ADVERTISEMENT

ಪಿಡಿಒ ವಿರುದ್ಧ ಹೆಚ್ಚಿನ ಕ್ರಮಕ್ಕೆ ಆಗ್ರಹ

ಸೈದಾಪುರ ಪಿಡಿಒ ಅಮಾನತು; ಅವ್ಯವಹಾರದ ಹಣ ವಸೂಲಾತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 5:42 IST
Last Updated 29 ಡಿಸೆಂಬರ್ 2023, 5:42 IST
ಸೈದಾಪುರ ಗ್ರಾಮ ಪಂಚಾಯಿತಿ ಕಚೇರಿ
ಸೈದಾಪುರ ಗ್ರಾಮ ಪಂಚಾಯಿತಿ ಕಚೇರಿ   

ಸೈದಾಪುರ: ತೆರಿಗೆ ಹಣ ದುರ್ಬಳಕೆ, ಸಮಸ್ಯೆಗಳಿಗೆ ಸ್ಪಂದಿಸದ ಸೈದಾಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಅನೇಕ ಬಾರಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಡಿ.8ರಂದು ಅಮಾನತು ಮಾಡಿದ್ದಾರೆ. ಆದರೆ ದುರ್ಬಳಕೆಯಾಗಿರುವ ತೆರಿಗೆ ಹಣ ವಸೂಲಾತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿ-ನಿವೇಶನಗಳ ಸರ್ವೆ ಕಾರ್ಯ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿರುವುದು, ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜಿಸುವ ಗುರಿ ಸಾಧಿಸದಿರುವುದು, 15ನೇ ಹಣಕಾಸು ಯೋಜನೆಯ ಆರ್ಥಿಕ ಮತ್ತು ಭೌತಿಕ ಪ್ರಗತಿ ವರದಿ ನೀಡದಿರುವುದು, ಸ್ಥಳೀಯ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿರುವುದು, ಕಸ ವಿಲೇವಾರಿ ಘಟಕ ಮತ್ತು ವಾಹನದ ಬಳಕೆ ಮಾಡದಿರುವುದು, ಉಪ ಲೋಕಾಯುಕ್ತರು ಆಯೋಜನೆ ಮಾಡಿದ ಸಾರ್ವಜನಿಕರ ಅಹವಾಲು-ಕುಂದು ಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಗೆ ಗೈರು ಹಾಜರಿಯಾಗಿರುವುದು, ಮೇಲಧಿಕಾರಿಗಳ ನಿರ್ದೇಶನಗಳನ್ನು ಉಲ್ಲಂಘಿಸಿ ಕರ್ತವ್ಯ ನಿರ್ಲಕ್ಷ್ಯಸಿ ದುರ್ನಡತೆ ಪ್ರದರ್ಶಿಸಿರುವ ಹಿನ್ನಲೆಯಲ್ಲಿ ಮೇಲಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರಿಮಲ್ಲಣ್ಣ ಅವರನ್ನು ಈಚೆಗೆ ಅಮಾನತು ಮಾಡಿದ್ದಾರೆ.

ಹಲವು ಬಾರಿ ಅಮಾನತು: ಪಿಡಿಒ ಗಿರಿಮಲ್ಲಣ್ಣ ಅವರು ಈ ಹಿಂದೆ ಕಾರ್ಯನಿರ್ವಹಿಸಿದ ಹಲವು ಪಂಚಾಯಿತಿಗಳಲ್ಲಿ ಅಮಾನತುಗೊಂಡಿದ್ದಾರೆ. 2020ರಲ್ಲಿ ಯಡ್ಡಳ್ಳಿ-ಬಂದಳ್ಳಿ ಗ್ರಾಮ ಪಂಚಾಯಿತಿಯಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ಸುಮಾರು ₹27ಲಕ್ಷ ಅನುದಾನದ ಅವ್ಯವಹಾರ, 2022ರಲ್ಲಿ ವರ್ಕನಳ್ಳಿ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಸರಕು ಸಾಮಾಗ್ರಿಗಳ ಖರೀದಿಯಲ್ಲಿ ಹಗರಣ, ಪ್ರಸ್ತುತ ಸೈದಾಪುರ ಪಂಚಾಯಿತಿಯಲ್ಲಿ ಕುಡಿಯುವ ನೀರು ನಿರ್ವಹಣೆ, ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿ ಮತ್ತೆ ಅಮಾನತುಗೊಂಡಿದ್ದಾರೆ. ಈ ಅಧಿಕಾರಿಯನ್ನು ಪದೇಪದೆ ಕೇವಲ ಅಮಾನತು ಮಾಡಿ ಬೇರೆ ಪಂಚಾಯಿತಿಗಳಿಗೆ ವರ್ಗಾಯಿಸುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯ ನಿವಾಸಿ ರವಿಕುಮಾರ ಬೇಸರ ವ್ಯಕ್ತಪಡಿಸಿದರು.

ADVERTISEMENT

ರಾಜಕಾರಣಿಗಳು, ಮೇಲಧಿಕಾರಿಗಳ ಬೆಂಬಲ: ‘ಪಿಡಿಒ ಗಿರಿಮಲ್ಲಣ್ಣ ಅಮಾನತುಗೊಳ್ಳುವುದೆ ಅವರ ಅಭಿವೃದ್ಧಿಯಾಗಿದೆ. ಅಮಾನತು ಆಗುವುದು, ಮೂರು ತಿಂಗಳ ನಂತರ ಯಾವ ಪಂಚಾಯಿತಿಯಲ್ಲಿ ಹೆಚ್ಚು ಆದಾಯವಿರುತ್ತದೆಯೋ ಅಲ್ಲಿಗೆ ಹೋಗುವುದು ಸಾಮಾನ್ಯವಾಗಿದೆ. ಇದಕ್ಕೆಲ್ಲಾ ಪ್ರಭಾವಿ ರಾಜಕಾರಣಿಗಳು ಮತ್ತು ಮೇಲಧಿಕಾರಿಗಳ ಕೃಪಾಕಟಾಕ್ಷವಿದೆ’ ಎಂದು ಸ್ಥಳೀಯ ನಿವಾಸಿ ಶ್ರೀಶೈಲ ಅವರು ಆರೋಪಿಸುತ್ತಾರೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರಜಾವಾಣಿ ಅಮಾನತಾದ ಪಿಡಿಒ ಗಿರಿಮಲ್ಲಣ್ಣ ಅವರ 9113845567 ಸಂಖ್ಯೆಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಪಿಡಿಒ ಅಮಾನತುಗೊಂಡು ಸುಮಾರು 15 ದಿನ ಕಳೆದರೂ ಕೂಡ ಹೊಸದಾಗಿ ಯಾವೊಬ್ಬ ಅಧಿಕಾರಿ ಇಲ್ಲಿಯವರೆಗೂ ಕರ್ತವ್ಯಕ್ಕೆ ನಿಯೋಜನೆಗೊಂಡಿಲ್ಲ. ಇದರಿಂದ ಸಾರ್ವಜನಿಕರು ಮನರೇಗಾ, ಕಟ್ಟಡ ಪರವಾನಗಿ ಸೇರಿದಂತೆ ಇತರೆ ಕೆಲಸಗಳಿಗಾಗಿ ನಿತ್ಯ ಪಂಚಾಯಿತಿಗೆ ಆಗಮಿಸಿ ವಾಪಸ್‌ ಹೋಗುವಂತಾಗಿದೆ.

ಶಿವುಕುಮಾರ ಮುನಗಾಲ ಸ್ಥಳೀಯ ನಿವಾಸಿ
ಕಾಶಿನಾಥ ನಾಟೇಕರ್ ಜಿಲ್ಲಾಧ್ಯಕ್ಷ ಅಂಬೇಡ್ಕರ್ ಸ್ವಾಭಿಮಾನ ಸೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.