ADVERTISEMENT

ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 14:39 IST
Last Updated 31 ಅಕ್ಟೋಬರ್ 2023, 14:39 IST
   

ಸುರಪುರ (ಯಾದಗಿರಿ ಜಿಲ್ಲೆ): ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘ 82 ವರ್ಷಗಳಿಂದ ಕನ್ನಡಮ್ಮನ ಸೇವೆ ಮಾಡುತ್ತಿದೆ. ರಾಜ್ಯದ ಹಳೆಯ ಸಂಘಗಳಲ್ಲಿ ಒಂದಾಗಿದ್ದು, ಕರ್ನಾಟಕ ಏಕೀಕರಣದಲ್ಲೂ ತನ್ನ ಪಾತ್ರ ವಹಿಸಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಈ ಸಂಘಕ್ಕೆ ಲಭಿಸಿದೆ.

ಅದು 1942ರ ಸಮಯ. ಈ ಭಾಗ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಉರ್ದು ಭಾಷೆ ಕಡ್ಡಾಯವಾಗಿತ್ತು. ಕನ್ನಡ ಭಾಷೆಯ ಚಟುವಟಿಕೆಗಳನ್ನು ನಡೆಸಿದರೆ ಶಿಕ್ಷೆ ವಿಧಿಸಲಾಗುತ್ತಿತ್ತು. ಇಂಥ ಸಂದಿಗ್ಧ ಸಂದರ್ಭದಲ್ಲಿ ಕನ್ನಡ ಅಭಿಮಾನ ಹೊಂದಿದ್ದ ಸಮಾನ ಮನಸ್ಕ ಯುವಕರು ಈ ಸಂಘವನ್ನು ಹುಟ್ಟು ಹಾಕಿದರು. ವಿರೋಧದ ಮಧ್ಯೆಯೂ ಕನ್ನಡ ಪರ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಈ ಭಾಗ ನಿಜಾಮನಿಂದ ಮುಕ್ತಿ ಪಡೆಯುವವರೆಗೂ ಕದ್ದು ಮುಚ್ಚಿ ಕನ್ನಡ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಕನ್ನಡಾಭಿಮಾನ ಮೆರೆದರು. ಈ ಸುದ್ದಿ ನಿಜಾಮನ ಅಧಿಕಾರಿಗಳಿಗೆ ಗೊತ್ತಾಯಿತು. ಯುವಕರು ಹಲವು ಬಾರಿ ಅಧಿಕಾರಿಗಳ ಕೈಗೆ ಸಿಗದೇ ಭೂಗತರಾಗಿದ್ದರು.

ADVERTISEMENT

ವಿಮೋಚನೆಯ ನಂತರ ಬಹಿರಂಗವಾಗಿ ಮತ್ತು ಹೆಚ್ಚು ಕ್ರಿಯಾಶೀಲರಾಗಿ ಪ್ರತಿ ವರ್ಷ ದಸರಾ ಸಮಯದಲ್ಲಿ ನಾಡಹಬ್ಬ ಆಚರಿಸತೊಡಗಿದರು. 5 ದಿನ ನಡೆಯುವ ಈ ಹಬ್ಬದಲ್ಲಿ ಹೆಸರಾಂತ ಸಾಹಿತಿಗಳು, ಅಧಿಕಾರಿಗಳು, ದಿಗ್ಗಜರು, ನಟರು ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಇದುವರೆಗೂ ಭಾಗವಹಿಸಿದ, ಸಂಘಕ್ಕೆ ಭೇಟಿ ನೀಡಿದ ಎಲ್ಲರ ಹಸ್ತಾಕ್ಷರ ಮತ್ತು ಅಭಿಪ್ರಾಯ ಸಂಗ್ರಹದ ಪುಸ್ತಕ ಇಲ್ಲಿರುವುದು ದಾಖಲೆ. ನಾಡಹಬ್ಬದ ಜೊತೆಗೆ ವಿಚಾರ ಸಂಕಿರಣ, ಕವಿಗೋಷ್ಠಿ, ರಾಷ್ಟ್ರೀಯ ಹಬ್ಬಗಳು, ವಿವಿಧ ದಿನಾಚರಣೆಗಳನ್ನು ಆಚರಿಸುತ್ತಾ ಬರಲಾಗಿದೆ. ಸಾಧಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಗುತ್ತಿದೆ.

ಉತ್ತಮ ಗ್ರಂಥಾಲಯ ಹೊಂದಿದೆ. ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ. ನಿಯತಕಾಲಿಕೆಗಳು ಬರುತ್ತವೆ. ಸಂಘದಿಂದ ಹಲವು ಪುಸ್ತಕಗಳನ್ನು ಪ್ರಕಟಿಸಲಾಗಿದೆ.

ಕರ್ನಾಟಕ ಏಕೀಕರಣ ಮತ್ತು ವಿ.ಕೆ.ಗೋಕಾಕ ವರದಿ ಜಾರಿಗೊಳಿಸಲು ನಡೆದ ಚಳವಳಿಗಳಲ್ಲಿ ಸಂಘದ ಸದಸ್ಯರು ಭಾಗವಹಿಸಿದ್ದಾರೆ.

ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದ ಎಂ.ಆರ್. ಬುದ್ಧಿವಂತಶೆಟ್ಟಿ ವರ್ತಕರಾಗಿದ್ದರು. ತಮ್ಮ ಇಡೀ ಜೀವನವನ್ನು ಸಂಘದ ಅಭಿವೃದ್ಧಿಗೆ, ಚಟುವಟಿಕೆಗಳಿಗೆ ಮೀಸಲಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.