ಯರಗೋಳ: ಕೋವಿಡ್ ವೇಳೆ ಚಾಲಕ ವೃತ್ತಿಯನ್ನು ಬಿಟ್ಟು ಗ್ರಾಮಕ್ಕೆ ಮರಳಿ ತುಂಡು ಭೂಮಿಯಲ್ಲಿ ಗುಲಾಬಿ ಕೃಷಿ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಸ್.ಹೊಸಳ್ಳಿ ಗ್ರಾಮದ ರೈತ ಮುಕ್ತಾರ್ ಪಟೇಲ್.
ಹನಿ ನೀರಾವರಿ ಮೂಲಕ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಹಾಗೂ ನರೇಗಾ ಯೋಜನೆಯ ನೆರವಿನಿಂದ ರೈತ ಮುಕ್ತಾರ್ ಪಟೇಲ್ ‘ಬುಲೆಟ್’ ತಳಿಯ ಗುಲಾಬಿ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.
2022ರ ಅಕ್ಟೋಬರ್‌ನಲ್ಲಿ ₹16ಕ್ಕೆ ಒಂದರಂತೆ 1000 ಗುಲಾಬಿ ಸಸಿಗಳನ್ನು ತಂದು ಅರ್ಧ ಎಕರೆ ಹೊಲದಲ್ಲಿ 2-3 ಅಡಿಗಳ ಅಂತರದಲ್ಲಿ ನಾಟಿ ಮಾಡಿದ್ದರು. ಎರಡು ದಿನಗಳಿಗೊಮ್ಮೆ ನೀರುಣಿಸಿದ್ದಾರೆ. ನಾಲ್ಕು ತಿಂಗಳುಗಳ ನಂತರ ಗುಲಾಬಿ ಹೂವು ಬಿಡಲು ಆರಂಭಿಸಿದೆ. ಪ್ರತಿನಿತ್ಯ ಬೆಳಗಿನ ಸಮಯ ಕಟಾವು ಮಾಡಿ ಯಾದಗಿರಿ ನಗರದ ಮಾರುಕಟ್ಟೆಯಲ್ಲಿ ₹100ಕ್ಕೆ ಕೆಜಿ ಮಾರಾಟ ಮಾಡುತ್ತಾರೆ.
ಪ್ರತಿನಿತ್ಯ 10–15 ಕೆ.ಜಿ ಗುಲಾಬಿ ಹೂ ಕಟಾವು ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ 2 ತಿಂಗಳಿಗೊಮ್ಮೆ ಗೊಬ್ಬರ ಹಾಗೂ ವಾರಕ್ಕೆ ಎರಡು ಸಲ ಕೀಟನಾಶಕ ಸಿಂಪಡಣೆ ಮಾಡಲಾಗಿದೆ. ಕೀಟಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ಬಲೆ ಅಳವಡಿಸಲಾಗಿದೆ ಎನ್ನುತ್ತಾರೆ ರೈತ ಮುಕ್ತಾರ್ ಪಟೇಲ್.
ಗುಲಾಬಿ ಕೃಷಿಯ ಜೊತೆ ನುಗ್ಗೆಕಾಯಿ, ರೇಷ್ಮೆ ವ್ಯವಸಾಯ ಮಾಡಲು ಆರಂಭಿಸಿದ್ದೇನೆ. ಇದರಲ್ಲಿಯೂ ಲಾಭಗಳಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ರೈತ ಮುಕ್ತಾರ್ ಪಟೇಲ್.
ಗುಲಾಬಿ ಕೃಷಿಗೆ ಇಲ್ಲಿಯವರೆಗೆ ಗೊಬ್ಬರ ಕೀಟನಾಶಕ ಸಾರಿಗೆ ವೆಚ್ಚ ಕೂಲಿ ಸೇರಿ ₹1.50 ಲಕ್ಷ ಖರ್ಚಾಗಿದೆ. ನರೇಗಾ ಯೋಜನೆಯಡಿ ಸೌಲಭ್ಯ ಪಡೆದಿದ್ದೇನೆ. ಸರ್ಕಾರದ ಯೋಜನೆಗಳನ್ನು ರೈತರು ಬಳಸಿಕೊಳ್ಳಬೇಕುಮುಕ್ತಾರ್ ಪಟೇಲ್ ರೈತ
ನರೇಗಾ ಯೋಜನೆ ಅಡಿ ಮುಕ್ತಾರ್ ಪಟೇಲ್ ಅವರ ಹೊಲದಲ್ಲಿ 228 ಮಾನವ ದಿನ ಕೆಲಸ ಮಾಡಲಾಗಿದೆ. ₹70452 ಕೂಲಿ ಪಾವತಿಸಲಾಗಿದೆಸುಂದರೇಶ್ ಕುಲಾಲ್ ಸಹಾಯಕ ತೋಟಗಾರಿಕೆ ಅಧಿಕಾರಿ ಯಾದಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.