ADVERTISEMENT

ಹೆಚ್ಚುತ್ತಿರುವ ತಾಪಮಾನ; ಇನ್ನೂ ಆರಂಭವಾಗಿಲ್ಲ ನೀರಿನ ಅರವಟಿಗೆ

ಪ್ರಾಣಿ, ಪಕ್ಷಿಗಳಿಗಾಗಿ ನೀರಿನ ತೊಟ್ಟಿ ಸೌಕರ್ಯ ಅಗತ್ಯ

ಬಿ.ಜಿ.ಪ್ರವೀಣಕುಮಾರ
Published 19 ಮಾರ್ಚ್ 2023, 13:21 IST
Last Updated 19 ಮಾರ್ಚ್ 2023, 13:21 IST
ಯಾದಗಿರಿ ತಾಲ್ಲೂಕಿನ ಕೊಯಿಲೂರ ಗ್ರಾಮದಲ್ಲಿರುವ ನೀರಿನ ತೊಟ್ಟಿ
ಯಾದಗಿರಿ ತಾಲ್ಲೂಕಿನ ಕೊಯಿಲೂರ ಗ್ರಾಮದಲ್ಲಿರುವ ನೀರಿನ ತೊಟ್ಟಿ   

ಯಾದಗಿರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ಪ್ರಖರತೆ ಹೆಚ್ಚಾಗುತ್ತಿದೆ. ಮಾರ್ಚ್‌ ತಿಂಗಳಿನ ಮಧ್ಯ ಭಾಗದಲ್ಲಿ 36 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ.

ಏಪ್ರಿಲ್‌, ಮೇ ತಿಂಗಳಲ್ಲಿ ಮತ್ತಷ್ಟು ಬಿಸಿಲು ಇರಲಿದೆ. ಕಳೆದ ಎರಡು ವರ್ಷ ಕೊರೊನಾ ಹಾವಳಿಯಿಂದ ಬೇಸಿಗೆಯ ಕಾಲದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸುವುದನ್ನು ಸಂಘ ಸಂಸ್ಥೆಯ ಮುಖಂಡರು ನಿಲ್ಲಿಸಿದ್ದರು. ಈ ಬಾರಿ ಕೋವಿಡ್‌ ಇಲ್ಲದ ಕಾರಣ ನೀರಿನ ಅರವಟಿಗೆ ಸ್ಥಾಪನೆಯಾಗಲಿ ಎಂದು ಗ್ರಾಮೀಣ ಭಾಗದ ಜನತೆಯ ಆಶಯವಾಗಿದೆ. ಕೆಲ ಸಂಘ ಸಂಸ್ಥೆಯ ಮುಖಂಡರು ಯುಗಾದಿ ಹಬ್ಬದ ಸಂದರ್ಭದಲ್ಲಿ ನೀರಿನ ಅರವಟಿಗೆ ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಯಾದಗಿರಿ ನಗರದ ಮಹಾತ್ಮ ಗಾಂಧಿ ವೃತ್ತ, ಸುಭಾಷ ವೃತ್ತ, ತಹಶೀಲ್ದಾರ್‌ ಕಚೇರಿ ಮುಂಭಾಗ, ಗಂಜ್‌ ವೃತ್ತ, ಶಾಸ್ತ್ರಿ ವೃತ್ತ, ಹೊಸಳ್ಳಿ ಕ್ರಾಸ್‌ ಹೀಗೆ ವಿವಿಧ ಕಡೆ ನೀರಿನ ಅರವಟಿಗೆ ಸ್ಥಾಪನೆ ಮಾಡಲಾಗುತ್ತಿತ್ತು. ಕೆಲವರು ಮಜ್ಜಿಗೆ, ಅಂಬಲಿ ವ್ಯವಸ್ಥೆ ಮಾಡುತ್ತಿದ್ದರು. ಕೋವಿಡ್‌ ಕಾರಣ ಎಲ್ಲ ಬಂದ್‌ ಆಗಿತ್ತು.

ADVERTISEMENT

‘ನೀರಿನ ಅವರಟಿಗೆ ಸ್ಥಾಪಿಸುವುದರಿಂದ ಗ್ರಾಮೀಣ ಪ್ರದೇಶದಿಂದ ಆಗಮಿಸುವ ಜನತೆಗೆ ಅದರಲ್ಲೂ ಮಹಿಳೆಯರಿಗೆ ಹೆಚ್ಚು ಅನುಕೂಲವಾಗುತ್ತದೆ‘ ಎನ್ನುತ್ತಾರೆ ಶಿವಪುರದ ಮಲ್ಲಮ್ಮ.

ನಗರಕ್ಕೆ ಗ್ರಾಮೀಣ ಭಾಗದಿಂದ ಪ್ರತಿ ನಿತ್ಯ ನೂರಾರು ಜನರು ಬರುತ್ತಾರೆ. ಬೇಸಿಗೆಯಲ್ಲಿ ನೀರಿನ ದಾಹ ಸಹಜ. ಹೊಟೇಲ್‌ನಲ್ಲಿ ತಿಂಡಿ, ಊಟ ತೆಗೆದುಕೊಂಡರೆ ನೀರು ಕೊಡುತ್ತಾರೆ. ಹೀಗಾಗಿ ನೀರಿಗಾಗಿ ಪರಿತಪಿಸುವಂತಾಗುತ್ತದೆ.

ನಗರಸಭೆ ಇದುವರೆಗೂ ಕುಡಿಯುವ ನೀರಿನ ಅರವಟಿಗೆ ವ್ಯವಸ್ಥೆ ಮಾಡಿದ ನಿದರ್ಶನವಿಲ್ಲ. ಬಿಡಾಡಿ ದನಗಳು, ನಾಯಿಗಳು ಇತರ ಪ್ರಾಣಿಗಳು ಮತ್ತು ಪಕ್ಷಿಗಳ ಪಾಡು ದೇವರೇ ಬಲ್ಲ. ಅವು ಅಲ್ಲಲ್ಲಿ ನಿಂತ ಚರಂಡಿ ನೀರು, ಗಲೀಜು ನೀರು ಕುಡಿಯುತ್ತವೆ.

ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು ಅರವಟಿಗೆ ವ್ಯವಸ್ಥೆ ಮಾಡುವುದಿಲ್ಲ. ನರೇಗಾ ಯೋಜನೆಯಲ್ಲಿ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ಮಾಡಿದ್ದಾರೆ. ಬಹುತೇಕ ತೊಟ್ಟಿಗಳಲ್ಲಿ ನೀರು ಇರುವುದಿಲ್ಲ.

‘ಶಹಾಪುರ ನಗರದ ಹಳೆ ಬಸ್ ನಿಲ್ದಾಣ, ಸಿ.ಬಿ.ಕಮಾನ್‌, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ, ಹೊಸ ಬಸ್ ನಿಲ್ದಾಣ ಮುಂತಾದ ಕಡೆ ನೀರಿನ ಅರವಟಿಗೆ ಸ್ಥಾಪಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಜನತೆ.

‘ಕಡು ಬಿಸಿಲಿನ ತಾಪವನ್ನು ತಣಿಸಿಕೊಳ್ಳಲು ಪಕ್ಷಿಗಳು ನೆರಳಿನ ಆಸರೆಗೆ ಬರುತ್ತವೆ. ಅಲ್ಲಿ ನೀರು ಕುಡಿಯಲು ತೊಟ್ಟಿಯನ್ನು ನೇತು ಹಾಕಿದರೆ ಉತ್ತಮ. ಹಲವು ವರ್ಷದಿಂದ ಶಹಾಪುರದ ವಕೀಲರ ಸಂಘದ ಕೆಲ ಸದಸ್ಯರು ಜೊತೆಗೂಡಿ ಕೋರ್ಟ್‌ನ ಆವರಣದಲ್ಲಿರುವ ಮರದ ಕೆಳಗಡೆ ಮಡಿಕೆಯ ಮುಚ್ಚಳವನ್ನು ನೇತು ಹಾಕಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ. ಜೊತೆಗೆ ಅಕ್ಕಿ, ಸಜ್ಜೆ ಮುಂತಾದ ಆಹಾರ ಸಂಗ್ರಹಿಸಿ ನೀರಿನ ಪಕ್ಕದಲ್ಲಿಯೇ ಇಡುತ್ತೇವೆ’ ಎನ್ನುತ್ತಾರೆ ಹಿರಿಯ ವಕೀಲ ಸಯ್ಯದ್‌ ಇಬ್ರಾಹಿಂಸಾಬ್ ಜಮಾದಾರ್‌.

‘ಜಾನುವಾರುಗಳಿಗಾಗಿ ಗ್ರಾಮೀಣ ಪ್ರದೇಶದಲ್ಲಿ ನೀರಿನ ತೊಟ್ಟಿಯನ್ನು ಸ್ಥಾಪಿಸಬೇಕು. ನದಿ, ಹಳ್ಳದ ಪ್ರದೇಶದ ವ್ಯಾಪ್ತಿಯಲ್ಲಿ ಜಲಚರಗಳ ಅನುಕೂಲಕ್ಕಾಗಿ ನೀರು ಹರಿಬಿಡಬೇಕು. ಎರಡು ತಿಂಗಳ ಕಾಲ ಬೆಳೆಗೆ ನೀರು ಎಳೆದುಕೊಳ್ಳಬಾರದು’ ಎಂಬ ಸಲಹೆಯನ್ನು ರೈತ ಮುಖಂಡ ಭಾಸ್ಕರರಾವ ಮುಡಬೂಳ ಮನವಿ ಮಾಡಿದ್ದಾರೆ.

***

‘ನೀರಿನ ಅರವಟಿಗೆ ಸ್ಥಾಪನೆಯಾಗಲಿ’

ಯಾದಗಿರಿ ನಗರ ಸೇರಿದಂತೆ ಶಹಾಪುರ, ಸುರಪುರ, ಕೆಂಭಾವಿ, ಕಕ್ಕೇರಾ ಸೇರಿದಂತೆ ವಿವಿಧ ಕಡೆ ನೀರಿನ ಅರವಟಿಗೆ ಸ್ಥಾಪನೆ ಮಾಡಲು ಸಂಘ–ಸಂಸ್ಥೆಗಳು ಮುಂದಾಗಬೇಕಿದೆ.

ಈಗಾಗಲೇ ಹುಣಸಗಿ, ಗುರುಮಠಕಲ್‌ ಪಟ್ಟಣದಲ್ಲಿ ಅಲ್ಲಲ್ಲಿ ಒಂದೊಂದು ಕುಡಿಯುವ ನೀರಿನ ಅರವಟಿಗೆ ಸ್ಥಾಪನೆ ಮಾಡಲಾಗಿದೆ. ಉಳಿದ ಕಡೆಯೂ ಸ್ಥಾಪನೆ ಮಾಡಬೇಕಾಗಿದೆ.

‘ಪ್ರಸಕ್ತ ವರ್ಷ ಚುನಾವಣೆಯ ಪರ್ವ ಆಗಿದ್ದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅರವಟಿಗೆ ಸ್ಥಾಪಿಸುವ ಬಗ್ಗೆ ಆಯಾ ರಾಜಕೀಯ ಪಕ್ಷದ ಮುಖಂಡರು ಚಿಂತನೆ ನಡೆಸಿದ್ದಾರೆ’ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಮುಖಂಡರು ಒಬ್ಬರು.

**********

ಪ್ರಯಾಣಿಕರಿಗೆ ಸಹಕಾರಿಯಾದ ಅರವಟಿಗೆ

ಹುಣಸಗಿ: ಪಟ್ಟಣದ ಬಸ್ ನಿಲ್ದಾಣದ ಬಳಿ ಕಳೆದ 8 ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರಿನ ಅರವಟಿಗೆಗಳನ್ನು ಕಲ್ಪಿಸಲಾಗುತ್ತದೆ. ಕಳೆದ 15 ದಿನಗಳ ಹಿಂದೆ ಅರವಟಿಗೆ ಆರಂಭಿಸಲಾಗಿದೆ.

ಬಸ್ ನಿಲ್ದಾಣದಲ್ಲಿ ಡಿಪೋದಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಆದರೆ, ಈ ಅರವಟಿಗೆಯಿಂದ ಸಾರ್ವಜನಿಕರಿಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಕುಡಿಯುವ ನೀರಿಗಾಗಿ ಹೊಟೇಲ್‌ಗಳ ಮೊರೆ ಹೋಗುವದು ಅನಿವಾರ್ಯವಾಗಿತ್ತು ಎಂದು ವಿದ್ಯಾರ್ಥಿಗಳು ಹೇಳಿದರು.

’ಬಸ್‌ ನಿಲ್ದಾಣದಲ್ಲಿ ಕಳೆದ ಎಂಟು ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೀರಿನ ಅರವಟಿಗೆ ಸ್ಥಾಪನೆ ಮಾಡಿಕೊಂಡು ಬರಲಾಗುತ್ತಿದೆ‘ ಎಂದು ಆಯೋಜಕ ಶ್ರೀಶೈಲ ವೈಲಿ ಹೇಳಿದರು.

‘ಪ್ರತಿದಿನ ಎರಡು ಬಾರಿ ಗಡಿಗೆಗಳನ್ನು ತೊಳೆದು ತುಂಬಿಸಲಾಗುತ್ತದೆ. ಅದಕ್ಕಾಗಿ ಒಂದು ದೊಡ್ಡ ನೀರಿನ ತೊಟ್ಟಿಯನ್ನು ಅಳವಡಿಸಲಾಗಿದ್ದು, ಬೆಳಿಗ್ಗೆ ಮತ್ತು ಮಧ್ಯಾಹ್ನ ನೀರನ್ನು ತುಂಬಿಸಲಾಗುತ್ತದೆ‘ ಎಂದು ವಿವರಿಸಿದರು.

‘ಸಾರ್ವಜನಿಕರಿಗೆ ಈ ನೀರಿನ ಅರವಟಿಗೆಯಿಂದ ತುಂಬಾ ಅನುಕೂಲವಾಗಿದೆ‘ ಎಂದು ಸಂಚಾರ ನಿಯಂತ್ರಕ ಶಾಂತಗೌಡ ಹೇಳಿದರು.

***

ಜಾನುವಾರುಗಳಿಗೆ ಗ್ರಾಮೀಣ ಭಾಗದಲ್ಲಿ ತೊಟ್ಟಿ ನಿರ್ಮಿಸಲಾಗಿದೆ. ದುರಸ್ತಿ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ
ಬಸವರಾಜ ಶರಭೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ

***

ನಗರದಲ್ಲಿ ನೀರಿನ ಅರವಟಿಗೆ ಸ್ಥಾಪಿಸುವ ಯಾವ ಪ್ರಸ್ತಾವ ಇಲ್ಲ. ಶುದ್ಧ ನೀರಿನ ಘಟಕಗಳು, ಕಿರು ನೀರು ಸರಬರಾಜು ವ್ಯವಸ್ಥೆ ಇದೆ
ಶಾಂತಪ್ಪ ಹೊಸೂರ, ಎಇಇ, ನಗರಸಭೆ, ಸುರಪುರ

***

ನೀರಿನ ಅರವಟಿಗೆ ವ್ಯವಸ್ಥೆ ಮಾಡುವ ಯೋಜನೆ ಪಂಚಾಯಿತಿಗಳಿಗಿಲ್ಲ. ಬೇಡಿಕೆ ಬಂದಾಗ ಅಥವಾ ಮಾನವೀಯತೆ ದೃಷ್ಟಿಯಿಂದ ಇತರ ಖರ್ಚುಗಳು ಹಾಕಿ ವ್ಯವಸ್ಥೆ ಮಾಡಲಾಗುವುದು
ಡಿ.ಎನ್. ಹಳ್ಳಿ, ಪಿಡಿಒ ದೇವಾಪುರ

***

ಬೇಸಿಗೆ ದಿನದಲ್ಲಿ ನಗರಸಭೆ ಮತ್ತು ಪಂಚಾಯಿತಿಗಳು ಕಡ್ಡಾಯವಾಗಿ ನೀರಿನ ಅರವಟಿಗೆ ಮತ್ತು ತೊಟ್ಟಿಗಳ ವ್ಯವಸ್ಥೆ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಬೇಕು
ರಾಜಾ ರಾಮಪ್ಪನಾಯಕ ಜೇಜಿ, ಪುರಸಭೆ ಮಾಜಿ ಸದಸ್ಯ, ಸುರಪುರ

***

ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ಮನೆಯ ಮುಂದಿನ ಗಿಡದ ಟೊಂಗೆಗೆ ಪಕ್ಷಿಗಳ ಅನುಕೂಲಕ್ಕಾಗಿ ಕುಡಿಯುವ ನೀರಿನ ಪಾತ್ರೆ ಹಾಕಿ ನೀರುಣಿಸುವ ಕೆಲಸ ಮಾಡಿದರೆ ಪಕ್ಷಿಗಳಿಗೆ ಅನುಕೂಲವಾಗುತ್ತದೆ
ಸೈಯದ್‌ ಇಬ್ರಾಹಿಂಸಾಬ್ ಜಮದಾರ
ವಕೀಲ, ಶಹಾಪುರ

***

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.