ADVERTISEMENT

ಕಲ್ಯಾಣದ ಪಹಣಿಯಲ್ಲೂ ‘ವಕ್ಫ್‌ ಆಸ್ತಿ’ ಸದ್ದು: ಸಾಲ ಸೌಲಭ್ಯದಿಂದ ವಂಚಿತ ರೈತರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 17:47 IST
Last Updated 29 ಅಕ್ಟೋಬರ್ 2024, 17:47 IST
<div class="paragraphs"><p> ರೈತರ ಜಮೀನಿನ ಉತಾರೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ಧರಣಿ ಕೈಗೊಂಡರು&nbsp;</p></div>

ರೈತರ ಜಮೀನಿನ ಉತಾರೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ಧರಣಿ ಕೈಗೊಂಡರು 

   

ಕಲಬುರಗಿ/ ಯಾದಗಿರಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಕೊಪ್ಪಳ ಹಾಗೂ ಬೀದರ್‌ ಜಿಲ್ಲೆಗಳಲ್ಲೂ ರೈತರ ಜಮೀನಿನ ಪಹಣಿಯಲ್ಲಿ ‘ವಕ್ಫ್‌ ಆಸ್ತಿ’ ಎಂದು ನಮೂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಲವೆಡೆ ನೋಟಿಸ್‌ ಸಹ ನೀಡಲಾಗಿದ್ದು, ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ 35 ರೈತರಿಗೆ ಎರಡು ಬಾರಿ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮಾಡದೆ ರೈತರನ್ನು ವಾಪಸ್ ಕಳುಹಿಸಲಾಗಿದೆ. ಅವಿಭಜಿತ ಚಿತ್ತಾಪುರ ತಾಲ್ಲೂಕಿನಲ್ಲಿ 247 (ಕಾಳಗಿ, ಶಹಾಬಾದ್ ಸೇರಿ) ಮಂದಿಗೆ ನೋಟಿಸ್‌ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇನ್ನೊಂದೆಡೆ ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲ್ಲೂಕಿನ ಕೊಂಗಂಡಿ ಗ್ರಾಮದ 20ಕ್ಕೂ ಅಧಿಕ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರು ಸೇರ್ಪಡೆಯಾಗಿದೆ.

ನೋಟಿಸ್‌ ನೀಡಿಲ್ಲ: ‘ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ ವಕ್ಫ್‌ ಮಂಡಳಿಯಿಂದ ಜಿಲ್ಲೆಯ ರೈತರಿಗೆ ನೋಟಿಸ್ ನೀಡಿಲ್ಲ. ಈ ವಿಷಯದಲ್ಲಿ ರೈತರಿಗೆ ತೊಂದರೆ ಉಂಟಾಗುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಸ್ಪಷ್ಟನೆ ನೀಡಿದ್ದಾರೆ.

‘2019ರಿಂದ 2023ರವರೆಗೆ ಜಿಲ್ಲಾ ವಕ್ಫ್‌ ಬೋರ್ಡ್‌ನಿಂದ ರೈತರಿಗೆ ಯಾವುದೇ ನೋಟಿಸ್‌ ನೀಡಿಲ್ಲ. ಜಿಲ್ಲೆಯ ಎಲ್ಲ ತಹಶೀಲ್ದಾರ್‌ ಕಚೇರಿಯಿಂದ ರೈತರಿಗೆ ನೋಟಿಸ್‌ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲಾಗುವುದು’ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಸಲೀಂ ಪಾಷಾ ತಿಳಿಸಿದ್ದಾರೆ.

300 ರೈತರಿಗೆ ನೋಟಿಸ್‌: ‘ಜಿಲ್ಲೆಯ 300ಕ್ಕೂ ಹೆಚ್ಚು ರೈತರ ಜಮೀನು ವಕ್ಫ್‌ ಹೆಸರಿಗೆ ಬದಲಾವಣೆ ಮಾಡಲಾಗಿದೆ. ರೈತರು ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಶೀಘ್ರದಲ್ಲೇ ಇದರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ತಿಳಿಸಿದ್ದಾರೆ.

ಪ.ಪಂ ಕಚೇರಿಯೂ ವಕ್ಫ್‌ ಆಸ್ತಿ: ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ 481 ಎಕರೆ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್‌ ಮಂಡಳಿ ಆಸ್ತಿ ಎಂದು ನಮೂದಿಸಲಾಗಿದೆ. ಪಟ್ಟಣದ ಟೀಚರ್ಸ್ ಕಾಲೊನಿ, ವಿದ್ಯಾಶ್ರೀ ಶಾಲೆ, ವಾಲ್ಮೀಕಿ ನಗರ, ಶಡ್ಡಿ ಕಾಲೊನಿ, ನಾಗಪ್ಪ ಬಾವಿಕಟ್ಟಿ ಅವರ ಹೊಲ ಹಾಗೂ ತಾಲ್ಲೂಕಿನ ಚಿಕೆನಕೊಪ್ಪ, ಬಿನ್ನಾಳ ಸೇರಿದಂತೆ 54ನೇ ಸರ್ವೆ ಸಂಖ್ಯೆ ಮತ್ತು ಪಟ್ಟಣ ಪಂಚಾಯಿತಿ ಕಾರ್ಯಾಲಯವೂ ಸಹಿತ 2019ರಲ್ಲಿಯೇ ವಕ್ಫ್‌ ಮಂಡಳಿ ಆಸ್ತಿ ಎಂದು ನಮೂದಾಗಿದೆ.

ಸರ್ಕಾರಿ ನಿವೇಶನ ಆಸ್ತಿಗೆ ವಕ್ಫ್ ಹೆಸರು

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸಾವಳೇಶ್ವರ ಗ್ರಾಮದಲ್ಲಿನ ಸರ್ಕಾರಿ ನಿವೇಶನದ 8 ಎಕರೆ ಆಸ್ತಿಯ ಪಹಣಿ ಪತ್ರದಲ್ಲಿ ಜಮೀನು ವಕ್ಫ್ ಆಸ್ತಿಗೆ
ಒಳಪಟ್ಟಿರುತ್ತದೆ ಎಂದು ನಮೂದಿಸಲಾಗಿದೆ.

‘30 ವರ್ಷಗಳ ಹಿಂದೆ ವಿವಿಧ ವಸತಿ ಯೋಜನೆಗಳಡಿ ಬಡ ಫಲಾನುಭವಿ ಗಳಿಗೆ ನಿವೇಶನ ಹಂಚಿಕೆ ಮಾಡಲು ರಾಜ್ಯ ಸರ್ಕಾರವು ತಹಶೀಲ್ದಾರ್ ಹೆಸರಿನಲ್ಲಿ ಗ್ರಾಮದ ಸರ್ವೆ ನಂಬರ್ 188ರಲ್ಲಿ 8 ಎಕರೆ ಜಮೀನು ಖರೀದಿಸಿತ್ತು. ನೂರಾರು ಫಲಾನುಭವಿಗಳಿಗೆ ನಿವೇಶನವನ್ನೂ ಹಂಚಿಕೆಯೂ ಮಾಡಿತ್ತು. 150ಕ್ಕೂ ಹೆಚ್ಚು ಮನೆಗಳು ನಿರ್ಮಾಣ ಆಗಿದ್ದು, ಈ ಆಸ್ತಿ ವಕ್ಫ್‌ಗೆ ಸೇರಿದೆ ಎಂದು ಏಕಾಏಕಿ ಪಹಣಿಯಲ್ಲಿ ನಮೂದು ಆಗಿದೆ’ ಎಂದು ವಕೀಲ ವೈಜನಾಥ ಎಸ್.ಝಳಕಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.