ADVERTISEMENT

ಸುರಪುರ | ಮುಂಗಾರು ಮಳೆ: ವನರಾಶಿಗೆ ಜೀವಕಳೆ

ಹಸಿರು ಹೊದ್ದಂತಿರುವ ಬೆಟ್ಟಗಳು, ಮಲೆನಾಡಿನ ಅನುಭವ

ಅಶೋಕ ಸಾಲವಾಡಗಿ
Published 16 ಜೂನ್ 2024, 7:13 IST
Last Updated 16 ಜೂನ್ 2024, 7:13 IST
ಸುರಪುರದ ಯಲ್ಲಪ್ಪಬಾವಿ ತಪ್ಪಲು ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿರುವ ವನ ಸಂಪತ್ತು
ಸುರಪುರದ ಯಲ್ಲಪ್ಪಬಾವಿ ತಪ್ಪಲು ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿರುವ ವನ ಸಂಪತ್ತು   

ಸುರಪುರ: ಮುಂಗಾರು ಪೂರ್ವದಿಂದಲೇ ಉತ್ತಮ ವರ್ಷಧಾರೆ ಸುರಿಯುತ್ತಿದ್ದು, ನಗರದ ತಪ್ಪಲು ಪ್ರದೇಶ ಹಸಿರು ಹೊದ್ದು ಕಂಗೊಳಿಸುತ್ತಿದೆ. ಬೆಟ್ಟ–ಗುಡ್ಡಗಳು ಕಾಣಿಸದಂತೆ ಮರ–ಗಿಡಗಳು ಸಮೃದ್ಧವಾಗಿ ಬೆಳೆದು ನಿಂತಿವೆ.

ಕಳೆದ ವರ್ಷದ ಬರಗಾಲದಿಂದಾಗಿ ನಗರದ ಸುತ್ತಲಿರುವ ಬೆಟ್ಟ–ಗುಡ್ಡಗಳು ಭಣ ಗುಟ್ಟುತ್ತಿದ್ದವು. ತಪ್ಪಲು ಪ್ರದೇಶದಲ್ಲಿದ್ದ ಸಸ್ಯರಾಶಿ ಒಣಗಿ ಜೀವಕಳ ಇಲ್ಲದಂತಾಗಿತ್ತು. ಆದರೆ ಈ ಬಾರಿಯ ಮುಂಗಾರು ಚುರುಕಾಗಿದ್ದು, ತಪ್ಪಲು ಪ್ರದೇಶಕ್ಕೆ ಜೀವಕಳೆ ನೀಡಿದೆ. ಹೊಂಗೆ, ಬೇವು, ಅರಳಿ, ಜಾಲಿ, ಆಲ, ನೀಲಗಿರಿ, ಸೀತಾಫಲ ಸೇರಿದಂತೆ ವಿವಿಧ ಪ್ರಭೇದದ ಮರ–ಗಿಡಗಳು ನಳನಳಿಸುತ್ತಿವೆ.

ಯಲ್ಲಪ್ಪನ ಬಾವಿಗೆ ನೀರು ವಿಫುಲವಾಗಿ ಹರಿದು ಬರುತ್ತಿದೆ. ಬಾವಿಯ ಹಿಂದಿನ ಎರಡು ಕೆರೆಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಂಡಿದೆ. ಅಲ್ಲಲ್ಲಿ ಇರುವ ತೆಗ್ಗು ಪ್ರದೇಶಗಳು ನೀರಿನಿಂದ ತುಂಬಿವೆ. ಎತ್ತರದ ಪ್ರದೇಶಗಳಲ್ಲಿ ಅಲ್ಲಲ್ಲಿ ತಾತ್ಕಾಲಿಕ ತೊರೆಗಳ ನಿನಾದವು ಮುದ ನೀಡುತ್ತಿದೆ. ಸಂಪೂರ್ಣ ಪ್ರದೇಶ ಆಹ್ಲಾದರಕರವಾಗಿದ್ದು ಮಲೆನಾಡಿನ ಅನುಭೂತಿ ನೀಡುತ್ತಿದೆ.

ADVERTISEMENT

ಬಾನಾಡಿಗಳಿಲ್ಲದೆ ಕಳೆಗುಂದಿದ್ದ ಈ ಪ್ರದೇಶ ಮತ್ತೆ ಕಣ್ಣುಗಳಿಗೆ ಇಂಪು ನೀಡುತ್ತಿದೆ. ಹಕ್ಕಿಗಳ ಕಲರವ, ನವಿಲುಗಳ ನರ್ತನ, ಮುಂಗುಸಿ, ಅಳಿಲು, ಮೊಲಗಳ ಓಡಾಟ ಕಣ್ಣಿಗೆ ಹಬ್ಬ ಉಂಟು ಮಾಡುತ್ತಿದೆ. ಬೆಳವ, ಗೊರವಂಕ, ಕೌಜುಗ, ಬುರಲಿ, ಗುಬ್ಬಿ, ಕಾಗೆ, ಕಿಂಗ್‍ಫಿಶರ್ ಸೇರಿದಂತೆ ವಿವಿಧ ಪ್ರಭೇದದ ಪಕ್ಷಿಗಳು ಎಲ್ಲೆಡೆ ಕಂಡು ಬರುತ್ತಿವೆ. ಹಕ್ಕಿಗಳ ಸಂತಾನೋತ್ಪತ್ತಿಗೆ ಪರಿಸರ ಪೂರಕವಾಗುತ್ತಿದೆ. ಕೆಲ ವಾಯುವಿಹಾರಿಗಳು ನಿತ್ಯವೂ ಪಕ್ಷಿಗಳಿಗೆ ಕಾಳು, ಕಡಿ, ಬ್ರೆಡ್, ಬಿಸ್ಕತ್ ಇತರ ಆಹಾರ ಹಾಕುತ್ತಿದ್ದಾರೆ.

ವಾಯು ವಿಹಾರಿಗಳಿಗೆ ಅತ್ಯಂತ ಸೂಕ್ತವಾದ ತಾಣವಾಗುತ್ತಿದೆ. ಶುದ್ಧ ಗಾಳಿ, ಆಹ್ಲಾದಕರ ವಾತಾವರಣ, ತಂಗಾಳಿ, ಪಕ್ಷಿಗಳ ಇಂಚರ, ತೂಗಾಡುವ ಗಿಡಮರಗಳು ಕಣ್ಮನ ಸೆಳೆಯುತ್ತಿವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸುತ್ತಮುತ್ತ, ಟೇಲರ್ ಮಂಜಿಲ್, ಫಾಲನ್ ಬಂಗಲೆ, ಸಾರ್ವಜನಿಕ ಆಸ್ಪತ್ರೆ ಇತರ ಸ್ಥಳಗಳಲ್ಲಿ ಉಂಟಾಗಿರುವ ಹಚ್ಚ ಹಸಿರು ಮೈಮನ ಸೆಳೆಯುತ್ತದೆ. ಉಪ ಕಾರಾಗೃಹ ರಸ್ತೆಯ ಎರಡು ಬದಿ ಗಿಡಗಳು ಮನಸೆಳೆಯುವಂತಿವೆ.


ಅನೈತಿಕ ತಾಣ: ಪ್ರದೇಶದಲ್ಲಿ ಸೂಕ್ತ ಭದ್ರತೆಯಿಲ್ಲ. ಹೀಗಾಗಿ ಪುಂಡಪೋಕರಿಗಳಿಗೆ ಪ್ರಶಸ್ತ ತಾಣವಾದಂತಾಗಿದೆ. ಮಧ್ಯಾಹ್ನ, ರಾತ್ರಿ ಹೊತ್ತು ಕುಡಿದು, ತಿಂದು ಬಾಟಲಿ, ತಾಜ್ಯವನ್ನು ಎಸೆದು ಪ್ರದೇಶವನ್ನು ಮಲೀನಗೊಳಿಸುತ್ತಿದ್ದಾರೆ. ಬಿಇಒ ಕಚೇರಿಯಿಂದ ಫಾಲನ್ ಬಂಗಲೆ ಮತ್ತು ಟೇಲರ್ ಮಂಜಿಲ್‍ಗೆ ಹೋಗುವ ರಸ್ತೆ ಹದಗೆಟ್ಟಿದೆ. ರಸ್ತೆ ಅಭಿವೃದ್ಧಿ ಪಡಿಸಬೇಕು, ಪುಂಡರ ಹಾವಳಿ ತಪ್ಪಿಸಬೇಕು. ಫಾಲನ್ ಬಂಗಲೆವರೆಗೆ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಸುರಪುರದ ಉಪಕಾರಾಗೃಹ ರಸ್ತೆಯ ಇಕ್ಕೆಲಗಳಲ್ಲಿ ಮರ–ಗಿಡಗಳು
ಕನಕಪ್ಪ ವಾಗಣಗೇರಿ

ಮಳೆಯಿಂದಾಗಿ ವಾತಾವರಣ ಹಸಿರಿನಿಂದ ಕಂಗೊಳಿಸುತ್ತಿದ್ದು ಕವಿಗಳಿಗೆ ಹೇಳಿ ಮಾಡಿಸಿದಂತಿದೆ. ನಿಸರ್ಗದ ಮೇಲೆ ಸಾಹಿತ್ಯ ಕವಿತೆ ರಚಿಸುವವರಿಗೆ ಹೆಚ್ಚಿನ ವಿಚಾರಗಳು ಹೊರಹೊಮ್ಮುತ್ತವೆ. ಜತೆಗೆ ತಾಣವನ್ನು ಇನ್ನಷ್ಟು ಸಮೃದ್ಧಗೊಳಿಸಿ ರಕ್ಷಣೆ ಮಾಡಬೇಕಿದೆ ಕನಕಪ್ಪ ವಾಗಣಗೇರಿ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.