ADVERTISEMENT

ಸಂಸತ್ ಭದ್ರತಾ ಲೋಪ: ಪಾಸ್ ಕೊಟ್ಟ ಸಂಸದರನ್ನು ಅಮಾನತು ಮಾಡಿ

ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 16:23 IST
Last Updated 22 ಡಿಸೆಂಬರ್ 2023, 16:23 IST
ಯಾದಗಿರಿ ನಗರದ ನೇತಾಜಿ ಸುಭಾಷ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು
ಯಾದಗಿರಿ ನಗರದ ನೇತಾಜಿ ಸುಭಾಷ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು   

ಯಾದಗಿರಿ: ಸಂಸತ್ ದಾಳಿ ನಡೆಸಿದವರಿಗೆ ಪಾಸ್ ಕೊಟ್ಟ ಸಂಸದರನ್ನು ಮೊದಲು ಅಮಾನತು ಮಾಡಿ ವಿಚಾರಣೆಗೆ ಒಳಪಡಿಸಬೇಕು. ಭದ್ರತಾ ಲೋಪದ ಹೊಣೆ ಹೊತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಆಗ್ರಹಿಸಿದರು.

ನಗರದ ನೇತಾಜಿ ಸುಭಾಷ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಂಸದರನ್ನು ಅಮಾನತು ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ದೇಶದ್ಯಾಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿದೆ. ಸಂಸತ್ ಭವನದಲ್ಲಿ ದಾಳಿ ವೇಳೆ ಭದ್ರತಾ ಲೋಪವನ್ನು ಮರೆಮಾಚುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿರೋಧ ಪಕ್ಷದ ಸಂಸದರ ಅಮಾನತು ಮಾಡಿದೆ. ಇದಕ್ಕೆ ಮೂಲ ಕಾರಣರಾದವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಂಸತ್ ಭವನವು ಅತಿ ದೊಡ್ಡ ಭದ್ರತಾ ಲೋಪಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಕೊಡಬೇಕಾದ ಕೇಂದ್ರ ಸರ್ಕಾರ ತಮ್ಮ ಅಸಮರ್ಥತೆ ಬಹಿರಂಗವಾಗಲಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳ 146 ಜನ ಸಂಸದರನ್ನು ಅಮಾನತು ಮಾಡುವ ಮುಖಾಂತರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳುವ ಬಿಜೆಪಿಗೆ ಅವರೇ ಮುಕ್ತ ಆಗುವ ಭೀತಿ ಶುರುವಾಗಿದೆ. ಹೀಗಾಗಿಯೇ ಅವರು ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ನೀಡದೆ ಸಂಸದರನ್ನು ಅಮಾನತು ಮಾಡಿದ್ದಾರೆ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ ಅನಪುರ, ಕೆಪಿಸಿಸಿ ಕಾರ್ಯದರ್ಶಿ ಮರಿಗೌಡ ಹುಲಕಲ್, ಬ್ಲಾಕ್ ಅಧ್ಯಕ್ಷ ಸುದರ್ಶನ ನಾಯಕ, ಮುಖಂಡರಾದ ಮಲ್ಲಣ್ಣ ದಾಸನಕೇರಿ, ಚಿದಾನಂದಪ್ಪ ಕಾಳೆಬೆಳಗುಂದಿ, ಭೀಮಣ್ಣ ಮೇಟಿ, ಮರೆಪ್ಪ ಬಿಳ್ಹಾರ, ವಿಶ್ವನಾಥ ನೀಲಹಳ್ಳಿ, ಮಂಜುಳಾ ಗೂಳಿ, ಚನ್ನಕೇಶಗೌಡ ಬಾಣತಿಹಾಳ, ಭೀಮರಾಯ ಠಾಣಗುಂದಿ, ವಿನೋದ್ ಪಾಟೀಲ, ಬಾಷುಮಿಯಾ ವಡಗೇರಾ, ನಿರಂಜನರೆಡ್ಡಿ ಶೆಟ್ಟಿಹಳ್ಳಿ, ಕೃಷ್ಣಾ ಚಪೆಟ್ಲಾ, ಸೈದಾಪುರ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿಜಯ ಕಂದಳ್ಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.