ಶಹಾಪುರ: ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಮಿಯತ (ಟಿಎಪಿಸಿಎಂಎಸ್)ನಲ್ಲಿ ಉಗ್ರಾಣ ಕೇಂದ್ರ (ದಾಸ್ತಾನು)ದಲ್ಲಿ ಇಟ್ಟಿದ್ದ ₹ 2.06 ಕೋಟಿ ಮೌಲ್ಯದ 6,677 ಕ್ವಿಂಟಾಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಟಿಎಪಿಸಿಎಂಎಸ್ ಆಡಳಿತ ಮಂಡಳಿತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ನಿರ್ದೇಶಕರನ್ನು ಪ್ರಕರಣದಿಂದ ಕೈ ಬಿಟ್ಟು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣೆ ಪಟ್ಟಿ ಚರ್ಚೆಗೆ ಗ್ರಾಸವಾಗಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಯಾದಗಿರಿಯ ಉಪ ನಿರ್ದೇಶಕ ಭೀಮರಾಯ ಎಂ. ಅವರು ಶಹಾಪುರ ಠಾಣೆಗೆ 2023ರ ನವೆಂಬರ್ 25ರಂದು ಸಲ್ಲಿಸಿದ ದೂರಿನಲ್ಲಿ(ಎಫ್ಐಆರ್) ಮೂರನೇಯ ಆರೋಪಿತರು ಟಿಎಪಿಸಿಎಂಎಸ್ ಆಡಳಿತ ಮಂಡಳಿತ ನಿರ್ದೇಶಕರು ಹಾಗೂ ಇತರರು ಎಂದು ನಮೂದಿಸಿದ್ದರು. ಅಲ್ಲದೇ ದೂರಿನಲ್ಲಿ ಆಡಳಿತ ಮಂಡಳಿಯು ಸಂಪೂರ್ಣವಾಗಿ ವಿಫಲವಾಗಿರುವುದು ಹಾಗೂ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸರ್ಕಾರಕ್ಕೆ ಮೋಸ ಮಾಡಿ ಸರ್ಕಾರದ ಪಡಿತರ ಧಾನ್ಯವನ್ನು ತಮ್ಮ ಸ್ವಂತ ಲಾಭಗೋಸ್ಕರ ಬಳಸಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ನಿವೇದಿಸಿಕೊಂಡಿದ್ದರು.
ದೂರು ದಾಖಲಗುತ್ತಿದ್ದಂತೆ ಟಿಎಪಿಸಿಎಂಎಸ್ ಅಧ್ಯಕ್ಷ ಗುರುನಾಥರಡ್ಡಿ ಪಾಟೀಲ ಹಳಿಸಗರ, ಉಪಾಧ್ಯಕ್ಷ ನಿಂಗಪ್ಪ, ಅಲ್ಲದೆ ಆಡಳಿತ ಮಂಡಳಿಯ ನಿರ್ದೇಶಕರಾದ ವಿಜಕುಮಾರ ಪಾಟೀಲ, ಗದಿಗೆಪ್ಪ ದೇಸಾಯಿ, ಬಸನಗೌಡ, ಬಸವರಾಜ, ಬಸವರಾಜಪ್ಪಗೌಡ, ಬಸವರಾಜ ಮೂಲಿಮನಿ, ರಂಗಪ್ಪ, ಹಣಮಂತ ಯಕ್ಷಿಂತಿ, ಶರಣಮ್ಮ, ಕೃಷ್ಣಮ್ಮ ಯಕ್ಷಿಂತಿ, ಯಂಕಪ್ಪ ಸೈಯದ್‌ಮಿಯಾ ಅವರನ್ನು ವಿಚಾರಣೆಗೆ ತನಿಖಾಧಿಕಾರಿ ನೋಟಿಸ್ ಜಾರಿ ಮಾಡಿದ ತಕ್ಷಣ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡರು.
ಇದರಲ್ಲಿ ಮುಖ್ಯವಾಗಿ ಟಿಎಪಿಸಿಎಂಎಸ್ ಆಡಳಿತ ಮಂಡಳಿಯು ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಹಂಚಿಕೆ ನೀಡಲಾದ ಅಕ್ಕಿಯನ್ನು ಸಂರಕ್ಷಿಸಿ ಇಟ್ಟುಕೊಳ್ಳುವುದು ಹಾಗೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಆಡಳಿತ ಮಂಡಳಿಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಅಲ್ಲದೆ ಪ್ರತಿ ತಿಂಗಳು ಆಡಳಿತ ಮಂಡಳಿಯು ಸಭೆ ನಡೆಸಿ ನಡಾವಳಿ ಹಾಗೂ ಲೆಕ್ಕಪತ್ರ ಸೇರಿದಂತೆ ಸ್ಟಾಕ್ ರಜಿಸ್ಟರನ್ನು ತಪಾಸಣೆ ಕಾಲಕ್ಕೆ ನಡೆಸಿಕೊಂಡು ಬಂದಿದೆ. ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಸಂಘದ ಕಾರ್ಯನಿರ್ವಾಹಕ ಅಧಿಕಾರಿಯು ವ್ಯವಹಾರದ ಬಗ್ಗೆ ಚೆಕ್‌ಗೆ ಜಂಟಿ ಸಹಿ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ ಎನ್ನುತ್ತಾರೆ ಸಹಕಾರ ಸಂಘದ ನಿವೃತ್ತ ಅಧಿಕಾರಿ ಒಬ್ಬರು.
ಆದರೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪತ್ರದಲ್ಲಿ ಅಡಳಿತ ಮಂಡಳಿಯ ಪಾತ್ರದ ಬಗ್ಗೆ ಚಕಾರ ಎತ್ತಿಲ್ಲ. ಇದೊಂದು ದೋಷಪೂರಿತ ಹಾಗೂ ಅಕ್ಕಿ ನಾಪತ್ತೆ ಪ್ರಕರಣದ ವ್ಯಕ್ತಿಗಳನ್ನು ಬಚಾವ್ ಮಾಡುವ ಯತ್ನ ಸಾಗಿದೆ. ತನಿಕಾಧಿಕಾರಿ ವಿರುದ್ಧ ಹಾಗೂ ಇಡೀ ಪ್ರಕರಣವನ್ನು ಸಮಗ್ರವಾಗಿ ತಪಾಸಣೆ ನಡೆಸಿ ಹೆಚ್ಚುವರಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.