ADVERTISEMENT

ಗುರುಮಠಕಲ್: ಗಡಿಯಲ್ಲಿ ದೊಡ್ಡಮಠದ ‘ಕನ್ನಡ ಕಂಪು’

ವಚನ ಸಾಹಿತ್ಯದೊಂದಿಗೆ ಕನ್ನಡ ಭಾಷೆಯ ಪ್ರಚಾರಕ್ಕೆ ಆದ್ಯತೆ

ಎಂ.ಪಿ.ಚಪೆಟ್ಲಾ
Published 8 ನವೆಂಬರ್ 2024, 6:47 IST
Last Updated 8 ನವೆಂಬರ್ 2024, 6:47 IST
ಡ್ರೋನ್ ಕೆಮೆರಾದಲ್ಲಿ ಕಂಡ ಗುರುಮಠಕಲ್ ಪಟ್ಟಣದ ಖಾಸಾಮಠ.
ಡ್ರೋನ್ ಕೆಮೆರಾದಲ್ಲಿ ಕಂಡ ಗುರುಮಠಕಲ್ ಪಟ್ಟಣದ ಖಾಸಾಮಠ.   

ಗುರುಮಠಕಲ್: ನಿಜಾಮರ ಆಡಳಿತದಲ್ಲಿ ಉರ್ದು ಹಾಗೂ ತೆಲುಗು ಭಾಷೆಗಳ ಪ್ರಭಾವಳಿಯಲ್ಲೂ ‘ಕನ್ನಡದ ಕಂಪು’ ಪಸರಿಸಿದ ಹೆಗ್ಗಳಿಕೆ ಇಲ್ಲಿನ ದೊಡ್ಡಮಠ(ಖಾಸಾಮಠ)ಕ್ಕೆ ಸಲ್ಲುತ್ತದೆ. ದೊಡ್ಡಮಠ ನಿರ್ಮಾಣವಾಗಿ 6 ಶತಮಾನಗಳು ಕಳೆದಿವೆ.

ತೆಲಂಗಾಣದ ನಾರಾಯಣ ಪೇಟೆಯಲ್ಲೂ ಖಾಸಾಮಠದ ಶಾಖೆಯಿದೆ. ಜತೆಗೆ ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ಭಕ್ತರನ್ನು ಹೊಂದಿರುವ ಮಠವು ಬಸವತತ್ವ, ವಚನ ಸಾಹಿತ್ಯದ ಪ್ರಚಾರದಷ್ಟೇ ಮಹತ್ವವನ್ನು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಪ್ರಸರಣಕ್ಕೂ ನೀಡುತ್ತ ಬಂದಿದೆ. ತಾಲ್ಲೂಕಿನ ಕನ್ನಡ ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರಸ್ಥಾನವಾಗಿದೆ.

ಮಠದ 9 ಪೀಠಾಧ್ಯಕ್ಷರಾಗಿದ್ದ ಸಂಗಮೇಶ್ವರ ಶ್ರೀಗಳು 1999-2000ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಸ್ಥಾಪಿಸಿದ್ದ ಖಾಸಾಮಠದ ಶಿಕ್ಷಣ ಸಂಸ್ಥೆಗೆ 25ರ ಸಂಭ್ರಮ. ಮಠದಲ್ಲಿ ಬಡ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ, ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಸೇವೆಯನ್ನು ಮಠ ಮುಂದುವರಿಸಿದೆ.

ADVERTISEMENT

ಚಿತ್ರದುರ್ಗದ ಮುರುಘಾ ಪರಂಪರೆಯ ಶಾಂತವೀರ ಶ್ರೀಗಳು ಶ್ರೀಶೈಲಕ್ಕೆ ತೆರಳುವಾಗ, ಇಲ್ಲಿದ್ದ ಅರಣ್ಯದಲ್ಲಿಯೇ ತಪ್ಪಸ್ಸು ಆಚರಣೆಯಲ್ಲಿದ್ದರು. ಅವರನ್ನು ಹುಡುಕುತ್ತ ಬಂದ ಗುರುಗಳಾದ ಚಿತ್ರದುರ್ಗದ ಗುರುಪಾದ ಮುರುಘಾ ಶರಣರು, ತಮ್ಮ ಶಿಷ್ಯ ಕಟ್ಟಿದ ಮಠವನ್ನು ಕಂಡು ‘ಆಹಾ ಇದುವೇ ಖಾಸಾ (ಸ್ವಂತದ್ದು) ಮಠ’ ಎಂದು ಉದ್ಗರಿಸಿ, ನಂತರ ಇಲ್ಲಿಯೇ ಐಕ್ಯವಾಗುತ್ತಾರೆ. ನಂತರದಲ್ಲಿ ಖಾಸಾಮಠ ಎಂದು ಹೆಸರಾಯಿತು.

ಖಾಸಾಮಠವು ಶಿಲ್ಪಕಲೆ, ಸುರಳಿ ಚಿತ್ರಗಳು, ಉಬ್ಬು ಚಿತ್ರಗಳೂ ನೋಡುಗರ ಮನ ಸೆಳೆಯುತ್ತವೆ. ಮಠದ ಮಹಾದ್ವಾರದ ಮೇಲಿನ ಬಿಸಿಲು ಮಚ್ಚಿನ ಎರಡೂ ಬದಿಗಳಲ್ಲಿ ಏಕಶಿಲೆಯ ನಡುವೆ ತಿರುಗುವ ಕಲ್ಲಿನ ಚೆಂಡು ಉಳಿಯುವಂತೆ ಕೆತ್ತಿದ ಕಂಬಗಳು ಅತಿ ಸೂಕ್ಷ್ಮ ಕೆತ್ತನೆಯು ಶಿಲ್ಪಕಾರರ ಹೆಗ್ಗಳಿಕೆಯನ್ನು ಸಾರುವಂತಿದ್ದು, ನಿಜಾಮ್ ಆಡಳಿದ ಕಾಲದಲ್ಲಿ ಎಡಭಾಗದ ಶಿಲಾ ಕಂಬವನ್ನು ಕದ್ದೊಯ್ದಿದ್ದಾರೆ. ಅದು ಪ್ರಸ್ಥುತ ಅದು ಹೈದ್ರಾಬಾದ್ ನಗರದ ವಸ್ತುಸಂಗ್ರಹಾಲಯದಲ್ಲಿದೆ. ಬಲ ಬದಿಯದ್ದು ಮಾತ್ರ ಉಳಿದೆದೆ.

ಸಂಗಮೇಶ್ವರ ಶ್ರೀ ಪುಣ್ಯಸ್ಮರಣೆ ಇಂದು

ಗುರುಮಠಕಲ್: ಖಾಸಾಮಠದ ಪೂರ್ವ ಪೀಠಾಧಿಪತಿಗಳಾಗಿದ್ದ ಸಂಗಮೇಶ್ವರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ಶುಕ್ರವಾರ(ನ.8) ಬೆಳಿಗ್ಗೆ 9 ಗಂಟೆಯಿಂದ ಜರುಗಲಿದೆ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ತಿಳಿಸಿದರು.

ಪಟ್ಟಣದ ಖಾಸಾಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಪೀಠದ ಪೂರ್ವ ಪೀಠಾಧಿಪತಿ ಸಂಗಮೇಶ್ವರ ಶ್ರೀ ಪುಣ್ಯಸ್ಮರಣೆಯನ್ನು ‘ಗಡಿನಾಡ ಕನ್ನಡ ರಾಜ್ಯೋತ್ಸವ’ ಎಂದು ಆಚರಿಸಲಾಗುತ್ತಿತ್ತು. ಸದ್ಯ ಕೋವಿಡ್-19 ಲಾಕ್‌ಡೌನ್ ನಂತರ ಸರಳವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಸಂಗಮೇಶ್ವರ ಶ್ರೀಗಳ ಗದ್ದುಗೆಗೆ ಅಭಿಷೇಕ, 11 ಗಂಟೆಗೆ ಮಹಾಮಂಗಳಾರತಿ, ಚಿಗುರಳ್ಳಿಯ ಮರುಳಸಿದ್ದ ಶಂಕರ ಗುರುಪೀಠದ ಸಿದ್ಧಬಸವ ಕಬೀರಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಲಿದ್ದಾರೆ. ನಂತರ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಗುರುಮಠಕಲ್ ಪಟ್ಟಣದ ಖಾಸಾಮಠದ ರಾಜಾಂಗಣ.
ಖಾಸಾಮಠದ ಪೂರ್ವ ಪೀಠಾಧಿಪತಿಗಳಾಗಿದ್ದ (ಒಂಬತ್ತನೇ ಪೀಠಾಧಿಪತಿ) ಲಿಂ.ಸಂಗಮೇಶ್ವರ ಶ್ರೀಗಳು
ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಖಾಸಾಮಠದ ಪೀಠಾಧ್ಯಕ್ಷರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.