ಯಾದಗಿರಿ: ತಾಲ್ಲೂಕಿನ ಸುಕ್ಷೇತ್ರ, ಗುಹಾಂತರ ದೇವಾಲಯ ಮೈಲಾಪುರ ಮೈಲಾರಲಿಂಗೇಶ್ವರ ದೇಗುಲಕ್ಕೆ ರೋಪ್ ವೇ ನಿರ್ಮಾಣ ಮಾಡುವ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ ರೂಪಿಸುತ್ತಿದ್ದು, ಈಚೆಗೆ ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ಸಿಕ್ಕಿದೆ.
ಮೈಲಾರಲಿಂಗೇಶ್ವರ ದೇವರು ರಾಜ್ಯದವರಲ್ಲದೇ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಲ್ಲೂ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದೆ. ಹೀಗಾಗಿ ಈ ಭಾಗದ ಪ್ರಮುಖ ದೇವಸ್ಥಾನವೂ ಆಗಿದೆ. ಹೀಗಾಗಿ ಭಕ್ತರು ಮತ್ತು ಚಾರಣಿಗರನ್ನು ಸೆಳೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮೈಲಾರಲಿಂಗ ದೇವರ 77 ಕ್ಷೇತ್ರಗಳ ಪೈಕಿ ಮೈಲಾಪುರ ಕೊನೆಯ ಕ್ಷೇತ್ರವಾಗಿದೆ. ದೇಶದ 77 ಕ್ಷೇತ್ರಗಳಲ್ಲಿ ಒಂದೊಂದು ಅವತಾರದಲ್ಲಿ ಮೈಲಾರಲಿಂಗ ದೇವರು ಕಾಣಿಸಿಕೊಂಡಿದ್ದಾರೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಗುಹಾಂತರ ದೇವಾಲಯದಲ್ಲಿ ಒಂದೇ ಬೃಹತ್ ಕಲ್ಲು ಬಂಡೆ ಇದ್ದು, ಮೂರು ಕಡೆಯೂ ದೇವಸ್ಥಾನ ನಿರ್ಮಿಸಲಾಗಿದೆ. ಮೈಲಾರಲಿಂಗೇಶ್ವರ ದೇವರಿಗೆ ಇಬ್ಬರು ಪತ್ನಿಯರಿದ್ದು, ಧರ್ಮಪತ್ನಿ ಗಂಗಿ ಮಾಳಮ್ಮ, ಎರಡನೇ ಪತ್ನಿ ತುರಂಗ ಬಾಲಮ್ಮ ಇಬ್ಬರಿಗೂ ದೇಗುಲ ನಿರ್ಮಿಸಲಾಗಿದೆ.
ದೇವಸ್ಥಾನಕ್ಕೆ 600ರಿಂದ 700 ವರ್ಷಗಳ ಇತಿಹಾಸ ಇದೆ. 6 ಕುಟುಂಬಗಳು ಇಲ್ಲಿ ಪೂಜಾರಿಕೆ ಮಾಡಿಕೊಂಡು ಬರುತ್ತಿವೆ. ವರ್ಷದಲ್ಲಿ ಎರಡು ಬಾರಿ ಜಾತ್ರೆ, ಉತ್ಸವ ನಡೆಯುತ್ತದೆ. ದೀಪಾವಳಿ, ಸಂಕ್ರಾತಿ ದಿನ ಇಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ನಡೆಯುತ್ತವೆ.
ಏನಿದು ರೋಪ್ ವೇ: ರೋಪ್ ವೇ ಹೆಸರೇ ಹೇಳುವಂತೆ ಹಗ್ಗಗಳಿಂದ ಮಾಡಲಾದ ಮಾರ್ಗ ಎಂದಾಗಿದೆ. ಹಗ್ಗಗಳ ಅಥವಾ (ರೋಪ್‌ಗಳ) ಮೂಲಕ ಅವುಗಳನ್ನು ನಿಯಂತ್ರಿಸುವ ವಾಹಕಗಳಿಂದ ವಸ್ತುಗಳನ್ನು ಅಥವಾ ಪ್ರಯಾಣಿಕರನ್ನು ಸಾಗಿಸುವಂತಹ ವ್ಯವಸ್ಥೆಯಾಗಿದೆ. ಇದು ಮಲ್ಲಯ್ಯನ ದೇಗುಲದಲ್ಲಿ ಜಾರಿಯಾದರೆ ಭಕ್ತರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆ ಇದೆ.
ಸ್ಥಳ ಪರಿಶೀಲನೆ ನಡೆದಿತ್ತು: ಇದೇ ವರ್ಷದ ಜನವರಿ 8ರಂದು ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುವ ಬೆಂಗಳೂರು ಮೂಲದ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯೊಂದು ಮೈಲಾಪುರದಲ್ಲಿ ರೋಪ್ ವೇ ನಿರ್ಮಾಣಕ್ಕೆ ಸಂಬಂಧ ಪರಿಶೀಲನೆ ನಡೆಸಿತ್ತು. ಅಧ್ಯಯನ ನಡೆಸಿ ವರದಿ ಸಲ್ಲಿಸಲು ಕೋರಿದ ಹಿನ್ನೆಲೆಯಲ್ಲಿ ತಂಡದ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿದ್ದರು.
ಎಲ್ಲೆಲ್ಲಿ ರೋಪ್ ವೇ ಅಥವಾ ಕೇಬಲ್ ಕಾರ್?: ರಾಜ್ಯದಲ್ಲಿ ವಿವಿಧೆಡೆ ಪ್ರವಾಸೋದ್ಯಮ ಉತ್ತೇಜನೆ ನೀಡಲು ಸರ್ಕಾರ ನಿರ್ಧರಿಸಿದೆ. ಅದರಂತೆ ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟ, ಸವದತ್ತಿ ಯಲ್ಲಮ್ಮನ ಗುಡ್ಡ, ಹಾವೇರಿ ಜಿಲ್ಲೆಯ ದೇವರಗುಡ್ಡ, ಗದಗ ಜಿಲ್ಲೆಯ ಹೊಳಲಮ್ಮನ ದೇವಸ್ಥಾನ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಗದಗ ಜಿಲ್ಲೆಯ ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನ, ಯಾದಗಿರಿ ಕೋಟೆ, ಬಳ್ಳಾರಿ ಕೋಟೆ, ಮಲ್ಲಳ್ಳಿ ಫಾಲ್ಸ್ ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿ ಶಾಂತಹಳ್ಳಿ ಹೋಬಳಿ ಕೊಡಗು ಜಿಲ್ಲೆ, ಯಾದಗಿರಿ ಜಿಲ್ಲೆಯ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ರೋಪ್ ವೇ ಅಥವಾ ಕೇಬಲ್ ಕಾರ್ ವ್ಯವಸ್ಥೆಗೆ ಸರ್ಕಾರ ನಿರ್ಧರಿಸಿದೆ.
ಯಾದಗಿರಿ ತಾಲ್ಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೋಪ್-ವೇ ಅಭಿವೃದ್ದಿಪಡಿಸಲು ತಾತ್ವಿಕ ಅನುಮೋದನೆ ನೀಡಲಾಗಿರುವ ಕುರಿತು ಆದೇಶ ಬಂದಿದೆ.–ರಾಮಚಂದ್ರ ಕಟ್ಟಿಮನಿ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ಯಾದಗಿರಿ
ಕಲ್ಯಾಣ ಕರ್ನಾಟಕದ ಪ್ರಸಿದ್ಧ ದೇಗುಲವಾಗಿರುವ ಮಲ್ಲಯ್ಯ ದೇಗುಲಕ್ಕೆ ರೋಪ್ ವೇ ಶೀಘ್ರದಲ್ಲಿ ಜಾರಿ ಮಾಡಬೇಕು. ಈಗಾಗಲೇ ಸ್ಥಳ ಪರಿಶೀಲನೆ ನಡೆದಿದ್ದು ಕೂಡಲೇ ಸಂಬಂಧಿಸಿದವರು ಕಾರ್ಯಪ್ರವೃತ್ತರಾಗಬೇಕು.–ಮಲ್ಲಿಕಾರ್ಜುನರೆಡ್ಡಿ, ಮೈಲಾರಲಿಂಗೇಶ್ವರ ಭಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.