ಯಾದಗಿರಿ: ಕಳೆದ ಒಂದು ವಾರದಿಂದ ಸುರಿದ ಜಿಟಿಜಿಟಿ ಮಳೆಯಿಂದ ಗ್ರಾಮೀಣ ಪ್ರದೇಶ ಹಾಗೂ ನಗರದಲ್ಲಿ ಚರಂಡಿಗಳು ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಚರಂಡಿಗಳಲ್ಲಿ ತ್ಯಾಜ್ಯ ಶೇಖರಣೆಯಾಗಿ ಎಲ್ಲೆಡೆ ದುರ್ವಾಸನೆ ಬೀರುತ್ತಲಿವೆ.
ಗ್ರಾಮೀಣ ಪ್ರದೇಶದಲ್ಲಿ ಹೂಳು ತುಂಬಿದ ಚರಂಡಿ ಸ್ವಚ್ಛಗೊಳಿಸುವುದು ಕನಸ್ಸಿನ ಮಾತು ಆಗಿದೆ. ಇನ್ನೂ ಇಂಥ ಮಳೆಯಲ್ಲಿ ಎಲ್ಲಿಂದ ಸ್ವಚ್ಛತೆ ಕಾಣಬೇಕು. ಈಗಾಗಲೇ ತಗ್ಗು ಪ್ರದೇಶ ಹಾಗೂ ಚರಂಡಿಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ ಎಂದು ಗ್ರಾಮೀಣ ಪ್ರದೇಶದ ಜನತೆಆತಂಕ ವ್ಯಕ್ತಪಡಿಸಿದ್ದಾರೆ.
ಜಿಟಿಜಿಟಿ ಮಳೆಯಿಂದ ನಗರದ ರಸ್ತೆಗಳೆಲ್ಲ ಕೆಸರುಮಯವಾಗಿವೆ. ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ತ್ಯಾಜ್ಯವೂ ಹರಿದು ಬಂದು ಅದರಲ್ಲಿ ಸಂಗ್ರಹವಾಗಿದೆ. ಹಂದಿಗಳು ಅದರಲ್ಲಿ ಹೊರಳಾಡಿ ಇನ್ನಷ್ಟು ದುರ್ಗಂಧವಾಗಿಸಿವೆ. ಸೊಳ್ಳೆಗಳು ಹೆಚ್ಚಾಗಿವೆ.
ಹೀಗಾಗಿ ಕಳೆದ ಕೆಲವು ದಿನಗಳಿಂದ ಕೆಮ್ಮು, ನೆಗಡಿ ಜ್ವರದಂಥ ವೈರಲ್ ಕಾಯಿಲೆಗಳು ಕಂಡು ಬರುತ್ತಿವೆ. ನಗರ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಜುಲೈ ಆರಂಭದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಗ್ರಾಮಗಳಲ್ಲಿ ನೀರು ನಿಲ್ಲುತ್ತಿದ್ದು, ಸಾಂಕ್ರಾಮಿಕ ಹರಡುವ ಭೀತಿಯಿದೆ.
ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಟಿಎಚ್‌ಒ ಅವರ ಸಭೆಯಲ್ಲಿ ಮಳೆಯಿಂದ ಚರಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವುದು, ಬ್ಲೀಚಿಂಗ್ ಪೌಡರ್ ಸಿಂಪಡಣೆ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯಕ ಔಷಧಗಳ ದಾಸ್ತಾನು ಮಾಡಿಕೊಳ್ಳುವ ಕುರಿತು ಸೂಚಿಸಲಾಗಿತ್ತು. ಆದರೆ, ನಿರಂತರ ಮಳೆಯಿಂದಾಗಿ ಚರಂಡಿ ಸ್ವಚ್ಛತೆ ಕಾರ್ಯ ನಡೆಸಲಾಗಿಲ್ಲ. ಮಳೆಯಲ್ಲಿ ಚರಂಡಿ ಹೂಳು ತೆಗೆದರೂ ಮತ್ತೆ ಚರಂಡಿಯಲ್ಲಿಯೇ ಸೇರುತ್ತಿದೆ. ಆದ್ದರಿಂದ ಮಳೆ ನಿಂತ ತಕ್ಷಣಕ್ಕೆ ಚರಂಡಿ ಸ್ವಚ್ಛತೆ ಮಾಡಬಹುದು ಎಂದು ಪಂಚಾಯಿತಿ ಸಿಬ್ಬಂದಿಯೊಬ್ಬರು ತಿಳಿಸಿದರು.
ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದಿಂದ ಕಾಕಲವಾರ ಕ್ರಾಸ್ ವರೆಗಿನ ರಸ್ತೆಯಲ್ಲಿ ಮಳೆ ನೀರು ನಿಂತಿದ್ದು, ಜನತೆ ನೀರಿನಲ್ಲಿಯೇ ಸಂಚರಿಸಬೇಕಿದೆ. ರಸ್ತೆಯಲ್ಲಿ ನಿಲ್ಲುವ ನೀರಿನಲ್ಲಿ ಸೊಳ್ಳೆಗಳು ಹೆಚ್ಚುತ್ತಿದ್ದು, ದುರ್ನಾತ ಹರಡುತ್ತಿದೆ. ಸಂಬಂಧಿತರು ಸಮಸ್ಯೆ ಬಗೆಹರಿಸಬೇಕು ಎಂದು ನಿವೃತ್ತ ನೌಕರರೊಬ್ಬರು ಕೋರಿದರು.
ಯಾದಗಿರಿ ನಗರದ ವಾರ್ಡ್ ಸಂಖ್ಯೆ 11ರಲ್ಲಿ ರಸ್ತೆಯ ಮೇಲೆ ಚರಂಡಿ ನೀರು ನಿಂತ ಪರಿಣಾಮ ಸಾರ್ವಜನಿಕರು ಸಂಚರಿಸಲೂ ತೀವ್ರ ತೊಂದರೆಯಾಗಿದೆ. ರಾತ್ರಿಯಾದರೆ ಸೊಳ್ಳೆ ಕಾಟ ಹಾಗೂ ನಿಂತ ನೀರಿನಿಂದ ಕೆಟ್ಟ ವಾಸನೆ ಪಸರಿಸಿದೆ.
ನಗರದ ಆರ್‌ವಿ ವಿದ್ಯಾ ಸಂಸ್ಥೆಯ ಹಿಂಭಾಗದಲ್ಲಿ ಚರಂಡಿ ನೀರು ಸಂಗ್ರಹವಾಗಿ ಅಕ್ಕಪಕ್ಕದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಅಲ್ಲಿ ಗಾರ್ಡನ್ ಜಾಗವಿದ್ದು, ಅದರಲ್ಲಿ ಚರಂಡಿ ನೀರು ಸಂಗ್ರವಾಗಿದೆ. ನೀರು ಸಾಗಲು ಸೂಕ್ತ ಚರಂಡಿ ಮಾಡಬೇಕು. ಇದರ ಬಗ್ಗೆ ನಗರಸಭೆ ಅಧಿಕಾರಿಗಳು ಗಂಬೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳ ಆಗ್ರಹ. ಮಳೆ ಬಂದರೆ ಸಾಕು ಲಕ್ಷ್ಮೀ ನಗರದ ಅಂಭಾಭವಾನಿ ದೇವಸ್ಥಾನದ ಮುಂಭಾಗದಲ್ಲಿ ನೀರು ಸಂಗ್ರಹವಾಗುತ್ತದೆ. ಇದಕ್ಕೆ ಸೂಕ್ತ ಚರಂಡಿ ಮಾಡಿ ಸಮಸ್ಯೆ ಬಗ್ಗೆ ಹರಿಸಬೇಕು.
ನಗರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯವನ್ನು ಹೊಂದಿದ ಕೆಲ ವ್ಯಕ್ತಿಗಳು ನೇರವಾಗಿ ಚರಂಡಿಗೆ ಮಲಮೂತ್ರವನ್ನು ಹರಿಬಿಡುತ್ತಿರುವುದರಿಂದ ದುರ್ವಾಸನೆ ಹೆಚ್ಚಾಗಿದೆ. ಈಗ ಇನ್ನಷ್ಟು ಸಮಸ್ಯೆ ಉಲ್ಬಣಿಸಿದೆ. ನಗರಸಭೆ ಎಚ್ಚೆತ್ತುಕೊಂಡು ಹೂಳು ತುಂಬಿದ ಚರಂಡಿ ಸ್ವಚ್ಛ ಮಾಡಬೇಕು. ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ಕ್ರಮ ತೆಗೆದುಕೊಳ್ಳಬೇಕು. ಸಂಜೆ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎಂದು ನಗರದ ಜನತೆ ಮನವಿ ಮಾಡಿದ್ದಾರೆ.
ಬ್ಲೀಚಿಂಗ್ ಪೌಡರ್ ಸಿಂಪರಣೆ
ಸುರಪುರ ನಗರದಲ್ಲಿ ಆರ್‌ಒ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನಾಗರಿಕರು ಕುಡಿಯಲು ಈ ನೀರನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ವಾಂತಿ ಬೇಧಿ ಪ್ರಕರಣಗಳು ವರದಿಯಾಗುತ್ತಿಲ್ಲ.
‘ದಿನದ 24 ಗಂಟೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಇರಲು ಸೂಚಿಸಲಾಗಿದೆ. ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾಕಷ್ಟು ಔಷಧಿ ಸಂಗ್ರಹವಿದೆ. ಆತಂಕವೇನೂ ಇಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ತಿಳಿಸಿದರು.
‘ನಲ್ಲಿ ನೀರನ್ನು ಶುದ್ಧೀಕರಣಗೊಳಿಸಿ ಪೂರೈಸಲಾಗುತ್ತಿದೆ. ತಗ್ಗುಗಳನ್ನು ಮುಚ್ಚಿಸಲು ಸೂಚಿಸಲಾಗಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಚರಂಡಿ ಮತ್ತು ತೆರೆದ ಬಾವಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ’ ಎಂದು ಸುರಪುರ ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ತಿಳಿಸಿದರು.
‘ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಮಲೇರಿಯಾ, ಡೆಂಗಿ, ಕಾಲರಾ ಇನ್ನಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸ್ವಚ್ಛತೆ ಕಾಪಾಡಲು ತಿಳಿಸಲಾಗಿದೆ. ಪಂಚಾಯಿತಿ ಅಧಿಕಾರಿಗಳ ಪಾತ್ರ ಜಾಸ್ತಿ ಇದೆ. ನಾಯಿ, ಹಾವು, ಚೇಳು ಕಚ್ಚಿದರೆ ಎಲ್ಲದಕ್ಕೂ ಔಷಧಿ ಸಿದ್ಧಮಾಡಿಟ್ಟುಕೊಳ್ಳಲಾಗಿದೆ’ ಎನ್ನುತ್ತಾರೆ ಯಾದಗಿರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ.
‘ಯಾದಗಿರಿ–ಗುರುಮಠಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ 16 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಒಂದು ಸಮುದಾಯ ಆರೋಗ್ಯ ಕೇಂದ್ರ ಇದೆ. ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವಾ ಸರ್ವೆ ನಡೆಸುತ್ತಿದ್ದಾರೆ. ಜನರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎನ್ನುತ್ತಾರೆ ಅವರು.
ಒಟ್ಟಾರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡದಂತೆ ನಿಯಂತ್ರಣ ಮಾಡಲು ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆ ಕಾಪಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಫಾಗಿಂಗ್ ಮಾಡಲು ಸೂಚನೆ
‘ಶಹಾಪುರ ತಾಲ್ಲೂಕಿನಲ್ಲಿ 11 ಪ್ರಾಥಮಿಕ ಆರೋಗ್ಯ ಕೇಂದ್ರ, 55 ಉಪ ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ನಗರ ಆರೋಗ್ಯ ಕೇಂದ್ರ, ಎರಡು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆ ಇವೆ. ಮಳೆಗಾಲ ಆರಂಭವಾಗಿದ್ದರಿಂದ ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯಾ, ಅತಿಸಾರ ಆಗುವ ಸಾಧ್ಯತೆ ಹೆಚ್ಚು. ಗ್ರಾಮ ಪಂಚಾಯಿತಿಗಳಿಗೆ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡುವಂತೆ ಸೂಚಿಸಿದೆ. ತಗ್ಗು ಪ್ರದೇಶದಲ್ಲಿ ನೀರು ನಿಲುಗಡೆ ಆಗದಂತೆ ನೋಡಿಕೊಳ್ಳಬೇಕು. ನೀರನ್ನು ಕುದಿಸಿ ಆರಿಸಿ ಕುಡಿಯಬೇಕು ಎಂದು ಗ್ರಾಮೀಣ ಪ್ರದೇಶದಲ್ಲಿ ನಮ್ಮ ಆರೋಗ್ಯ ಇಲಾಖೆಯ ತಂಡವು ಜಾಗೃತಿ ಹಾಗೂ ಅರಿವು ಮೂಡಿಸುತ್ತಲಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ತಿಳಿಸಿದರು.
***
ಸುರಪುರ ಬಸ್ ನಿಲ್ದಾಣದ ಪಕ್ಕದ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದು, ನಾರುತ್ತಿದೆ. ಅದರ ಪಕ್ಕದಲ್ಲಿ ನನ್ನ ಅಂಗಡಿ ಇದ್ದು, ತರಕಾರಿ ಮಾರಲು ತೊಂದರೆಯಾಗುತ್ತಿದೆ.
–ಅವ್ವಮ್ಮ, ವ್ಯಾಪಾರಿ
***
ಜಿಟಿಜಿಟಿ ಮಳೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜನರು ಕಾಸಿ ಆರಿಸಿದ ನೀರು ಕುಡಿಯಬೇಕು. ತರಕಾರಿಯನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು.
–ಡಾ. ರಾಜಾ ವೆಂಕಪ್ಪನಾಯಕ, ಟಿಎಚ್ಒ
***
ನಗರದ ಸ್ವಚ್ಛತೆಗೆ ನಾಗರಿಕರ ಸಹಕಾರ ಮುಖ್ಯ. ನಮ್ಮ ಸಿಬ್ಬಂದಿ ತ್ಯಾಜ್ಯ ವಿಲೇವಾರಿ ಮಾಡಿದ ತಕ್ಷಣ ಮತ್ತೆ ಅಲ್ಲಿ ಕಸದ ರಾಶಿ ಇರುತ್ತದೆ. ಕಸದ ವಾಹನಕ್ಕೆ ತ್ಯಾಜ್ಯ ಹಾಕಿ.
–ಸುಜಾತಾ ಜೇವರ್ಗಿ, ನಗರಸಭೆ ಅಧ್ಯಕ್ಷೆ
***
ರಸ್ತೆ, ಚರಂಡಿ ಸ್ವಚ್ಛತೆಗೆ ನಗರಸಭೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಲ್ಲಿ ನೀರು ಶುದ್ಧವಾಗಿರುವುದಿಲ್ಲ. ಮಳೆಯಿಂದ ಎಲ್ಲೆಡೆ ಗಲೀಜು ತಾಂಡವವಾಡುತ್ತಿದೆ.
–ರಾಹುಲ ಹುಲಿಮನಿ, ಅಂಬೇಡ್ಕರ್ ಸೇನೆಯ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ
***
ಯಾದಗಿರಿ ನಗರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಲಾಗಿದೆ. ಬ್ಲೀಚಿಂಗ್ ಪೌಡರ್, ಕಾಯಿಸಿ ಸೋಸಿ ನೀರು ಕುಡಿಯಲು ಜನತೆಗೆ ಮನವಿ ಮಾಡಲಾಗಿದೆ. ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
–ಶರಣಪ್ಪ, ಪೌರಾಯುಕ್ತ, ಯಾದಗಿರಿ ನಗರಸಭೆ
***
ಕೋಟಗೇರಾ ವಾಡಾದಲ್ಲಿ ರಸ್ತೆ ಮೇಲೆ ನೀರು ನಿಂತು ದುರ್ನಾತ ಬೀರುತ್ತಿದೆ. ಈ ಕುರಿತು ಅನೇಕ ಬಾರಿ ನಗರಸಭೆ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ.
–ಯಲಮ್ಮ ಕೂಲೂರ್, ವಾರ್ಡ್ ನಿವಾಸಿ
***
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಯಿಂದ ಡೆಂಗಿ, ಮಲೇರಿಯಾ, ಅತಿಸಾರ ಆಗುವ ಸಾಧ್ಯತೆ ಇದೆ. ಆಯಾ ಗ್ರಾ.ಪಂ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ
–ಡಾ.ರಮೇಶ ಗುತ್ತೆದಾರ, ತಾಲ್ಲೂಕು ವೈದ್ಯಾಧಿಕಾರಿ ಶಹಾಪುರ
***
ಮುನ್ನಚ್ಚರಿಕೆ ಕ್ರಮವಾಗಿ ವೈದ್ಯಾಧಿಕಾರಿಗಳ ಸಭೆ ನಡೆಸಲಾಗಿದೆ. ಓವರ್ ಹೆಡ್ ಟ್ಯಾಂಕ್, ಪೈಪ್‌ಲೈನ್ ದುರಸ್ತಿಗೆ ಅಧಿಕಾರಿಗಳ ಮೂಲಕ ಪಿಡಿಒಗಳಿಗೆ ಪತ್ರ ಬರೆಯಲಾಗಿದೆ. ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ
–ಡಾ.ಹಣಮಂತರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ, ಯಾದಗಿರಿ
***
ಪೂರಕವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ,ಎಂ.ಪಿ.ಚಪೆಟ್ಲಾ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.