ADVERTISEMENT

ಯಾದಗಿರಿ: 4 ತಿಂಗಳಿಂದ ವಿತರಕರಿಗೆ ಬಾರದ ಕಮಿಷನ್‌

ಜಿಲ್ಲೆಯಲ್ಲಿವೆ 401 ಪಡಿತರ ವಿತರಣೆ ನ್ಯಾಯ ಬೆಲೆ ಅಂಗಡಿಗಳು

ಬಿ.ಜಿ.ಪ್ರವೀಣಕುಮಾರ
Published 19 ಜುಲೈ 2024, 5:24 IST
Last Updated 19 ಜುಲೈ 2024, 5:24 IST
ಯಾದಗಿರಿ ನಗರದ ಬಸವೇಶ್ವರ ನಗರದಲ್ಲಿರುವ ನ್ಯಾಯ ಬೆಲೆ ಅಂಗಡಿ
ಯಾದಗಿರಿ ನಗರದ ಬಸವೇಶ್ವರ ನಗರದಲ್ಲಿರುವ ನ್ಯಾಯ ಬೆಲೆ ಅಂಗಡಿ   

ಯಾದಗಿರಿ: ಜಿಲ್ಲೆಯಲ್ಲಿರುವ 401 ಪಡಿತರ ವಿತರಕರಿಗೆ ಪ್ರತಿ ಕ್ವಿಂಟಲ್‌ಗೆ ವಿತರಿಸುವ ಕಮಿಷನ್‌ ಹಣ ಕಳೆದ ನಾಲ್ಕು ತಿಂಗಳಿಂದ ಬಂದಿಲ್ಲ. ಇದರಿಂದ ವಿತರಕರು ಪಡಿತರ ಅಂಗಡಿಗಳ ಬಾಡಿಗೆ ಕಟ್ಟಲು ಪರದಾಡುತ್ತಿದ್ದಾರೆ.

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿಯಲ್ಲಿ ಜಿಲ್ಲೆಯಾದ್ಯಂತ ನ್ಯಾಯಬೆಲೆ ಅಂಗಡಿ ಮೂಲಕ ಪ್ರತಿ ತಿಂಗಳು ಆಹಾರ ಧಾನ್ಯ ವಿತರಿಸುತ್ತಿರುವ ವಿತರಕರು ಕಮಿಷನ್‌ ಇಲ್ಲದೇ ಕೆಲಸ ಮಾಡುವಂತಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಜಿಲ್ಲೆಯ ಎಎವೈ(ಅಂತ್ಯೋದಯ ಅನ್ನ ಯೋಜನೆ) 29,212 ಪಡಿತರ ಚೀಟಿಗಳು, 1,13,510 ಫಲಾನುಭವಿಗಳಿದ್ದಾರೆ. 2,40,319 ಬಿಪಿಎಲ್‌ ಕಾರ್ಡ್‌ಗಳಿದ್ದು, 8,86,125 ಫಲಾನುಭವಿಗಳಿದ್ದಾರೆ. 17,618 ಎಪಿಎಲ್‌ ಕಾರ್ಡ್‌ಗಳಿದ್ದು, 58,276 ಫಲಾನುಭವಿಗಳಿದ್ದಾರೆ.

ADVERTISEMENT

ಎಎವೈನ ಪ್ರತಿ ಕಾರ್ಡ್‌ಗೆ 21 ಕೆ.ಜಿ. ಅಕ್ಕಿ ಮತ್ತು 14 ಕೆ.ಜಿ. ಜೋಳ ವಿತರಿಸಲಾಗುತ್ತಿದೆ. ಬಿಪಿಎಲ್‌ ಕಾರ್ಡ್‌ಗಳಿಗೆ 3 ಕೆ.ಜಿ. ಎನ್‌ಎಫ್‌ಎಸ್‌ಎ ಅಕ್ಕಿ ಮತ್ತು 2 ಕೆ.ಜಿ. ಜೋಳ ಉಚಿತವಾಗಿ ವಿತರಿಸಲಾಗುತ್ತದೆ.

‘ಪ್ರತಿ ಕ್ವಿಂಟಲ್‌ ಪಡಿತರ ಧಾನ್ಯ ವಿತರಿಸಿದರೆ ಕಮಿಷನ್ ರೂಪದಲ್ಲಿ ₹124ರಿಂದ ₹150 ತನಕ ಸಿಗುತ್ತದೆ. ಆದರೆ, ಕಳೆದ ನಾಲ್ಕು ತಿಂಗಳಿನಿಂದ ಈ ಹಣ ಬಿಡುಗಡೆಯಾಗಿಲ್ಲ. ಪರಿಶಿಷ್ಟ ಜಾತಿ, ಪಂಗಡದವರಿಗೆ ಆರ್‌ಡಿ ಸಂಖ್ಯೆ ನಮೂದಿಸಲು ಆದೇಶಿಸಿದ್ದಾರೆ. ಇದರ ಜೊತೆಗೆ ಇ– ಶ್ರಮ ಅರ್ಜಿದಾರರಿಗೆ ಫೋನ್ ಮಾಡಿ ಪಡಿತರ ಚೀಟಿ ಸಂಖ್ಯೆ ಲಿಸ್ಟ್ ಮಾಡಿ ಕೊಡಲು ಹೇಳುತ್ತಾರೆ. ಡಿಬಿಟಿ ಹಣ ಬಾರದವರಿಗೆ ಇ–ಕೆವೈಸಿ ಮಾಡಿ ಪೋಸ್ಟ್ ಆಫೀಸ್‌ನಲ್ಲಿ ಅಕೌಂಟ್ ಮಾಡಲು ತಿಳಿಸಿ ಇಲ್ಲವೇ ಅಕೌಂಟ್ ಮಾಡಿಸಿ ಅಂತ ಹೇಳಿ ಆದೇಶ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕೆಲಸ ಮಾಡಿದರೂ ನಮಗೆ ಸರಿಯಾಗಿ ಕಮಿಷನ್‌ ನೀಡುತ್ತಿಲ್ಲ. ಎಲ್ಲಾ ವಿತರಕರು ಶ್ರೀಮಂತರಿಲ್ಲ. ಆರ್ಥಿಕವಾಗಿ ತುಂಬ ಕಷ್ಟದಲ್ಲಿದ್ದಾರೆ. ವಿತರಕರ ಬದುಕು ತುಂಬಾ ಕಷ್ಟದಲ್ಲಿದ್ದಾರೆ. ಅಧಿಕಾರಿಗಳು ಶೀಘ್ರ ಹಣ ಬಿಡುಗಡೆ ಮಾಡಿಸಿ ವಿತರಕರಿಗೆ ಸಹಕರಿಸಬೇಕು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪಡಿತರ ವಿತರಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ 401 ನ್ಯಾಯ ಬೆಲೆ ಅಂಗಡಿಗಳಿವೆ. ಸರ್ಕಾರದಿಂದ ಪಡಿತರ ವಿತರಕರಿಗೆ ಕಮಿಷನ್‌ ಬಂದಿಲ್ಲ. ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ

-ಭೀಮರಾಯ ಮಸಾಲಿ ಉಪ ನಿರ್ದೇಶಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ

ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ನಾಲ್ಕು ತಿಂಗಳದ ಕಮಿಷನ್ ಬಂದಿಲ್ಲ. ಇದರಿಂದ ನಮಗೆ ಬಾಡಿಗೆ ಕಟ್ಟಲು ಕಾರ್ಮಿಕರಿಗೆ ವೇತನ ನೀಡಲು ಸಮಸ್ಯೆಯಾಗಿದೆ. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕು

-ಯಂಕಪ್ಪ ವಿಠ್ಠಲ ಪಡಿತರ ವಿತರಕ

ಪಡಿತರ ವಿತರಕರಿಗೆ ಕಳೆದ ನಾಲ್ಕು ತಿಂಗಳಿಂದ ಕಮಿಷನ್‌ ಬಂದಿಲ್ಲ. ಸಭೆಗಳಾದರೂ ಯಾವುದೇ ಕ್ರಮವಿಲ್ಲ. ಯಾವುದೇ ಸರ್ಕಾರಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ

-ಆರ್.ಮಹಾದೇವಪ್ಪ ಅಬ್ಬೆತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಕಲ್ಯಾಣ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘ

2018ರಿಂದ ಇ–ಕೆವೈಸಿ ಹಣವೂ ಬಂದಿಲ್ಲ

ಪಡಿತರ ಚೀಟಿದಾರರ ಮಾಹಿತಿಯನ್ನು 2018ರಲ್ಲಿ ಇ–ಕೆವೈಸಿ ಮಾಡಿಸಲಾಗಿದೆ. ಆದರೆ ಇಲ್ಲಿಯತನಕ ಹಣ ಬಂದಿಲ್ಲ. ಇದರಿಂದ ಯಾವ ಭರವಸೆ ಇಟ್ಟುಕೊಳ್ಳಬೇಕು ಎಂದು ಪಡಿತರ ಡೀಲರ್‌ಗಳ ಪ್ರಶ್ನೆಯಾಗಿದೆ. ಒಬ್ಬರಿಗೆ ₹5 ಯಂತೆ ಇ–ಕೆವೈಸಿಗಾಗಿ ಸರ್ಕಾರ ಹಣ ನಿಗದಿ ಮಾಡಿತ್ತು. 5 ಜನರಿಗೆ ₹25 5ಕ್ಕಿಂತ ಹೆಚ್ಚು ಜನರಿದ್ದರೆ ₹25 ನಿಗದಿ ಮಾಡಿತ್ತು. ಆದರೆ ಹಣ ಮಾತ್ರ ಇನ್ನೂ ಬಂದಿಲ್ಲ. ಈ ಬಗ್ಗೆ ಬಿಜೆಪಿ ಕಾಂಗ್ರೆಸ್‌ ಸರ್ಕಾರಕ್ಕೆ ಮನವಿ ಕೊಟ್ಟಿದ್ದೇವೆ. ಶಾಸಕರು ತಮ್ಮ ಭತ್ಯೆ ಏರಿಸಿಕೊಳ್ಳುತ್ತಾರೆ. ಆದರೆ ನಮಗೆ 6 ವರ್ಷಗಳಾದರೂ ಹಣ ಬಂದಿಲ್ಲ ಎನ್ನುತ್ತಾರೆ ಪಡಿತರ ವಿತರಕರು.

ಪ್ರತಿ ತಿಂಗಳು ಸರ್ವರ್‌ ಇರಲ್ಲ

ಪಡಿತರ ವಿತರಣೆಗೆ ವಿತರಕರು ಪ್ರತಿ ತಿಂಗಳು ಪರದಾಡುವಂತಾಗಿದೆ ಎಂದು ದೂರು ನೀಡುತ್ತಾರೆ. ಸರ್ವರ್‌ ಸಮಸ್ಯೆಯಿಂದ ಬಯೋಮೆಟ್ರಿಕ್‌ ಬೆರಳಚ್ಚು ತೆಗೆದುಕೊಳ್ಳದ ಕಾರಣ ವಿತರಣೆಗೆ ಅಡ್ಡಿಯಾಗುತ್ತಿದೆ. ಅಂಗಡಿಗೆ ಬಂದು ಫಲಾನುಭವಿಗಳು ಬೈಯ್ದುಕೊಂಡು ಹೋಗುತ್ತಿದ್ದಾರೆ ಎಂದು ವಿತರರು ಹೇಳುತ್ತಾರೆ. ‘ಪಡಿತರ ವಿತರಣೆಗೆ ಪ್ರತಿ ತಿಂಗಳು ಸರ್ವರ್‌ ಸಮಸ್ಯೆ ಇರುವುದರಿಂದ ವಿತರಣೆಗೆ ಸಮಸ್ಯೆಯಾಗುತ್ತಿದೆ. ಆದರೂ ಎಲ್ಲ ಫಲಾನುಭವಿಗಳಿಗೆ ವಿತರಿಸುವ ತನಕ ಅಂಗಡಿ ತೆರೆಯಬೇಕಾಗಿದೆ. ಹಳ್ಳಿಗಳಂತೂ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ’ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಮಹಾದೇವಪ್ಪ ಅಬ್ಬೆತುಮಕೂರು.

ಪಡಿತರ ಅಂಗಡಿಗಳ ವಿವರ

ತಾಲ್ಲೂಕು;ನಗರ ಪ್ರದೇಶ;ಗ್ರಾಮೀಣ ಪ್ರದೇಶ;ಒಟ್ಟು ಶಹಾಪುರ;18;62;80 ಸುರಪುರ;25;58;83 ಯಾದಗಿರಿ;20;65;85 ಗುರುಮಠಕಲ್‌;8;51;59 ವಡಗೇರಾ;0;44;44 ಹುಣಸಗಿ;0;50;50 ಒಟ್ಟು;71;330;401

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.