ಯಾದಗಿರಿ: ಇತರೆ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಬ್ರಾಹ್ಮಣರಿಗೆ ಶೇ10 ಮೀಸಲಾತಿ ಒದಗಿಸುತ್ತಿದ್ದು, ರಾಜ್ಯದಲ್ಲೂ ಜಾರಿಗೊಳಿಸಬೇಕೆಂದು ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾದ ಜಿಲ್ಲಾ ನಿರ್ದೇಶಕ ಸಂಜೀವರಾವ ಕುಲಕರ್ಣಿ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ಈ ಕುರಿತು ಸಾಂಕೇತಿಕವಾಗಿ ಧರಣಿ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಸಮುದಾಯವರಿಗೆ 10ರಷ್ಟು ಮೀಸಲಾತಿ ಒದಗಿಸಿ ಜಾರಿಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಇದನ್ನು ಜಾರಿಗೊಳಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ. ಇಡಬ್ಲ್ಯೂಎಸ್ ಪ್ರಮಾಣ ಪತ್ರ ವಿತರಣೆಯಲ್ಲೂ ಕೆಲವು ತಾಲ್ಲೂಕುಗಳ ತಹಶೀಲ್ದಾರರು ಹಿಂದೇಟು ಹಾಕುವ ಪ್ರಯುಕ್ತ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಹೀಗಾಗಿ ಈ ಸಮಸ್ಯೆಗಳನ್ನು ಪರಿಹರಿಸಿ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮಾಜವನ್ನು ಮೇಲೆತ್ತಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು
ಎಚ್ಚರಿಸಿದರು.
ಜಿಲ್ಲಾಧಿಕಾರಿ ಪರವಾಗಿ ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಮಾತನಾಡಿ, ಈ ಕೂಡಲೇ ಸರ್ಕಾರಕ್ಕೆ ಮನವಿ ಕಳುಹಿಸುವುದಾಗಿ ತಿಳಿಸಿದರು.
ಈ ವೇಳೆ ಪಂ.ನರಸಿಂಹಚಾರ್ಯ ಪುರಾಣಿಕ, ಶ್ರೀನಿವಾಸ ಚಂಡರಕಿ, ರವೀಂದ್ರ ಕುಲಕರ್ಣಿ, ವಾದಿರಾಜ ಲಿಂಗೇರಿ, ಲಕ್ಷ್ಮೀಕಾಂತ, ರಾಘವೇಂದ್ರ ಕಾಮನಟಗಿ, ನಂದಕುಮಾರ ಪಟ್ಟವಾರಿ, ಭೀಮರಾವ ಪರಸನಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.