ತದೆ. ಹೀಗಾಗಿ ಮಳೆ ನಗರದ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ನಿರಂತರ ನೀರು ಪೂರೈಕೆಯ ಕಾಮಗಾರಿಗೆ ನಗರದ ರಸ್ತೆಗಳನ್ನು ಅಗೆಯಲಾಗಿದೆ. ಇನ್ನು ಅಲ್ಲಲ್ಲಿ ಗುಂಡಿಗಳನ್ನು ಮುಚ್ಚಿಲ್ಲ. ಮಳೆ ನೀರು ಇಲ್ಲಿ ಸಂಗ್ರಹವಾಗಿದೆ. ಇವು ರೋಗ ಹರಡುವ ತಾಣಗಳಾಗುತ್ತಿವೆ. ‘ನಗರದ ಎಲ್ಲ 31 ವಾರ್ಡ್‌ಗಳಲ್ಲಿ ಪ್ರತಿನಿತ್ಯ ವಾಹನಗಳು ತ್ಯಾಜ್ಯ ಸಂಗ್ರಹಿಸುತ್ತವೆ. ಪೌರಕಾರ್ಮಿಕರು ನಿತ್ಯವೂ ಸ್ವಚ್ಛತೆ ಕೈಗೊಳ್ಳುತ್ತಾರೆ. ಸೊಳ್ಳೆ ಉತ್ಪತ್ತಿಯಾಗದಂತೆ ದುರ್ನಾತ ಬರದಂತೆ ಮೆಲಾಥಿನ್ ಪುಡಿ ಸಿಂಪಡಿಸಲಾಗುತ್ತಿದೆ’ ಎನ್ನುತ್ತಾರೆ ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಶಿವಪುತ್ರ ನಡಿಗೇರಿ.

ಜನರು ತಮ್ಮ ಮನೆಯ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಿ. ಮನೆಯಲ್ಲಿ ಬಹುದಿನದಿಂದ ಸಂಗ್ರಹವಾಗಿರುವ ನೀರನ್ನು ಕೂಡಲೇ ತೆರವುಗೊಳಿಸಿ
ಡಾ. ರಾಜಾ ವೆಂಕಟನಾಯಕ, ಸುರಪುರ ತಾಲ್ಲೂಕು ಆರೋಗ್ಯಾಧಿಕಾರಿ

‘ಸಾಂಕ್ರಾಮಿಕ ರೋಗದ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳಲು ಈಚೆಗೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಇಂದ್ರಧನುಷ್‌ ಸಭೆಯಲ್ಲಿ ಪಂಚಾಯಿತಿ ನಗರಸಭೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಬಹುತೇಕ ಕಡೆ ಶುದ್ಧ ನೀರಿನ ಘಟಕಗಳಿವೆ. ಹೀಗಾಗಿ ಸಾಂಕ್ರಾಮಿಕ ರೋಗಗಳು ಕಂಡು ಬಂದಿಲ್ಲ. ಅಲ್ಲಲ್ಲಿ ಕೆಲವು ಕಂಡುಬಂದರೂ ಗುಣಮುಖರಾಗಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ತಿಳಿಸಿದರು. ‘ಕೆಲವು ಚರಂಡಿಗಳಲ್ಲಿ ತ್ಯಾಜ್ಯ ಹಾಗೇ ಇರುತ್ತದೆ. ಅಲ್ಲಲ್ಲಿ ಇರುವ ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ. ಸಾರ್ವಜನಿಕ ಶೌಚಾಲಯ ಮೂತ್ರಾಲಯದ ಹತ್ತಿರ ದುರ್ನಾತ ಇರುತ್ತದೆ’ ಎಂದು ನಾಗರಿಕರು ದೂರುತ್ತಾರೆ.

ಡೆಂಗಿ ಚಿಕೂನ್‌ಗುನ್ಯಾ ಮಾಹಿತಿ (ಜನವರಿಯಿಂದ ಜುಲೈ 26ರ ವರೆಗೆ)

ಡೆಂಗಿ;46 ಚಿಕೂನ್‌ಗುನ್ಯಾ;26

2021ರಲ್ಲಿ ಡೆಂಗಿ;142 / 2022ರಲ್ಲಿ ಡೆಂಗಿ;104

2021ರಲ್ಲಿ ಚಿಕೂನ್‌ಗುನ್ಯಾ;118 / 2022ರಲ್ಲಿ ಚಿಕೂನ್‌ಗುನ್ಯಾ;14

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

ಯಾದಗಿರಿ ಗಂಜ್‌ ಏರಿಯಾದ ಸರ್ಕಾರಿ ರೈಸ್ ಮೀಲ್ ಹಿಂಭಾಗದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಚರಂಡಿ ನೀರು ಅಲ್ಲಿಯೇ ಸಂಗ್ರಹವಾಗಿರುವುದು
ಯಾದಗಿರಿ ನಗರದ ಚಿರಂಜೀವಿ ನಗರದಲ್ಲಿ ಸರಿಯಾದ ಚರಂಡಿ ಇಲ್ಲದೆ ಸಂಗ್ರಹವಾಗಿರುವ ನೀರು
ಸುರಪುರ ನಗರದಲ್ಲಿ ಗುಂಡಿ ಮುಚ್ಚಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.