ADVERTISEMENT

ಯಾದಗಿರಿ | ರಸ್ತೆ ಅಪಘಾತ: ವರ್ಷದಲ್ಲಿ 130 ಸಾವು

ಡಿ.1ರಿಂದ ಹೆಲ್ಮೆಟ್‌ ಧರಿಸುವುದು ಕಡ್ಡಾಯ: ಜಾಗೃತಿ ಮೂಡಿಸಲು ಅಭಿಯಾನ

ಬಿ.ಜಿ.ಪ್ರವೀಣಕುಮಾರ
Published 24 ನವೆಂಬರ್ 2024, 6:41 IST
Last Updated 24 ನವೆಂಬರ್ 2024, 6:41 IST
ಪೃಥ್ವಿಕ್‌ ಶಂಕರ್
ಪೃಥ್ವಿಕ್‌ ಶಂಕರ್   

ಯಾದಗಿರಿ: ಜಿಲ್ಲೆಯ ಬಹುತೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಶೇ 95ರಷ್ಟು ತಲೆಗೆ ಗಂಭೀರ ಗಾಯವಾಗಿ ಸವಾರರು, ಹಿಂಬದಿ ಸವಾರರು ಮೃತಪಟ್ಟ ಘಟನೆಗಳು ಹೆಚ್ಚಿದ್ದು, ಒಂದು ವರ್ಷದ ಅವಧಿಯಲ್ಲಿ 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಡಿ.1ರಿಂದ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್‌ ಇಲಾಖೆ ಸನ್ನದ್ಧವಾಗಿದೆ.

ಜಿಲ್ಲೆಯಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ಬೈಕ್‌, ಟಂಟಂ ಆಟೊ, ಜೀಪು, ಕಾರು, ಸರಕು ವಾಹನಗಳಲ್ಲಿ ಮತ್ತು ತ್ರಿಬಲ್ ರೈಡಿಂಗ್‌, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು, ಹೆಲ್ಮೆಟ್‌, ಸೀಟು ಬೆಲ್ಟ್‌ ಧರಿಸದೇ ವಾಹನ ಚಾಲನೆ, ಮದ್ಯಪಾನ ಮಾಡಿ ಚಾಲನೆ, ವಾಹನಗಳ ಮೇಲ್ಭಾಗದಲ್ಲಿ ಕುಳಿತು ಪ್ರಯಾಣ, ಸಿಗ್ನಲ್‌ ಜಂಪ್‌, ಪ್ರಯಾಣಿಕರ ಆಟೊಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಕರೆದೊಯ್ಯುವ ಪ್ರಕರಣಗಳು ಜರುತ್ತಲೆ ಇವೆ.

ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದು ಸೇರಿ  ಇನ್ನಿತರ ಕಾರಣಗಳಿಂದ ಹಲವಾರು ಜನರು ಶಾಶ್ವತ ಅಂಗವಿಕಲತೆ ಮತ್ತೆ ಅಂಗಹೀನತೆಗೆ ಒಳಗಾಗಿದ್ದಾರೆ. ಹಲವು ಕಂದಮ್ಮಗಳು ಪೋಷಕರ ನಿರ್ಲಕ್ಷ್ಯದಿಂದ ಅಪಘಾತದಲ್ಲಿ ಮೃತಪಟ್ಟಿವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್‌ ಪಡೆ ವಿನೂತನ ಪ‍್ರಯೋಗಕ್ಕೆ ಮುಂದಾಗಿದೆ. 

ADVERTISEMENT

ಯಾದಗಿರಿ ನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 58 ಜನ ರಸ್ತೆ ಅಪಘಾತ ಪ್ರಕರಣಗಳಿಂದ ಸಾವನ್ನಪ್ಪಿದ್ದಾರೆ.

2022ರಲ್ಲಿ 21 ಜನ ಸಾವು, 12 ಜನ ಗಾಯಗೊಂಡಿದ್ದಾರೆ. ಮಾರಣಾಂತಿಕವಲ್ಲದ 183 ಪ್ರಕರಣಗಳಿವೆ.

2023ರಲ್ಲಿ ರಸ್ತೆ ಅಪಘಾತದಿಂದ 17ಜನ ಮೃತಪಟ್ಟಿದ್ದರೆ, 8 ಜನ ಗಾಯಗೊಂಡಿದ್ದಾರೆ. ಗಂಭೀರವಲ್ಲದ 146 ಪ್ರಕರಣಗಳಿವೆ.

2024ರ ಅಕ್ಟೋಬರ್‌ 31ರ ವರೆಗೆ 20 ಜನ ಸಾವು, 10 ಜನ ಗಾಯಗೊಂಡಿದ್ದಾರೆ. 126 ಮಾರಾಣಾಂತಿಕವಲ್ಲದ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಇವು ಕೇವಲ ಪ್ರಕರಣ ದಾಖಲಾಗಿದ್ದು ಮಾತ್ರ ಇದ್ದು, ದಾಖಲಾಗದೆ ಇರುವುದು ಇನ್ನೂ ಹೆಚ್ಚಿದೆ.

ಸಂಚಾರ ನಿಯಮ ಉಲ್ಲಂಘನೆ ದಂಡ (₹ಗಳಲ್ಲಿ) ಡಿ.ಎಲ್ ಇಲ್ಲದೇ ಪ್ರಯಾಣ;5000 ನೋಂದಣಿ ರಹಿತ ವಾಹನ ಚಾಲನೆ;5000 ಅತಿವೇಗ ಚಾಲನೆ;2000 ಅಪಾಯಕಾರಿ ಚಾಲನೆ;5000 ಮಾನಸಿಕ ದೈಹಿಕ ನ್ಯೂನತೆ ಇದ್ದರೆ;1000 ಮಕ್ಕಳು ವಾಹನ ಚಲಾಯಿಸಿದರೆ;25000 ಪರವಾನಗಿ ರದ್ದಾದರೂ ಚಾಲನೆ;10000 ವಿಮೆ ಇಲ್ಲದೇ ಚಾಲನೆ;2000 ಸಂಚಾರ ನಿಯಮ ಉಲ್ಲಂಘನೆ; 500

‘ಬಾಡಿ ಕ್ಯಾಮೆರಾ ಇಟ್ಟು ದಂಡ’ ‘ಜಿಲ್ಲೆಯಲ್ಲಿ ಡಿ.1ರಿಂದ ಬೈಕ್‌ ಸವಾರರು ಹೆಲ್ಮೆಟ್‌ ಧರಿಸುವುದು ಕಡ್ಡಾಯಾಗಿದೆ. ಇದು ಸುಪ್ರೀಂ ಕೋರ್ಟ್‌ ಆದೇಶದಂತೆ ಜಾರಿ ಮಾಡಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೃಥ್ವಿಕ್‌ ಶಂಕರ್‌. ‘ನಗರ ಪ್ರದೇಶದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಹೆಲ್ಮೆಟ್‌ ಜಾಗೃತಿ ಮೂಡಿಸಲಿದ್ದಾರೆ. ಬಾಡಿ ಕ್ಯಾಮೆರಾ ಪೊಲೀಸರು ಧರಿಸಿ ದಂಡ ವಿಧಿಸುವ ಯೋಜನೆ ರೂಪಿಸಲಾಗಿದೆ. ಹೆಲ್ಮೆಟ್‌ ಧರಿಸದ ವಾಹನ ಸವಾರರಿಗೆ ₹500 ದಂಡ ವಿಧಿಸಲಾಗುತ್ತಿದೆ. ಈಗಾಗಲೇ ಹೆಲ್ಮೆಟ್‌ ಡೀಲರ್‌ ಜತೆ ಮಾತನಾಡಿ ಜಾಗೃತಿ ಮೂಡಿಸುವ ಸ್ಥಳದಲ್ಲಿ ಹೆಲ್ಮೆಟ್‌ ಇಡಲು ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದವರು ದಂಡ ಕಟ್ಟಬಹುದು ಅಥವಾ ಹೆಲ್ಮೆಟ್‌ ಖರೀದಿಸಬಹುದು. ವಾರದಲ್ಲಿ ಎರಡು ಇಂಥ ಜಾಗೃತಿ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಲಾಗಿದೆ. ಕಾರಿನ ಸೀಟ್‌ ಬೆಲ್ಟ್‌ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು’ ಎಂದೂ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.