ಗುರುಮಠಕಲ್: ಪಟ್ಟಣದ ಕೆಎಚ್‌ಡಿಸಿ ಕಾಲೊನಿ ನಿವಾಸಿ ಟೇಲರ್ ವೃತ್ತಿಯಲ್ಲಿರುವ ಶಂಕರಲಿಂಗಪ್ಪ ಕಾಕೆ ಅವರ ಪುತ್ರ ಆನಂದ ಪಿಯು ವಿಜ್ಞಾನ ವಿಭಾಗದಲ್ಲಿ 590(ಶೇ 98.33) ಅಂಕ ಪಡೆದು ರಾಜ್ಯಕ್ಕೆ 9ನೇ ಸ್ಥಾನ ಪಡೆದಿದ್ದಾನೆ.
ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಆಕ್ಸ್‌ಫರ್ಡ್ ಪಾಟೀಲ್ಸ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ.
ತಮ್ಮ ಪುತ್ರ ರಾಜ್ಯ ಮಟ್ಟದಲ್ಲಿ 9ನೇ ಸ್ಥಾನದಲ್ಲಿ ಫಲಿತಾಂಶ ಸಾಧಿಸಿದ್ದು ತಾಯಿ ಭಾರತಿ ಕಾಕೆಯವರಲ್ಲಿ ಮಾತೇಬಾರದಷ್ಟು ಸಂತಸ ಮೂಡಿಸಿದೆ. ತಾಯಿಯ ಮೇಲೆ ಹೆಚ್ಚು ಪ್ರೀತಿ ಹೊಂದಿದ್ದ ಆನಂದ ಅಷ್ಟು ದೂರದ ಊರಲ್ಲಿ ಉಳಿಯುತ್ತಾನೆಂದು ಮನೆಯಲ್ಲೆ ನಂಬಿಕೆಯಿರಲಿಲ್ಲ.
‘ನನಪ್ಪನ ಇಡೀ ಜೀವನದ ಕಷ್ಟವನ್ನು ಒಮ್ಮೆಲೇ ತೀರಿಸುವ ಕೆಲಸ ಮಾಡಬೇಕು’ ಎನ್ನುವ ತುಡಿತವನ್ನು ನಾಚುತ್ತಲೇ ತಿಳಿಸಿದ.
ದ್ವಿತೀಯ ಪಿಯು ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ.98.33 ಅಂಕ ಪಡೆದು ರಾಜ್ಯಕ್ಕೆ 9ನೇ ಸ್ಥಾನ ಪಡೆದ ಆನಂದ ಕಾಕೆ ಅವರನ್ನು ಕಾಯಕಶ್ರೀ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಅರುಣಿ ಶನಿವಾರ ಸನ್ಮಾನಿಸಿದರು.
ಆನಂದ ಕಾಕೆ ಅವರ ತಂದೆ ಶಂಕರಲಿಂಗಪ್ಪ ಕಾಕೆ ಹಾಗೂ ಅವರ ಟೇಲರಿಂಗ್ ಅಂಗಡಿಯ ಸಿಬ್ಬಂದಿ ಸಿಹಿ ಹಂಚಿ ಸಂಭ್ರಮಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಲ್ಲೇಶಪ್ಪ, ನರಸಿಂಹಸ್ವಾಮಿ, ಶರಣಪ್ಪ, ರಮೇಶ ಉಪಸ್ಥಿತರಿದ್ದರು.
ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ಕನಿಸಿದೆ. ನಮ್ಮ ತಂದೆ-ತಾಯಿಯವರ ಕನಸಿನಂತೆ ಉನ್ನತ ಸ್ಥಾನದಲ್ಲಿರುವುದು ಮತ್ತು ನಾಗರಿಕ ಸೇವಾ ಕ್ಷೇತ್ರದಲ್ಲಿ ಬಡಜನ ಸೇವೆ ಮಾಡುವ ಅವಕಾಶಕ್ಕೆ ಕಾಯುತ್ತಿರುವೆ-ಆನಂದ ಕಾಕೆ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಸ್ಥಾನ ಪಡೆದ ವಿದ್ಯಾರ್ಥಿ
ಮಗನ ಸಾಧನೆಯಿಂದ ಹೆಮ್ಮೆಯೆನಿಸುತ್ತದೆ. ಚೆನ್ನಾಗಿ ಅಭ್ಯಾಸ ಮಾಡುವ ಕುರಿತು ಯಾವ ಅನುಮಾನವೂ ಇರಲಿಲ್ಲ. ಆದರೆ ರಾಜ್ಯಕ್ಕೇ 9ನೇ ಸ್ಥಾನ ಬಂದಿದ್ದು ನಮ್ಮ ಕುಟುಂಬಕ್ಕೆ ಹೊಸ ಚೈತನ್ಯ ನೀಡಿದಂತಾಗಿದೆ-ಶಂಕರಲಿಂಗಪ್ಪ ಕಾಕೆ ವಿದ್ಯಾರ್ಥಿ ಆನಂದನ ತಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.