ADVERTISEMENT

ಭತ್ತ: ಬೆಲೆ ಕುಸಿತದಿಂದ ಕಂಗಾಲಾದ ಅನ್ನದಾತ 

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭರದಿಂದ ಸಾಗಿದ  ಭತ್ತದ ರಾಶಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 7:08 IST
Last Updated 25 ನವೆಂಬರ್ 2024, 7:08 IST
ಹುಣಸಗಿ ಪಟ್ಟಣದ ಹೊರವಲಯದಲ್ಲಿ ರಾಶಿ ಮಾಡಿದ ಭತ್ತವನ್ನು ತಿರುವಿ ಹಾಕುತ್ತಿರುವ ರೈತರು 
ಹುಣಸಗಿ ಪಟ್ಟಣದ ಹೊರವಲಯದಲ್ಲಿ ರಾಶಿ ಮಾಡಿದ ಭತ್ತವನ್ನು ತಿರುವಿ ಹಾಕುತ್ತಿರುವ ರೈತರು    

ಹುಣಸಗಿ: ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗಿರುವ ಭತ್ತ ಬಹುತೇಕ ರಾಶಿಯಾಗಿದ್ದು, ಬೆಲೆ ಕುಸಿತದ ಭೀತಿ ರೈತರನ್ನು ನಿದ್ದೆಗೆಡಿಸಿದೆ.

ಪ್ರತಿ ವರ್ಷವೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ. ಈ ಬಾರಿ ಹುಣಸಗಿ ತಾಲ್ಲೂಕಿನಲ್ಲಿಯೇ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಆದರೆ ಕಳೆದ ಒಂದು ವಾರದಿಂದಲೂ ಮಂಜು ಕವಿದ ವಾತಾವರಣ ಹಾಗೂ ಚಳಿಯಿಂದಾಗಿ ಕಳೆದ ವರ್ಷಕ್ಕೆ ಹೊಲಿಸಿದರೆ ಧಾರಣೆಯಲ್ಲಿ ಒಂದು ಚೀಲಕ್ಕೆ ₹600ಕ್ಕೂ ಹೆಚ್ಚು ಕುಸಿತ ಕಂಡು ಬರುತ್ತಿದೆ. ಇದರಿಂದಾಗಿ ಮತ್ತೆ ಸಾಲದ ಸುಳಿಯಲ್ಲಿಯೇ ಕಾಲ ಕಳೆಯುಂತಾಗುತ್ತದೆ ಎಂದು ವಜ್ಜಲ ಗ್ರಾಮದ ರೈತರಾದ ಸಿದ್ದನಗೌಡ ಗುರಡ್ಡಿ, ಬಸವರಾಜ ಮೇಟಿ ಹೇಳುತ್ತಾರೆ.

ಕಳೆದ ವರ್ಷ ರೈತರಿಗೆ ಉತ್ತಮ ಇಳುವರಿ ಹಾಗೂ ಚೀಲಕ್ಕೆ ₹2200 ರಿಂದ ₹2300ವರೆಗೂ ಧಾರಣಿ ಲಭ್ಯವಾಗಿತ್ತು. ಇದರಿಂದಾಗಿ ರೈತರು ಚೇತರಿಸಿಕೊಂಡಿದ್ದರು. ಈ ಬಾರಿ ಜುಲೈ ಮೂರನೇ ವಾರದಲ್ಲಿಯೇ ಕಾಲುವೆಗೆ ನೀರು ಹರಿಸಲಾಗಿತ್ತು. ಇದರಿಂದಾಗಿ ರೈತರು ಭತ್ತದ ಸಸಿ ಹಾಕಿಕೊಂಡು ಪೂರ್ವ ತಯಾರಿ ಮಾಡಿಕೊಂಡಿದ್ದರು. ಆಗಸ್ಟ್‌ ಮೊದಲ ವಾರದಲ್ಲಿಯೇ ಭತ್ತ ನಾಟಿ ಮಾಡಿಕೊಂಡಿದ್ದರು. ಆದರೆ ಸದ್ಯ ನಿಶ್ಚಿತ ಧಾರಣೆ ಹಾಗೂ ಮಾರುಕಟ್ಟೆ, ಶೇಖರಣೆಗಾಗಿ ದಾಸ್ತಾನು ಮಾಡಿಟ್ಟುಕೊಳ್ಳಲು ಸುಸಜ್ಜಿತ ಗೋದಾಮು ಇಲ್ಲದ್ದರಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ’ ಎಂದು ದ್ಯಾಮನಹಾಳ ಗ್ರಾಮದ ರೈತರಾದ ಲಕ್ಷ್ಮಿಕಾಂತ ಕುಲಕರ್ಣಿ, ಹಾಗೂ ಮಾಳನೂರು ಗ್ರಾಮದ ತಿಪ್ಪಣ್ಣ ಕಾರನೂರು ವಿವರಿಸಿದರು.

ADVERTISEMENT

‘ಕಳೆದ ಎರಡು ದಿನಗಳಿಂದ ಆರ್.ಎನ್.ಆರ್ ತಳಿಯ 75 ಕೆ.ಜಿ ಭತ್ತಕ್ಕೆ ₹1650 ರಿಂದ ₹1700 ಹಾಗೂ ಸೋನಾ ತಳಿಯ ಭತ್ತಕ್ಕೆ ₹1550 ರಿಂದ ₹1650 ಧಾರಣೆ ಇದೆ. ಇದೇ ಧಾರಣೆ ಇದ್ದರೆ ರೈತರಿಗೆ ಅಪಾರ ನಷ್ಟವಾಗಲಿದೆ’ ಎಂದು ರಾಜನಕೋಳೂರು ಗ್ರಾಮದ ಪ್ರಗತಿಪರ ರೈತರಾದ ಪ್ರಭುಗೌಡ ಪಾಟೀಲ ಹಾಗೂ ತಿರುಪತಿ ವಡಗೇರಿ ಹೇಳಿದರು.

‘ಸದ್ಯ ಕಟಾವು ಅಲ್ಲಲ್ಲಿ ನಡೆದಿದ್ದು ಎಕರೆಗೆ 45 ರಿಂದ 50 ಚೀಲದವರೆಗೂ ಇಳುವರಿ ಬರುತ್ತಿದೆ. ಸಸಿ ನಾಟಿ, ಪಟ್ಲರ್ ಹೊಡೆಯುವುದು ಹಾಗೂ ಕಳೆ ತೆಗೆಯಲು, ಗೊಬ್ಬರ ಹಾಗೂ ಕ್ರಿಮಿನಾಶಕ, ಎಕರೆಗೆ ಸುಮಾರು 35 ರಿಂದ 40 ಸಾವಿರವರೆಗೆ ಖರ್ಚು ಮಾಡಿದ್ದು, ಆದಾಯಕ್ಕಿಂತ ಖರ್ಚು ಹೆಚ್ಚಿಗೆ ಆಗುತ್ತಿದೆ’ ಎಂದು ರೈತರಾದ ನಿಂಗನಗೌಡ ಬಸನಗೌಡ್ರ ಹಾಗೂ ಬೀರಪ್ಪ ಮೇಟಿ, ಸಿದ್ದಣ್ಣ ಮಾಹಿತಿ ನೀಡಿದರು.

ಹುಣಸಗಿ ಪಟ್ಟಣದ ಹೊರವಲಯದಲ್ಲಿ ರಾಶಿ ಮಾಡಿದ ಭತ್ತವನ್ನು ತಿರುವಿ ಹಾಕುತ್ತಿರುವ ರೈತರು 

ಕಳೆದ ವರ್ಷಕ್ಕೆ ದರ ಹೋಲಿಕೆ ಮಾಡಿದರೆ ಪ್ರತಿ ಚೀಲಕ್ಕೆ ₹600 ರಿಂದ ₹700ರವರೆಗೆ ರೈತರಿಗೆ ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಬಲ ಬೆಲೆಯಂತೆ ಭತ್ತ ಖರೀದಿಗೆ ಸರ್ಕಾರ ಕ್ರಮ ಕೈಗೊಳ್ಳಲಿ – ಪ್ರಭುಗೌಡ ಪಾಟೀಲ ರಾಜನಕೋಳೂರು ಪ್ರಗತಿಪರ ರೈತ

ಕಟಾವು ಯಂತ್ರಗಳ ಅಭಾವ

‘ಕೃಷ್ಣಾ ಅಚ್ಚುಕಟ್ಟು ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟಾಗಿ ಭತ್ತದ ಕಟಾವಿಗೆ ಬಂದಿದ್ದರಿಂದಾಗಿ ಕಟಾವು ಯಂತ್ರಗಳ ಅಭಾವ ಉಂಟಾಗುತ್ತಿದೆ. ಕಳೆದ ವರ್ಷ ಬೇರೆ ರಾಜ್ಯಗಳಿಂದಲೂ ಕಟಾವು ಯಂತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದವು. ಈ ಬಾರಿ ಇನ್ನೂ ಬಂದಿಲ್ಲ. ಅಲ್ಲದೇ ಕಳೆದ ವಾರ ಬೀಸಿದ ಗಾಳಿ ಮಳೆಗೆ ಭತ್ತ ನೆಲ ಕಚ್ಚಿದ್ದರಿಂದಾಗಿ ಎಕರೆಗೆ ಎರಡು ತಾಸಿಗೂ ಅಧಿಕ ಸಮಯ ಬೇಕಾಗಿದ್ದು ಕಟಾವಿನ ಖರ್ಚು ಕೂಡಾ ಹೆಚ್ಚಾಗಿ ರೈತರನ್ನು ತೊಂದರೆಗೀಡು ಮಾಡಿದೆ’ ಎಂದು ಕೇಶವರಡ್ಡಿ ರಾಶಿಗುಡ್ಡ ಹೇಳಿದರು. ‘ಸರ್ಕಾರ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಭತ್ತಕ್ಕೆ ದರ ಸಿಗುವಂತೆ ಮಾಡುವ ಜೊತೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಿ’ ಎಂದು ಅಚ್ಚುಕಟ್ಟು ಪ್ರದೇಶ ರೈತರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.