ADVERTISEMENT

ಶಹಾಪುರ | ಅಕಾಲಿಕ ಮಳೆ: ಮಾವು ಬೆಳೆಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 13 ಮೇ 2024, 5:05 IST
Last Updated 13 ಮೇ 2024, 5:05 IST
12ಎಸ್ಎಚ್ಪಿ 1: ಶಹಾಪುರ ಸಮೀಪದ ಮಾಚಗುಂಡಾಳ ಗ್ರಾಮದ ಬಳಿ ತೋಟದಲ್ಲಿ ಬೆಳೆದ ಮಾವು
12ಎಸ್ಎಚ್ಪಿ 1: ಶಹಾಪುರ ಸಮೀಪದ ಮಾಚಗುಂಡಾಳ ಗ್ರಾಮದ ಬಳಿ ತೋಟದಲ್ಲಿ ಬೆಳೆದ ಮಾವು   

ಶಹಾಪುರ: ಮುಂಗಾರು ಪೂರ್ವ ಮಳೆಯ ಅರ್ಭಟಕ್ಕಿಂತ ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಮಾವು ಬೆಳೆಗೆ ಕುತ್ತು ಬಂದಿದೆ.

‘ತೋಟದಲ್ಲಿ ಮಾವು ಬೆಳೆ ಹಾಕಿರುವೆ. ಒಂದಿಷ್ಟು ಕಾಯಿ ಕಿತ್ತಿದ್ದೇನೆ. ತುಂಬಾ ಹಸಿ ಇರುವುದರಿಂದ ಮರದಲ್ಲೇ ಬಿಟ್ಟಿರುವೆ. ಅಕಾಲಿಕವಾಗಿ ಬೀಸುತ್ತಿರುವ ಗಾಳಿಯ ಹೊಡೆತಕ್ಕೆ ಮಾವಿನ ಕಾಯಿ ನೆಲಕ್ಕೆ ಉದುರುತ್ತಿವೆ. ನೆಲಕ್ಕೆ ಬಿದ್ದ ಕಾಯಿ ತಂದು ಹಣ್ಣಿಗಾಗಿ ಮಂಡಿಯಲ್ಲಿ ಹಾಕಿದರೆ ಕಾಯಿ ಕೊಳೆಯುತ್ತವೆ. ಈಗ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ’ ಎಂದು ರೈತ ಮಹಾದೇವಪ್ಪ ಆಸಹಾಯಕತೆಯನ್ನು ವ್ಯಕ್ತಪಡಿಸಿದ.

‘ಬಿಸಿಲಿನ ಪ್ರಖರತೆ ಹೆಚ್ಚಾಗಿ ನಾಲ್ಕು ದಿನದಿಂದ ತುಸು ಉಷ್ಣಾಂಶ ಕಡಿಮೆಯಾಗಿ ಮೋಡ ಕವಿದ ವಾತಾವರಣ ಹಾಗೂ ಮಳೆಯ ಸಿಂಚನ ಆಗುತ್ತಿದೆ. ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಜೋರಾದ ಗಾಳಿ ಬೀಸುತ್ತಿರುವುದರಿಂದ ಮಾವು ನೆಲದ ಪಾಲು ಆಗುತ್ತಲಿದೆ. ಒಂದು ವಾರದ ತಡೆದರೆ ಸಾಕು ಕಾಯಿ ಕೀಳಬೇಕು ಎನ್ನುವಷ್ಟರಲ್ಲಿ ಗುಡುಗು ಸಿಡಿಲಿನ ಜತೆ ಜೋರಾದ ಗಾಳಿ ಮಾವಿನ ಬೆಳೆಗೆ ಸಾಕಷ್ಟು ಹಾನಿ ಉಂಟು ಮಾಡುತ್ತಿದೆ’ ಎನ್ನುತ್ತಾರೆ ರೈತ ಶಿವಪ್ಪ.

‘ಸದ್ಯ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಧಾರಣಿಯು ಪ್ರತಿ ಕ್ವಿಂಟಲ್‌ಗೆ ₹ 100 ಅಸುಪಾಲಿನಲ್ಲಿ ಇದೆ. ಮತ್ತೊಬ್ಬರ ಮಾವಿನ ತೋಟವನ್ನು ಲೀಜ್ ರೂಪದಲ್ಲಿ ಪಡೆದು ವ್ಯಾಪಾರ ಮಾಡಬೇಕು ಎನ್ನುವಷ್ಟರಲ್ಲಿ ಜೋರಾದ ಗಾಳಿಯು ಆತಂಕವನ್ನು ಹೆಚ್ಚಿಸಿದೆ’ ಎಂದು ಮಾವಿನ ವ್ಯಾಪಾರಿ ಮಾನಪ್ಪ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.