ಶಹಾಪುರ: ನಗರದ ಹನುಮಾನ ದೇವಸ್ಥಾನ ಭಕ್ತಿಯ ಕೇಂದ್ರದ ಸ್ಥಳವಾಗಿದೆ. ದೇವಸ್ಥಾನದ ಪ್ರಾಂಗಣವು ಟಿನ್‌ಶೆಡ್‌ನಿಂದ ಕೂಡಿದೆ. ಕಟ್ಟಡ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಬಂದಿದೆ. ತಹಶೀಲ್ದಾರ್ ಸುಪರ್ದಿಯಲ್ಲಿರುವ ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಚರ್ಚಿಸಬೇಕು. ಪ್ರತಿಯೊಬ್ಬ ಭಕ್ತರು ಆರ್ಥಿಕ ನೆರವಿನ ಅಭಯ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ನಗರದ ಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತರ ಪ್ರಮುಖ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಎಷ್ಟು ಜಾಗವಿದೆ ಎಂಬುವುದು ನಿಖರವಾಗಿ ಅಳತೆ ಮಾಡಿಕೊಳ್ಳಬೇಕು. ಈಗಾಗಲೇ ದೇವಸ್ಥಾನದ ಸುತ್ತಮುತ್ತಲು ಜಾಗ ಒತ್ತವರಿಯಾಗಿ ಟಿನ್‌ಶೆಡ್ ಹಾಗೂ ಇನ್ನಿತರ ಮಳಿಗೆ ಸ್ಥಾಪಿಸಿದ್ದಾರೆ. ಅದರ ಬಗ್ಗೆ ಗಮನಹರಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಭಕ್ತರಿಂದ ದೇಣಿಗೆ ಸಂಗ್ರಹಿಸಿ ತಹಶೀಲ್ದಾರ್ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿ, ಇನ್ನಷ್ಟು ಹಣದ ಅನುಕೂಲ ಮಾಡಿಕೊಳ್ಳಬೇಕು. ಪ್ರತಿಯೊಬ್ಬರ ಶ್ರಮ ಹಾಗೂ ತ್ಯಾಗ ಅವಶ್ಯಕತೆ ಇದೆ. ನಿಗದಿತ ಅವಧಿಯಲ್ಲಿ ಕೆಲಸ ಆರಂಭಿಸಬೇಕು. ಇಲ್ಲದೆ ಹೋದರೆ ಅನುದಾನ ವಾಪಸ್ಸು ಹೋಗುವ ಭೀತಿ ಇದೆ. ಸರ್ವರಿಗೂ ಆಯಸ್ಸು, ಆರೋಗ್ಯ, ಸಮೃದ್ಧಿ ನೀಡುವ ಹನುಮಂತ ದೇವರ ಆಶೀರ್ವಾದ ನಮ್ಮೆಲ್ಲರ ಮೇಲಿದ್ದಾಗ ಎಲ್ಲಾ ಕೆಲಸ ಕಾರ್ಯ ಯಶಸ್ವಿಯಾಗುತ್ತದೆ ಎಂದರು.
ಹಿರಿಯರಾದ ಚಂದ್ರಶೇಖರ ಆರಬೋಳ, ಸಣ್ಣನಿಂಗಣ್ಣ ನಾಯ್ಕೋಡಿ, ಅಡಿವೆಪ್ಪ ಜಾಕಾ, ರುದ್ರಣ್ಣ ಚಟ್ರಿಕಿ, ಭಗವಂತ್ರಾಯ ಬಳೂಂಡಗಿ,ಗುಂಡಪ್ಪ ತುಂಬಗಿ, ಮುಸ್ತಫಾ ದರ್ಬಾನ, ಬಸವರಾಜ ಕುಂಬಾರ, ನೀಲಪ್ಪ ಚೌದರಿ, ಭೀಮರಾಯ ದೊಡ್ಡಮನಿ, ವಿಜಯ ಕುಮಾರ, ಸುರೇಶ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.