ADVERTISEMENT

ಗುರುಮಠಕಲ್: ತರಹೇವಾರಿ ತರಕಾರಿಗಳನ್ನು ಬೆಳೆದ ಸಜ್ಜಲ್ ಕುಟುಂಬ

ಕೇಶ್ವಾರ: ಎರಡು ಎಕರೆಯಲ್ಲಿ 13 ಬಗೆಯ ತರಕಾರಿಗಳು

ಎಂ.ಪಿ.ಚಪೆಟ್ಲಾ
Published 11 ಜನವರಿ 2020, 10:40 IST
Last Updated 11 ಜನವರಿ 2020, 10:40 IST
ಗುರುಮಠಕಲ್ ಹತ್ತಿರದ ಕೇಶ್ವಾರ ಗ್ರಾಮದ ರೈತ ಭಾಸ್ಕರರೆಡ್ಡಿ ಸಜ್ಜಲ್ ಅವರ ತರಕಾರಿ ತೋಟ.
ಗುರುಮಠಕಲ್ ಹತ್ತಿರದ ಕೇಶ್ವಾರ ಗ್ರಾಮದ ರೈತ ಭಾಸ್ಕರರೆಡ್ಡಿ ಸಜ್ಜಲ್ ಅವರ ತರಕಾರಿ ತೋಟ.   

ಗುರುಮಠಕಲ್: ಒಂದೆಡೆ ಹಾಗಲಕಾಯಿ, ಸೌತೆಕಾಯಿ, ಅವರೆಕಾಯಿ, ಗಜ್ಜರಿ ಮತ್ತೊಂದೆಡೆ ಟಮ್ಯಾಟೋ, ಪಾಲಕ್, ಮೆಂತೆ ಸೊಪ್ಪು, ಕೋತಂಬರಿ, ಮೂಲಂಗಿ, ಸೋಯಾಸೊಪ್ಪು, ಹಸಿಮೆಣಸು ಹೀಗೆ ಸುಮಾರು 13 ಬಗೆಯ ತರಕಾರಿಗಳನ್ನು ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದು ಯಶಸ್ವಿಯಾದ ರೈತ ಭಾಸ್ಕರರೆಡ್ಡಿಯವರು 'ತೋಟದಿಂದಲೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ' ಎನ್ನುತ್ತಾರೆ.

ಈಗಾಗಲೆ ಸುಮಾರು ಮೂರು ಬಾರಿ ಗುರುಮಠಕಲ್ ಮಾರುಕಟ್ಟೆಗೆ ಬೆಂಡೆಕಾಯಿಯನ್ನು ಮಾರಾಟ ಮಾಡಿದ ಅವರು ಇನ್ನೂ ಫಸಲಿನ ಮೊದಲ ಹಂತವಾದುದರಿಂದ ವಾರಕ್ಕೆ ಕೇವಲ 20 ರಿಂದ 30 ಕೆ.ಜಿ.ಯಷ್ಟು ಫಸಲು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವ ಸಾಧ್ಯತೆಯಿದೆ. ಕಡಿಮೆಯೆಂದರೂ ವಾರಕ್ಕೆ ಸುಮಾರ 700 ರಿಂದ 800 ರೂ.ಗಳ ಆದಾಯ ಕೇವಲ ಬೆಂಡೆಯಿಂದ ಬರುತ್ತಿದೆ.

ಮನೆಯವರೆ ಎಂಟೂ ಜನರು ತೋಟದ ಕೆಲಸದಲ್ಲಿ ತೊಡಗಿರುತ್ತೇವೆ. ಆಗಾಗ ಕೂಲಿಯವರನ್ನೂ ಕರೆಯಬೇಕಾಗುತ್ತದೆ. ತೋಟವೆಂದರೆ ನಿರಂತರ ದುಡಿಯಲೆಬೇಕು, ದುಡಿಮೆ ಹೆಚ್ಚಿದಷ್ಟು ಆದಾಯವೂ ಹೆಚ್ಚಲಿದೆ. ಇಲ್ಲಿನ ಎರಡು ಎಕರೆ ಭೂಮಿಯಲ್ಲಿ ಬೆಳೆದ ತರಕಾರಿಗಳಿಂದಲೆ ನಮ್ಮ ಮನೆಯ ದಿನನಿತ್ಯದ ಖರ್ಚು, ಹಾಗೂ ಉಳಿದ ಬೇರೆ ಜಮೀನಿನಲ್ಲಿನ ಬೆಸಾಯಕ್ಕೆ ಬೆಕಾದ ಬಂಡವಾಳ ಸಿಗುತ್ತದೆ ಎನ್ನುವುದು ಕೃಷಿಕ ಭಾಸ್ಕರರೆಡ್ಡಿ ಸಜ್ಜಲ್ ಅವರ ಅನುಭವದ ಮಾತುಗಳು.

ADVERTISEMENT

ವಾರಕ್ಕೆ ಇಂತಿಷ್ಟು ಹಣ ಕೈಗೆ ಸಿಗುವ ಬರವಸೆಯೂ ಇರುವುದರಿಂದ ಆರ್ಥಿಕ ಸ್ವಾವಲಂಭನೆಗೆ ತರಕಾರಿ ಬೆಳೆಯುವುದು ಒಳ್ಳೆಯದು. ತೋಟದ ನಿರ್ವಹಣೆಯನ್ನು ಮುತುವರ್ಜಿಯಿಂದ ಮಾಡಬೇಕಿದೆ. ಕಾಲಕ್ಕೆ ತಕ್ಕಂತೆ ಬರುವ ಬೂದಿರೋಗ, ಎಲೆಸುಟ್ಟು, ಹುಳ, ಬೇರುತಿನ್ನುವ ಕೀಟ ಬಾಧೆ, ಸೊಳ್ಳೆಗಳ ಕಾಟ ಉಂಟಾಗುವ ಸಾಧ್ಯತೆಯಿದೆ. ಅಂತಹ ಸಮಯದಲ್ಲಿ ಔಷಧ ಅಂಗಡಿಗಳಿಗೆ ಹೋಗಿ ಸಮಸ್ಯೆಯನ್ನು ವಿವರಿಸಿ ಔಷದಗಳನ್ನು ತಂದು ಸಿಂಪಡಿಸುತ್ತೇವೆ.

ತರಕರಿ ಬೆಳೆಯಲು ಮತ್ತೂ ಮಣ್ಣಿನ ಆರೋಗ್ಯಕ್ಕೆ ಕೊಟ್ಟಿಗೆ ಗೊಬ್ಬರದ ಬಳಕೆಯೆ ಉತ್ತಮ ಆದರೆ, ಇತ್ತೀಚೆಗೆ ಜಾನುವಾರುಗಳೆ ಇಲ್ಲದಂತಾಗಿರುವಾಗ ಕೊಟ್ಟಿಗೆ ಗೊಬ್ಬರ ಸಿಗುವುದು ಕಡಿಮೆಯಾಗಿದೆ. ಹೀಗಾಗಿ ರಾಸಾಯನಿಕ ಗೊಬ್ಬರಗಳನ್ನೂ ಬಳಸುತ್ತೇವೆ. ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಖಾರವಾಗಿದ್ದರೆ ಬೇಡಿಕೆ ಹೆಚ್ಚಿರುತ್ತೆ ಎಂದು ನರಸಿಂಹರೆಡ್ಡಿ.ಸಜ್ಜಲ್ ವಿವರಿಸಿದರು.

ಇಲ್ಲಿ ಎರಡು ಎಕರೆ ಜಮೀನಿದ್ದು, ಪ್ರಸ್ಥುತ ಒಂದು ಎಕರೆಯಲ್ಲಿ ತೋಟವಿದೆ. ಇನ್ನೊಂದು ಎಕರೆ ತೋಟವನ್ನು ಮಾಡಲು ತಯಾರಿ ನಡೆಸಿದ್ದೇವೆ. ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಒಂದೆ ರೀತಿಯಲ್ಲಿ ಇರುವುದಿಲ್ಲವಾದ್ದರಿಂದ ಇಂತಿಷ್ಟು ಆದಾಯ ಎಂದು ಕಡಾ ಖಂಡಿತ ಹೇಳಲಾಗುವುದಿಲ್ಲವಾದರೂ ತರಕಾರಿ ಬೆಳೆದುದರಿಂದಲೆ ಈಗ ನಮ್ಮ ಕುಟುಂಬ ಆರ್ಥಿಕವಾಗಿ ಒಂದುಷ್ಟು ಉತ್ತಮವಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.