ಕಕ್ಕೇರಾ: ಪಟ್ಟಣದಲ್ಲಿ ಕಿರಾಣಿ ಅಂಗಡಿ, ಹಿಟ್ಟಿನ ಗಿರಣಿ ಅಂಗಡಿ ವ್ಯಾಪಾರದೊಂದಿಗೆ ಸಕ್ರಿ ಕುಟುಂಬದ ಮೂವರು ಸಹೋದರರಾದಚಂದ್ರಕಾಂತ, ಸಂಗಣ್ಣ ಹಾಗೂ ಈರಣ್ಣ ಒಟ್ಟಾಗಿ ವ್ಯಾಪಾರ ಮಾಡುತ್ತಿದ್ದಾರೆ. ಪ್ರಸ್ತುತ ವ್ಯಾಪಾರದ ಜತೆಗೆ ಕೃಷಿಯಲ್ಲಿ ಯಶಸ್ಸನ್ನು ಕಾಣುತ್ತಿರುವ ಸಕ್ರಿ ಕುಟುಂಬವು ಪಪ್ಪಾಯಿ, ದಾಳಿಂಬೆ ಹಣ್ಣುಗಳನ್ನು ಬೆಳೆಯುತ್ತಿರುವುದು ವಿಶೇಷ.
ಮನೆಯಲ್ಲಿ ವಿದ್ಯಾವಂತರು, ನೌಕರಿಸ್ಥರಿದ್ದವರು ಕೃಷಿಯ ಕಡೆಗೆ ಗಮನಹರಿಸುವುದು ಕಡಿಮೆ. ಸಂಪೂರ್ಣ ಕಲ್ಲು ಮುಳ್ಳುಗಳಿಂದ ಕೂಡಿದ ಪಾಳು ಜಮೀನನ್ನು ಫಲವತ್ತತೆಯ ಜಮೀನು ಮಾಡಿರುವುದು ಇವರ ವಿಶೇಷ. ಹಾಗೆ ವಿದ್ಯುತ್, ರಸ್ತೆಯನ್ನು ಸರಿಪಡಿಸಿಕೊಂಡು ಬೆಳೆದಿರುವುದು ಗಮನಾರ್ಹ. ಆಧುನಿಕ ಕೃಷಿಯ ಜೊತೆಗೆ ಸಮಗ್ರ ಕೃಷಿಯನ್ನು ಮಾಡುತ್ತಿರುವ ಸಕ್ರಿ ಕುಟುಂಬ ಪಟ್ಟಣದ ಗೌಡಿಗೇರಿದೊಡ್ಡಿಯಲ್ಲಿ ಒಟ್ಟು 12 ಎಕರೆ ಜಮೀನಿನಲ್ಲಿ 6 ಎಕರೆ ದಾಳಿಂಬೆ ಹಾಗೂ ಪಪ್ಪಾಯಿ ಹಣ್ಣನ್ನು ಬೆಳೆದಿದೆ. ಉಳಿದ 6 ಎಕರೆ ಜಮೀನನ್ನು ಹಣ್ಣು ಬೆಳೆಯಲು ಸ್ವಚ್ಛಗೊಳಿಸುತ್ತಿದ್ದಾರೆ.
‘ಒಟ್ಟು 9 ಬೋರ್ ಹಾಕಿಸಿದ್ದೀವಿ. ಆದರೆ ಅದರಲ್ಲಿ 3 ಮಾತ್ರ ನೀರು ಬಂದಿದೆ, ಸುಮಾರು ₹3 ಲಕ್ಷ ಬೋರವೆಲ್‌ಗೆ ಖರ್ಚು ಆಗಿದ್ದು, ಒಟ್ಟು ₹35 ಲಕ್ಷ ವೆಚ್ಚದಲ್ಲಿ ಹಣ್ಣು ಬೆಳೆದಿದ್ದೇವೆ. ಹಾಗೆ ಕುರಿ, ಆಕಳು, ಕೋಳಿಗಳನ್ನು ಸಾಕುತ್ತಿದ್ದೇವೆ. ಈ ವರ್ಷ ಪಪ್ಪಾಯ ಮೊದಲ ಫಸಲಿನಲ್ಲಿ ₹5 ಲಕ್ಷಕ್ಕೂ ಹೆಚ್ಚು ಆದಾಯ ಪಡೆದಿದ್ದಾನೆ. ಎರಡನೇ ಫಸಲಿನಲ್ಲಿ ಉತ್ತಮ ಆದಾಯ ಪಡೆಯುವ ನಿರೀಕ್ಷೆಯಿದೆ’ ಎಂದು ಚಂದ್ರಕಾಂತ ಸಕ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮ ಅಳಿಯ ಪ್ರಶಾಂತ ಪಾಟೀಲ ವೈದ್ಯಕೀಯ ಉದ್ಯೋಗ ತೊರೆದು ಕೃಷಿಯ ಕಡೆಗೆ ಹೋಗಿ ಯಶಸ್ಸನ್ನು ಕಂಡ ನಂತರ ಅವರ ಮಾರ್ಗದರ್ಶನದಲ್ಲಿ ಪಪ್ಪಾಯಿ, ದಾಳಿಂಬೆ ಹಣ್ಣುಗಳನ್ನು ಬೆಳೆದಿದ್ದೇವೆ. ರಾಸಾಯಿನಿಕ ಗೊಬ್ಬರ ಅಲ್ಪ ಪ್ರಮಾಣವನ್ನು ನೀಡಿ, ಸಾವಯವ ಗೊಬ್ಬರ, ಜೀವಾಮೃತ, ಗಂಜಿ, ಬೇನಿಹಿಂಡಿ, ತಯಾರಿಸಿ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀಡಲಾಗುವುದು’ ಎಂದು ತಿಳಿಸಿದರು
‘40 ಕೆ.ಜಿ ಸೆಗಣಿ, 20 ಲೀಟರ್ ಗೋಮೂತ್ರ, 5 ಕೆ.ಜಿ ಬೆಲ್ಲ, 2 ಕೆ.ಜಿ ಕಡಲೆ ಹಿಟ್ಟು, 2 ಬೊಗಸೆ ಹೊಲದಮಣ್ಣು ಸೇರಿ ಒಟ್ಟು 7 ದಿನಗಳ ಕಾಲ ಚೆನ್ನಾಗಿ ಕಲಿಸಿ ಗಿಡಗಳಿಗೆ ಹಾಕಲಾಗುವುದು. ಹೀಗೆ ಹಾಕುವುದರಿಂದ ಎರೆಹುಳುಗಳ ಸಂಖ್ಯೆ ಹೆಚ್ಚಾಗಿ, ಫಲವತ್ತತೆಯನ್ನು ಹೆಚ್ಚಿಗೆ ಮಾಡಿ, ಬೆಳೆಗಳು ಫಲವತ್ತತೆಯಿಂದ ಫಲ ಕೊಡುತ್ತವೆ’ ಎಂದು ಈರಣ್ಣ ಸಕ್ರಿ ತಿಳಿಸಿದರು.
‘ಇನ್ನೂ ಒಂದು ವರ್ಷ ನಾವು ದಾಳಿಂಬೆ ಹಣ ಬರಲಿಕ್ಕೆ ಕಾಯಬೇಕು. ನಮ್ಮ ಜಮೀನನ್ನು ಸ್ವಚ್ಛ ಮಾಡಿ ದಾಳಿಂಬೆ, ಪಪ್ಪಾಯಿ ಬೆಳೆಬೇಕೆಂದು ಹಲವಾರು ಜನರಲ್ಲಿ ವಿಚಾರಿಸಿದಾಗ ಹಣ ಹೆಚ್ಚಾಗಿದೆ ಮಾಡಾಕತ್ತಾರ ಎಂದು ಹೇಳಿದವರು, ಈಗ ಅವರೇ ಕೃಷಿ ಮಾಡಿದರ ಸಕ್ರಿ ಸಾಹುಕಾರ ಮಾಡಿದಂಗ ಮಾಡಬೇಕು ಎಂದು ಹೇಳುತ್ತಿರುವುದು ಸಂತಸ ತಂದಿದೆ’ ಎಂದು ತಿಳಿಸಿದರು.
‘ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಯಾರೂ ಭೇಟಿ ನೀಡಿಲ್ಲ. ಯಾವ ಸೌಲಭ್ಯಗಳೂ ದೊರಕಿಲ್ಲ. ಕೇಳಿದರೆ ಬರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಈರಣ್ಣ ಸಕ್ರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.