ADVERTISEMENT

ಯಾದಗಿರಿ | ಏರುತ್ತಿರುವ ತಾಪಮಾನ: ಕಲ್ಲಂಗಡಿಗೆ ಬೇಡಿಕೆ

ಯಾದಗಿರಿ–ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಬೀಡುಬಿಟ್ಟ ಹಣ್ಣಿನ ವ್ಯಾಪಾರಿಗಳು

ಬಿ.ಜಿ.ಪ್ರವೀಣಕುಮಾರ
Published 8 ಫೆಬ್ರುವರಿ 2024, 6:19 IST
Last Updated 8 ಫೆಬ್ರುವರಿ 2024, 6:19 IST
ಯಾದಗಿರಿ–ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಪಿನ ವ್ಯಾಪಾರ ಭರ್ಜರಿ ನಡೆದಿದೆ
ಯಾದಗಿರಿ–ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಪಿನ ವ್ಯಾಪಾರ ಭರ್ಜರಿ ನಡೆದಿದೆ   

ಯಾದಗಿರಿ: ಜಿಲ್ಲೆಯಲ್ಲಿ ಫೆಬ್ರುವರಿ ತಿಂಗಳ ಆರಂಭದಿಂದಲೂ ಬಿಸಿಲ ತಾಪಮಾನ ಏರಿಕೆಯಾಗಿದ್ದು, ಜನತೆ ಬಿಸಿಲಿನ ಬೇಗೆ ನಿಗಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗಿರುವುದು ಕಂಡು ಬರುತ್ತಿದೆ.

ಬಿಸಿಲು ನಗರ ಎಂಬ ಖ್ಯಾತಿ ಪಡೆದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಬೇಸಿಗೆ ವೇಳೆ ತಾಪಮಾನ ಹೆಚ್ಚಾಗಿರುತ್ತದೆ. ಜನರು ತಾಪಮಾನ ತಗ್ಗಿಸಲು ಕಲ್ಲಂಗಡಿ, ತಂಪು ಪಾನೀಯ, ಎಳನೀರು, ಕಬ್ಬಿನ ಹಾಲು ಇತ್ಯಾದಿಗಳಿಗೆ ಜನ ಮಾರುಹೋಗುತ್ತಿದ್ದಾರೆ.

ಗರಿಷ್ಠ 36 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ ಡಿಗ್ರಿ 22 ಸೆಲ್ಸಿಯಸ್‌ ತಾಪಮಾನ ಜಿಲ್ಲೆಯಲ್ಲಿ ದಾಖಲಾಗುತ್ತಿದೆ. ಇನ್ನೂ ಮೂರು ತಿಂಗಳ ಕಾಲ ಭರ್ಜರಿ ಬಿಸಿಲು ಇರಲಿದೆ. ಆರಂಭದಲ್ಲೇ ತಾಪಮಾನ ಹೆಚ್ಚಿದೆ. ಈ ಬಾರಿ ಬರಗಾಲ ಇರುವುದರಿಂದ ಮತ್ತಷ್ಟು ಬಿಸಿಲಿನ ಬೇಗೆ ಹೆಚ್ಚಾಗುವ ಸಾಧ್ಯತೆ ಇದೆ.

ADVERTISEMENT

ನಗರ ಹೊರವಲಯದಲ್ಲಿ ಕಳೆದ ಒಂದು ವಾರದಿಂದ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಗುರುಸಣಿಗಿ ಕ್ರಾಸ್ ಬಳಿ ಕಲ್ಲಂಗಡಿ ಹಣ್ಣುಗಳ ಮಾರಾಟದ ವ್ಯಾಪಾರ ಭರ್ಜರಿಯಿಂದ ನಡೆದಿದೆ. ಹೆದ್ದಾರಿ ಮೇಲೆ ಸಂಚರಿಸುವ ವಾಹನ ಸವಾರರು, ಕಾರು ಪ್ರಯಾಣಿಕರು, ಪ್ರವಾಸಿಗರು ಕಲ್ಲಂಗಡಿ ಹಣ್ಣುಗಳನ್ನು ಖರೀದಿಸುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.

ದರ ನಿಗದಿ:

ಹೆದ್ದಾರಿಯಲ್ಲಿ ಸಂಚರಿಸುವ ಸವಾರರು ತಾಪಮಾನದ ದಾಹ ತೀರಿಸಿಕೊಂಡು, ಮುಂದೆ ಪ್ರಯಾಣ ಬೆಳೆಸುತ್ತಿದ್ದಾರೆ. ಜಿಲ್ಲೆಯ ಹತ್ತಿಕುಣಿ, ಗುಂಜನೂರ, ಖಾನಾಪುರ ಇತ್ಯಾದಿ ಊರುಗಳ ರೈತರ ಜಮೀನುಗಳಿಗೆ ತೆರಳಿ ಕಲ್ಲಂಗಡಿ ಹಣ್ಣುಗಳು ವ್ಯಾಪಾರಸ್ಥರು ಖರೀದಿಸುತ್ತಾರೆ. ಬೇಸಿಗೆಯಲ್ಲಿ ವ್ಯಾಪಾರಸ್ಥರು ವಹಿವಾಟು ನಡೆಸುತ್ತಾರೆ. ಹಣ್ಣಿನ ಗಾತ್ರದ ಮೇಲೆ ದರ ನಿಗದಿಯಾಗಿದೆ. ಸಣ್ಣ ಗಾತ್ರದ ಹಣ್ಣಿಗೆ ₹20, ₹50ಗೆ ಎರಡು, ದೊಡ್ಡ ಗಾತ್ರದ 1 ಹಣ್ಣಿಗೆ ₹50 ರಿಂದ ₹70 ರೂ ತನಕ ದರ ನಿಗದಿ ಮಾಡಲಾಗಿದೆ.

‘ಜಿಲ್ಲೆಯ ಹತ್ತಿಕುಣಿ, ಗುಂಜನೂರು, ಖಾನಾಪುರ ಹಲವಾರು ಗ್ರಾಮಗಳಲ್ಲಿ ರೈತರ ಜಮೀನುಗಳಲ್ಲಿ ನೇರವಾಗಿ ಹೋಗಿ ಕಲ್ಲಂಗಡಿ ಹಣ್ಣುಗಳನ್ನು ಖರೀದಿ ಮಾಡುತ್ತೇವೆ. ಗ್ರಾಹಕರ ಕೈಗೆಟುಕುವ ದರದಲ್ಲಿ ಹಣ್ಣಿನ ಗಾತ್ರದಂತೆ ದರ ನಿಗದಿಗೊಳಿಸಿದ್ದೇವೆ. ಇದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿಗಳು.

‘ಕೆರೆಯಲ್ಲಿ ನೀರು ಬೇಗ ಖಾಲಿಯಾಗಿದ್ದರಿಂದ ಬೇಗನೇ ಸೀಸನ್‌ ಆರಂಭವಾಗಿದ್ದು, ಉತ್ತಮ ಇಳುವರಿ ಬಂದಿದೆ. ಹೀಗಾಗಿ ವ್ಯಾಪಾರಕ್ಕೆ ಇಳಿದಿದ್ದೇವೆ. ಹಣ್ಣುಗಳ ಮಾರಾಟದ ಮೂಲಕ ಆದಾಯ ಪಡೆಯಲು ಮುಂದಾಗಿದ್ದೇವೆ’ ಎನ್ನುತ್ತಾರೆ ರವಿ ಹತ್ತಿಕುಣಿ.

ಗ್ರಾಹಕರು ಚೌಕಾಸಿ ಮಾಡಿ ಕಡಿಮೆ ದರ ಕೊಟ್ಟು ಹಣ್ಣುಗಳನ್ನು ಖರೀದಿ ಮಾಡುತ್ತಾರೆ. ಬೇಸಿಗೆ ಸೀಸನ್ ಮುಗಿಯುತನಕ ಗ್ರಾಹಕರಿಗೆ ತಂಪಾದ ಸಿಹಿ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿದೆ
- ರವಿ ಹತ್ತಿಕುಣಿ ಕಲ್ಲಂಗಡಿ ವ್ಯಾಪಾರಿ
ರಾಜ್ಯ ಹೆದ್ದಾರಿಯಲ್ಲಿ ಹಣ್ಣುಗಳು ಸಿಗುವುದರಿಂದ ಯಾದಗಿರಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ವಾಹನ ನಿಲುಗಡೆಗೆ ಸಮಸ್ಯೆ ಇರುವುದಿಲ್ಲ. ಹಣ್ಣುಗಳನ್ನು ಖರೀದಿ ಮಾಡಿಕೊಂಡು ಹೋಗುತ್ತೇವೆ.
-ನಾಗಪ್ಪ ನಾಯ್ಕಲ್ ಬೈಕ್‌ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.