ಕಕ್ಕೇರಾ: ಪಟ್ಟಣ ಸಮೀಪದ ದೇವಾಪುರ ಗ್ರಾಮದ ಉರಗ ರಕ್ಷಕ ರವಿಸ್ವಾಮಿ ಸುಮಾರು 500ಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದು, ಈ ಭಾಗದಲ್ಲಿ ಸ್ನೇಕ್ ರವಿಸ್ವಾಮಿಯೆಂದು ಗುರುತಿಸಿಕೊಂಡಿದ್ದಾರೆ.
ಈ ಹಿಂದೆ ಪಾನ್‌ಶಾಪ್, ಎಳೆನೀರು ವ್ಯಾಪಾರ ಮಾಡುತ್ತಿದ್ದರು. ಈಗ ಗ್ಯಾಸ್ ಸರ್ವಿಸ್ ಮಾಡುವುದನ್ನು ನಿತ್ಯದ ಕಾಯಕ ಮಾಡಿಕೊಂಡಿರುವ ಸ್ನೇಕ್ ರವಿಸ್ವಾಮಿ ಕಳೆದ ಐದು ವರ್ಷಗಳಿಂದ ಉರಗ ರಕ್ಷಣೆಯಲ್ಲಿ ತೊಡಗಿದ್ದಾರೆ.
ಕೆರೆಹಾವು, ನಾಗರಹಾವು, ಕೊಳಕಮಂಡಲ, ಮಣ್ಮುಕ್ಕಹಾವು, ಹಸಿರ ಹಾವು ಸೇರಿದಂತೆ ಇನ್ನು ಅನೇಕ ಬಗೆಯ ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಎರಡು ಬಾರಿ ಕೆರೆಹಾವಿನಿಂದ ಕಚ್ಚಿಸಿಕೊಂಡಿರುವ ಕಹಿ ಅನುಭವ ಆದ ಬಳಿಕ ಬಹಳ ಜಾಗರೂತೆಯಿಂದ ಹಾವುಗಳನ್ನು ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.
‘ಹುಣಸಗಿ, ಜಾಲಹಳ್ಳಿ, ದೇವದುರ್ಗ, ತಿಂಥಣಿಬ್ರಿಜ್ ಕಡೆಯಿಂದ ಹಾವು ಹಿಡಿಯಲು ಕರೆಗಳು ಬಂದ ನಂತರ ಬೈಕ್‌ನಲ್ಲಿ ಹೋಗಿ ರಕ್ಷಣೆ ಮಾಡಿದ್ದೇನೆ. ಯಾರಿಂದಲೂ ಹಣ ಪಡೆದಿಲ್ಲ. ಕರೆಸಿದವರು ಬೈಕ್‌ನ ಪೆಟ್ರೋಲ್ ಖರ್ಚಿಗೆಂದು ಸ್ವಯಂಪ್ರೇರಿತರಾಗಿ ಹಣ ಕೊಟ್ಟರೆ ತೆಗೆದುಕೊಂಡಿದ್ದೇನೆ’ ಎಂದು ರವಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸುಮಾರು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಹಾವೊಂದು ಸೇರಿಕೊಂಡಿತ್ತು. ಅಂದು ನಾನೇ ತೊಂದರೆಯಾಗದಂತೆ ಹಾವನ್ನು ಹಿಡಿದೆ. ಅಂದಿನಿಂದ ಹಾವುಗಳ ಹಿಡಿಯುವುದು ನನಗೆ ಅಭ್ಯಾಸವಾಗಿದೆ. ಹಲವು ಜಾತಿಯ ಹಾವುಗಳನ್ನು ರಕ್ಷಿಸಿದ್ದು, ರಕ್ಷಿಸಿದ ನಂತರ ಹಾವುಗಳನ್ನು ಸ್ಥಳಾಂತರ ಮಾಡುವುದೇ ಸಮಸ್ಯೆಯಾಗಿದೆ. ಎಲ್ಲಿ ಹೋದರೂ ಹಾವು ತಂದು ಇಲ್ಲಿ ಬಿಡಬೇಡ, ಅಂಗಡಿ, ಮನೆಗೆ ಮರಳಿ ಬರುತ್ತಿವೆ ಎಂದು ಜನ ಹೇಳುತ್ತಾರೆ. ಹಾಗಾಗಿ ತಿಂಥಣಿಬ್ರಿಜ್ ಗುಡ್ಡಗಾಡು ಪ್ರದೇಶದಲ್ಲಿ ಬಿಟ್ಟುಬರುವುದು ಒಂದು ಸವಾಲಿನ ಕೆಲಸವಾಗಿದೆ’ ಎಂದು ರವಿಸ್ವಾಮಿ ಹೇಳಿದರು.
‘ನನ್ನ ಜೀವನಕ್ಕೆ ಯಾರನ್ನಾದರೂ ಸಾಲ ಕೇಳಿದರೆ ಇಲ್ಲ ಎನ್ನುತ್ತಾರೆ. ಹಾವು ಹಿಡಿಯಲು ಹೋದಾಗ ಮರಣ ಹೊಂದಿದರೆ ಸಾಲ ವಾಪಸ್ ಯಾರು ಕೊಡುತ್ತಾರೆ ಎಂದು ಜನ ಕೇಳಿದ್ದಿದೆ. ಆ ನೋವು ನನಗೆ ಹಾವು ಕಚ್ಚಿದ್ದಕ್ಕಿಂತಲೂ ಹೆಚ್ಚಿಗೆ ಆದ ಹಾಗಿದೆ’ ಎಂದು ತಮ್ಮ ನೋವನ್ನು ಹೇಳಿದರು.
ಹಾವುಗಳು ಕಂಡು ಬಂದಾಗ ರವಿ ಸ್ವಾಮಿ ಅವರ ಮೊ.ಸಂ. 97316 13084ಗೆ ಕರೆ ಮಾಡಬಹುದು.
ಸುಮಾರು 500 ಹಾವುಗಳ ರಕ್ಷಿಸಿದ್ದು, ಹಾವುಗಳನ್ನು ಕೊಲ್ಲಬೇಡಿ. ಅವುಗಳನ್ನು ನಮ್ಮಂತೆ ಬದುಕಲು ಬಿಡಿ.ರವಿಸ್ವಾಮಿ, ಉರಗ ರಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.