ಶಹಾಪುರ: ವಕ್ಫ್ ಮಂಡಳಿಯ ಅಧೀನದಲ್ಲಿ ದರ್ಗಾ, ಮಸೀದಿ, ಈದ್ಗಾ, ಖಬರಸ್ತಾನ, ಕಜಾಯಿತ್, ಇನಾಮ್, ಆಶುರಖಾನ ಬರುತ್ತವೆ. ತಾಲ್ಲೂಕಿನ ಗೋಗಿ ಗ್ರಾಮದ ಚಂದಾಹುಸೇನಿ ದರ್ಗಾ, ಸಗರ ಸೋಫಿಸಾಬ್ ಸರಮಸ್ತ ದರ್ಗಾ, ಕಾಲಪೀರ ದರ್ಗಾ, ಅಕ್ಬರ್ ಹುಸೇನಿ ದರ್ಗಾ ಅಧೀನದಲ್ಲಿ ನೂರಾರು ಎಕರೆ ದರ್ಗಾದ ಒಡೆತನದಲ್ಲಿ ಇತ್ತು. ಆದರೆ ಈಗ ಅದೆಲ್ಲವು ಬೆಣ್ಣೆಯಂತೆ ಕರಗಿದೆ. ಹಲವಾರು ರೈತರು ವಕ್ಫ್ ಜಮೀನು ಖರೀದಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಕೃಷಿ ಜಮೀನಿನ ರೈತರಿಗೆ ನೋಟಿಸ್ ನೀಡಿರಲಿಲ್ಲ. ಅದು ಈಗ ಉರುಳು ಆಗಿ ಪರಿಣಮಿಸಿದೆ ಎನ್ನುತ್ತಾರೆ ವಕ್ಫ್ ಜಮೀನು ಖರೀದಿಸಿದ ರೈತರು.
ವಕ್ಫ್ ಆಸ್ತಿ ಸಮೀಕ್ಷೆ ನಡೆಸಿದ್ದ 1973-74 ರ ಗೆಜೆಟ್ ಅಧಿಸೂಚನೆಯು ರೈತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ವಕ್ಫ್ ಆಸ್ತಿಗಳು ಧಾರ್ಮಿಕ ಮತ್ತು ಆರ್ಥಿಕ ಉದ್ದೇಶಗಳಿಗೆ ಶಾಶ್ವತವಾಗಿ ಮುಡುಪಾಗಿರುವುದರಿಂದ ಅವುಗಳ ಮಾರಾಟ, ದಾನ, ವರ್ಗಾವಣೆ, ಅಡಮಾನ ಅಥವಾ ವಿನಿಮಯ ಮಾಡುವುದು ಸರ್ಕಾರದ ಸುತ್ತೋಲೆ (ಸಂ: ಡಿ/4ಬಿ/ಎಲ್ ಜಿಪಿ/2016) 2016 ಅಕ್ಟೋಬರ್ 28 ಪ್ರಕಾರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಕಂದಾಯ ದಾಖಲಾತಿಗಳ ಪಹಣಿ ಕಾಲಂ ನಂ.11ಲ್ಲಿ ವಕ್ಫ್ ಆಸ್ತಿ ಪರಭಾರೆ ನಿಷೇಧಿಸಿದೆ ಎಂದು ಅಂದಿನ ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಜಿಲ್ಲಾ ವಕ್ಫ್ ಅಧಿಕಾರಿ ನಿರ್ದೇಶದನಂತೆ ಪಹಣಿಯಲ್ಲಿ ನಮೂದಿಸಿದ ಬಗ್ಗೆ ಸಮಗ್ರ ದಾಖಲೆಗಳನ್ನು ಇದೇ ಅಕ್ಟೋಬರ್ 18ರಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಸಲ್ಲಿಸಿದ್ದಾರೆ. ಇದು ಹಳೆಯ ವಿಷಯ ಅನವಶ್ಯಕವಾಗಿ ಗೊಂದಲ ಉಂಟು ಮಾಡಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ವಕ್ಫ್ ಆಸ್ತಿ ಹೆಸರು ಪಹಣಿಯಲ್ಲಿ ನಮೂದಾಗಿದ್ದರೆ ಬಗ್ಗೆ ರೈತರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ತಾತ್ಕಾಲಿಕ ಪರಿಹಾರವನ್ನು ಪಡೆಯುತ್ತಿದ್ದಾರೆ. ಹೈಕೋರ್ಟ್ ನಿರ್ದೇಶದನಂತೆ ತಹಶೀಲ್ದಾರ್ ಅವರು ಪಹಣಿಯಲ್ಲಿ ಕಾಲಂ 11 ರಲ್ಲಿ ನಮೂದಿಸಿದ್ದನ್ನು ತೆಗೆದು ಹಾಕುವ ಪ್ರಕ್ರಿಯೆ ನಡೆದಿದೆ. ಹೈಕೋರ್ಟ್ ಸ್ಪಷ್ಟವಾದ ನಿರ್ದೇಶನ ನೀಡಿ ರೈತರಿಗೆ ಯಾವುದೇ ಮಾಹಿತಿ ಹಾಗೂ ನೋಟಿಸ್ ನೀಡದೆ ಪಹಣಿಯಲ್ಲಿ ನಮೂದಿಸಿದ್ದು ತಪ್ಪು. ಹೊಸದಾಗಿ ಅವರಿಗೆ ಅವಕಾಶ ನೀಡಿ ಮುಂದಿನ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದೆ ಎಂದು ವಕೀಲ ಯೂಸೂಫ್ ಸಿದ್ದಕಿ ಮಾಹಿತಿ ನೀಡಿದರು.
ಈಗಾಗಲೇ ಜಿಲ್ಲಾ ವಕ್ಫ್ ಅಧಿಕಾರಿಯ ನಿರ್ದೇಶದಂತೆ ತಾಲ್ಲೂಕಿನಲ್ಲಿ ಒಟ್ಟು 169 ವಕ್ಫ್ ಆಸ್ತಿಗಳಿದ್ದು ಅವುಗಳಲ್ಲಿ 119 ವಕ್ಫ್ ಆಸ್ತಿಯ ಸರ್ವೇ ನಂಬರ್‌ಗಳನ್ನು ಈಗಾಗಲೇ ಫ್ಲಾಗ್ ಆಫ್ ಮಾಡಲಾಗಿದೆ. ಪಹಣಿ ಕಾಲಂ 11ರಲ್ಲಿ ವಕ್ಫ್ ಆಸ್ತಿ ಪರಭಾರೆ ನಿಷೇಧಿಸಿದೆ ಎಂದು ಷರಾ ಕೂಡ ಸೇರಿಸಲಾಗಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಜಮೀನುದಾರರು ರಿಟ್ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ನಿರ್ದೇಶನದಂತೆ ತೆಗೆದು ಹಾಕಲಾಗುತ್ತಿದೆ.ಉಮಾಕಾಂತ ಹಳ್ಳೆ ತಹಶೀಲ್ದಾರ ಶಹಾಪುರ.
ವಕ್ಫ್ ಆಸ್ತಿ ಸೇರ್ಪಡೆಯು 2027-18ರ ಸಾಲಿನಿಂದ ಪ್ರಕ್ರಿಯೆ ಆರಂಭಗೊಂಡಿದೆ. ಈಗ ಅನವಶ್ಯಕವಾಗಿ ಗೊಂದಲ ಉಂಟಾಗಿದೆ. ತಾಲ್ಲೂಕಿನಲ್ಲಿ ಸುಮಾರು 3000 ಎಕರೆ ವಕ್ಫ್ ಆಸ್ತಿ ಇದೆ. ಇದರ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಾನೂನು ಪ್ರಕಾರ ಹಿಂಪಡೆಯುವ ಪ್ರಕ್ರಿಯೆ ನಡೆದಿದೆ.ಯೂಸೂಫ್ ಸಿದ್ದಕಿ ವಕೀಲ ಶಹಾಪುರ.
ಶಹಾಪುರ: ಇಸ್ಲಾಂ ಧರ್ಮದವರು ಹಾಗೂ ಸಾಮಾನ್ಯ ಜನರು ಸಾರ್ವಜನಿಕ ಕಲ್ಯಾಣಕ್ಕಾಗಿ ದೇವರ ಹೆಸರಿನಲ್ಲಿ ಬಿಟ್ಟುಕೊಟ್ಟ ಆಸ್ತಿಯೇ ವಕ್ಫ್ ಆಸ್ತಿಯಾಗಿದೆ.ಇದರ ಹಕ್ಕುದಾರನು ಭಗವಾನ (ದೇವರು) ಆಸ್ತಿಯಾಗಿದೆ. ಯಾವ ವ್ಯಕ್ತಿಗೆ ಸೇರಿದ ಆಸ್ತಿ ಅಲ್ಲ. ಮುಸ್ಲಿಮರು ಸೇರಿದಂತೆ ಹಿಂದೂ ಜನರ ಕಲ್ಯಾಣಕ್ಕಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ವಕ್ಫ್ ಬೋರ್ಡ್‌ನಿಂದ ಸಾಲ ಸೌಲಭ್ಯ ಸಿಗುತ್ತದೆ. ಸರ್ಕಾರ ತಿದ್ದುಪಡಿ ಮಾಡುವ ಅಗತ್ಯವೇ ಇಲ್ಲ ಎಂದು ಹಿರಿಯ ವಕೀಲ ಕೆ.ನಯ್ಯಿಮ್ ಅಹ್ಮದ ತಿಮ್ಮಾಪುರಿ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.