ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ನಿರ್ಗತಿಕರಿಗೆ ಊಟ ಕೊಟ್ಟ ಮಡಿವಾಳಪ್ಪ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:30 IST
Last Updated 31 ಡಿಸೆಂಬರ್ 2020, 19:30 IST
   

ಭಯವಿಲ್ಲದೇ ಕೆಲಸ ಮಾಡಿದ ಹೊನ್ನಮ್ಮ

ಯಾದಗಿರಿ: ಕೊರೊನಾ ತೀವ್ರವಾಗಿ ವ್ಯಾಪಿಸಿದ್ದ ವೇಳೆ ಜನರು ಸೋಂಕಿಗೆ ಹೆದರಿ ಮನೆ ಬಿಟ್ಟು ಹೊರಗೆ ಬರಲಾರದಂಥ ಸ್ಥಿತಿ ಇತ್ತು. ಅಂಥ ದಿನಗಳಲ್ಲಿ ನಗರಸಭೆಯ ಪೌರಕಾರ್ಮಿಕರಾದ ಹೊನ್ನಮ್ಮ ಮಲ್ಲಪ್ಪ ಅವರು ಮಾರುಕಟ್ಟೆ, ಕ್ವಾರಂಟೈನ್ ಕೇಂದ್ರ, ಕೋವಿಡ್ ಆಸ್ಪತ್ರೆ ಮತ್ತು ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಕಂಟೇನ್ಮಂಟ್‌ ವಲಯಗಳಲ್ಲಿ ನಿರಾತಂಕವಾಗಿ ಕಾರ್ಯನಿರ್ವಹಿಸಿದರು.

ನಸುಕಿನ 4 ರಿಂದ ಸಂಜೆ 5ರವರೆಗೆ ನಗರದ ವಿವಿಧ ಬೀದಿಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ, ಸ್ವಚ್ಛ ಪರಿಸರ ನಿರ್ಮಾಣಕ್ಕೆ ಶ್ರಮಿಸಿದರು. ನಗರಸಭೆ ವತಿಯಿಂದ ಒದಗಿಸಲಾದ ಶೂ, ಮಾಸ್ಕ್‌, ಕೈಗವಸು ಧರಿಸಿಕೊಂಡು ಕೆಲಸ ಮಾಡಿದ ಅವರು ಅಧಿಕಾರಿಗಳ ಸೂಚನೆ ಪಾಲಿಸಿದರು. ಲಾಕ್‌ಡೌನ್‌ ವೇಳೆ ಆಟೊರಿಕ್ಷಾಗಳ ಸಂಚಾರವೂ ಇರಲಿಲ್ಲ. ಆಗ ಎಲ್ಲಾ ಕಡೆಗಳಲ್ಲೂ ಅವರು ನಡೆದುಕೊಂಡೇ ಹೋದರು. ‌

ADVERTISEMENT

‘ನಗರವನ್ನು ಶುಚಿಯಾಗಿಡುವುದು ಮೊದಲ ಗುರಿ. ಕೋವಿಡ್‌ ಸಂದರ್ಭದಲ್ಲಿ ಅಂಜದೇ ಕೆಲಸ ಮಾಡಿದ ಖುಷಿ ಮತ್ತು ತೃಪ್ತಿ ನನಗಿದೆ. ಅಧಿಕಾರಿಗಳು ಧೈರ್ಯ ತುಂಬಿ ಕೆಲಸಕ್ಕೆ ಪ್ರೋತ್ಸಾಹಿಸಿದರು ಮತ್ತು ನೆರವಾದರು. ಸುರಕ್ಷತೆ ಹಿತದೃಷ್ಟಿಯಿಂದ ಮನೆಯಲ್ಲಿ ಕುಟುಂಬ ಸದಸ್ಯರಿಂದ ದೂರ ಉಳಿದಿದ್ದೆ. ಅತ್ಯಂತ ಕ್ಲಿಷ್ಟಕರ ದಿನಗಳಲ್ಲಿ ಕಾರ್ಯನಿರ್ವಹಿಸಿದ್ದು ಎಂದಿಗೂ ಮರೆಯಲಾಗದು’ ಎಂದು ಹೊನ್ನಮ್ಮ ಹೆಮ್ಮೆ ಪಡುತ್ತಾರೆ.

***

ನಿರ್ಗತಿಕರಿಗೆ ಊಟ ಕೊಟ್ಟ ಮಡಿವಾಳಪ್ಪ

ಯಾದಗಿರಿ: ನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್‌ ಮಡಿವಾಳಪ್ಪ ಅವರು ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸಿದ ದಿನಗಳಲ್ಲಿ ಕಾರ್ಯನಿರ್ವಹಿಸಿದರು.

ಕಂಟೇನ್ಮೆಂಟ್ ವಲಯ, ಕ್ವಾರಂಟೈನ್‌ ಕೇಂದ್ರಗಳಲ್ಲಿ ಭದ್ರತೆ ಒದಗಿಸಿದರು. ಮನೆ ಬಿಟ್ಟು ಬರಲು ಒಪ್ಪದ ಕೋವಿಡ್‌ ಪೀಡತರ ಮನವೊಲಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಲಾಕ್‌ಡೌನ್‌ ವೇಳೆ ಚೆಕ್‌ಪೋಸ್ಟ್‌ಗಳಲ್ಲೂ ಕರ್ತವ್ಯ ನಿರ್ವಹಿಸಿದರು. ಅನಗತ್ಯವಾಗಿ ತಿರುಗಾಡದಂತೆ ಜನರಿಗೆ ತಿಳಿವಳಿಕೆ ನೀಡಿದರು. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.

ಮಡಿವಾಳಪ್ಪ ಅವರ ಪತ್ನಿ ಲಾಕ್‌ಡೌನ್‌ ವೇಳೆ ಆರು ತಿಂಗಳ ಗರ್ಭಿಣಿ. ಮನೆಗೆಲಸದ ಜೊತೆಗೆ ಕರ್ತವ್ಯದ ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸಿದರು. ಮನೆಯಲ್ಲಿ ಒಂದೊಂದು ದಿನ ಒಂದೊಂದು ಬಗೆಯ ಆಹಾರ ತಯಾರಿಸಿ, ಪೊಟ್ಟಣ ಸಿದ್ಧಪಡಿಸಲು ನೆರವಾದರು. ನಗರದ ರಸ್ತೆ ಬದಿಯಲ್ಲಿದ್ದ ನಿರ್ಗತಿಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರು ಮತ್ತು ಆಸ್ಪತ್ರೆಯಲ್ಲಿ ಇದ್ದವರಿಗೆ ಊಟ ತಲುಪಿಸಿದರು. ಹಸಿವಿನಿಂದ ನರಳುತ್ತಿರುವವರಿಗೆ ನೆರವಾದರು. ರಾತ್ರಿ ವೇಳೆ ಆಸ್ಪತ್ರೆಗಳಲ್ಲಿ ಇದ್ದವರಿಗೆ ಊಟ ನೀಡಿದರು.

‘ಲಾಕ್‌ಡೌನ್‌ ಕಾರಣ ಬಹಳಷ್ಟು ಮಂದಿ ಆಹಾರವಿಲ್ಲದೇ ನರಳುತ್ತಿರುವುದು ನೋಡಲು ಆಗಲಿಲ್ಲ. ಮುಂಬೈನಿಂದ ಯರಗೋಳಕ್ಕೆ ಬಂದ ಕಾರ್ಮಿಕರಿಗೆ ಊಟ ಒದಗಿಸಿದೆ. ತುಂಬಾ ಸಂಕಷ್ಟದಲ್ಲಿದ್ದ ನಿರ್ಗತಿಕರಿಗೆ ಊಟ ನೀಡಿದ ಸಮಾಧಾನ ಇದೆ’ ಎನ್ನುತ್ತಾರೆ ಮಡಿವಾಳಪ್ಪ.

***

ಪ್ರಚಾರ ಬಯಸದ ಬಸವ ಸೇವಾ ಸಮಿತಿ

ಯಾದಗಿರಿ: ಸುರಪುರ ತಾಲ್ಲೂಕಿನ ಕಕ್ಕೇರಾದಲ್ಲಿ ಪ್ರಚಾರ ಬಯಸದೇ ಬಸವ ಸೇವಾ ಸಮಿತಿಯು ಮೂವರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

ಕೊರೊನಾ ಸೋಂಕು ಹರಡಿದ್ದ ಸಂದರ್ಭದಲ್ಲಿ ಸಮಿತಿ ಸದಸ್ಯರು ಸುತ್ತಮುತ್ತಲ ಪ್ರದೇಶದಲ್ಲಿ ನಿರ್ಗತಿಕರನ್ನು ಗುರುತಿಸಿ, ಅವರಿಗೆ ಆಹಾರದ ಕಿಟ್‌ ವಿತರಿಸಿದರು. ಬೇರೆ ಬೇರೆ ಸ್ವರೂಪದಲ್ಲಿ ನೆರವಾದರು. ಆದರೆ, ಎಲ್ಲಿಯೂ ಅವರು ತಮ್ಮ ಛಾಯಾಚಿತ್ರ ಕ್ಲಿಕ್ಕಿಸಿಕೊಳ್ಳಲಿಲ್ಲ. ಹೆಸರನ್ನೂ ಸಹ ಹೇಳಿಕೊಳ್ಳಲಿಲ್ಲ. ಸಂಕಷ್ಟದ ಕಾಲದಲ್ಲಿ ಜನರಿಗೆ ನೆರವಾಗುವುದು ಕರ್ತವ್ಯವೆಂದು ಭಾವಿಸಿದರು.

ಎರಡು ತಿಂಗಳು ಅವಧಿಯಲ್ಲಿ ಅಗತ್ಯವಿರುವ ಮನೆಗಳನ್ನು ಗುರುತಿಸಿ ಆಹಾರದ ಕಿಟ್‌ಗಳನ್ನು ತಲುಪಿಸಿದರು. ‘ಬಸವ ಸೇವಾ ಸಮಿತಿಯಿಂದ ಇವುಗಳನ್ನು ಒದಗಿಸಲಾಗುತ್ತಿದೆ’ ಎಂದು ಹೇಳಿದರೆ ಹೊರತು ಸಮಿತಿ ಸದಸ್ಯರು ತಮ್ಮ ಹೆಸರು ಹೇಳಿಕೊಡಲಿಲ್ಲ. ಅಕ್ಕಿ, ಬೇಳೆ, ಎಣ್ಣೆ, ಉಪ್ಪು ಮುಂತಾದವುಗಳನ್ನು ಆಹಾರದ ಕಿಟ್‌ ಒಳಗೊಂಡಿತ್ತು.

ಮುಖಂಡರಾದ ಶರಣ ಮಲ್ಲಿಕಾರ್ಜುನಸ್ವಾಮಿ ಜಾಲಿಬೆಂಚಿ, ನಂದಯ್ಯಸ್ವಾಮಿ, ಬಸವರಾಜಪ್ಪ , ಮಾಳಪ್ಪ, ಗುರು, ಬಸಯ್ಯಸ್ವಾಮಿ, ಮಲ್ಲು ಸ್ವಾಮಿ, ಶರಣು, ಪಿಂಟು, ಮಾಂತು ಸ್ವಾಮಿ, ಬಸಯ್ಯಸ್ವಾಮಿ ಹೊಸೂರು, ಸೋಮಶೇಖರ, ವಿರೇಶ, ಉಮೇಶ, ಪ್ರಭು ಹಡಪದ, ಗದ್ದೆಪ್ಪ ಅಂಬಿಗರ, ಪ್ರಕಾಶ, ನಾಗರಾಜ, ಜಗದೀಶ ಶಿವಪೂಜಿ, ಮಹಾಂತೇಶ ಹೊಗರಿ, ಮಂಜು ಹಿರೇಮಠ, ಬಸವ ರಾಜ, ಶರಣು ಗುರಿಕಾರ ಹೀಗೆ 50ಕ್ಕೂ ಹೆಚ್ಚು ಮಂದಿ ಸದಸ್ಯರು ಸಮಿತಿಯಲ್ಲಿ ಇದ್ದಾರೆ.

ವರದಿ: ಬಿ.ಜಿ.ಪ್ರವೀಣಕುಮಾರ, ಮಹಾಂತೇಶ ಹೊಗರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.