ನಾರಾಯಣಪುರ: ಒಳನಾಡು ಮೀನು ಕೃಷಿಗೆ ಪೂರಕವಾದ ಮಳೆ ಆಗಿದ್ದರಿಂದ ಇಲ್ಲಿನ ಮೀನುಮರಿ ಪಾಲನಾ ಕೇಂದ್ರದಲ್ಲಿ ನಿರೀಕ್ಷೆಯಂತೆ ಪ್ರಸಕ್ತ ಸಾಲಿನಲ್ಲಿ 40 ಲಕ್ಷ ಮೀನು ಮರಿಗಳನ್ನು ಮಾರಾಟ ಮಾಡಲಾಗಿದೆ.
2025ರ ಮಾರ್ಚ್‌ವರೆಗೂ ನಿಗದಿತ 1.5 ಕೋಟಿ ಮೀನು ಮರಿ ಮಾರಾಟದ ಗುರಿ ಹೊಂದಲಾಗಿದ್ದು, ಮೀನು ಮರಿ ಪಾಲನಾ ಕೇಂದ್ರದ ಅಧಿಕಾರಿಗಳು ಗುರಿ ಸಾಧಿಸುವ ಆಶಾಭಾವ ಹೊಂದಿದ್ದಾರೆ.
ಮೀನು ಮರಿ ಪಾಲನಾ ಕೇಂದ್ರ ಸದ್ಯ ವಿವಿಧ ತಳಿಯ ಮೀನು ಮರಿಗಳನ್ನು ತಂದು ಪಾಲನೆ ಮಾಡಲಾಗುತ್ತಿದೆ. ಅದರಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಕಾಟ್ಲಾ, ಕಾಮನ್ ಕರ್ಪ್, ರೋಹ ಮೀನು ಮರಿಗಳನ್ನು ಪಾಲನೆ ಮಾಡಿ ಬೇಡಿಕೆಯಂತೆ ಮಾರಾಟ ಮಾಡಲಾಗುತ್ತಿದೆ.
ಒಂದೊಮ್ಮೆ ಮೀನು ಕೃಷಿ ಮಾಡುವ ಸಾಕಾಣಿಕೆದಾರರು ಮೀನು ಮರಿಗಳ ಬೇಡಿಕೆ ಸಲ್ಲಿಸಿದರೆ, ಕೇಂದ್ರದಲ್ಲಿ 30 ರಿಂದ 45 ದಿನಗಳವರೆಗೆ ಮೀನು ಮರಿಗಳನ್ನು ಪಾಲನೆ ಮಾಡಿ, ಅಂದಾಜು ಅವುಗಳ ಉದ್ದ 1 ರಿಂದ 1.5 ಇಂಚುವರೆಗೆ ಬೆಳೆಸಿ ನಂತರ ಮೀನು ಮರಿಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಎಡಿಎಫ್ ಬಿ.ಎಸ್ ಲಮಾಣಿ ಹೇಳುತ್ತಾರೆ.
ಸದ್ಯ ಯಾದಗಿರಿ, ಕಲಬುರಗಿ, ರಾಯಚೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಮೀನು ಕೃಷಿ ಮಾಡುವ ರೈತರು, ಸಂಘ ಸಂಸ್ಥೆಗಳು, ಸಣ್ಣ ನೀರಾವರಿ ಇಲಾಖೆಯ ಕೆರೆಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡುವವರು ಮೀನುಮರಿಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ಹಿರಿಯ ಉಸ್ತುವಾರಿ ಅಧಿಕಾರಿ ಎಂ.ಬಿ ಪೂಜಾರಿ ಹೇಳಿದರು.
ಇಲ್ಲಿನ ಮೀನುಗಾರಿಕೆ ಇಲಾಖೆ ಮೀನುಮರಿ ಪಾಲನಾ ಕೇಂದ್ರವು ಆಗ್ನೇಯ ಏಷ್ಯಾದಲ್ಲೆ ಎರಡನೇ ಅತಿ ದೊಡ್ಡ ಮೀನು ಮರಿ ಪಾಲನಾ ಕೇಂದ್ರವಾಗಿದ್ದು ಒಳನಾಡು ಮೀನು ಕೃಷಿಗಾಗಿ ಆದ್ಯತೆ ನೀಡಲಾಗುತ್ತಿದೆ.ಎಸ್.ಎಲ್ ಸುರಗಿಹಳ್ಳಿ ಡಿಡಿಎಫ್ ಮೀನುಮರಿ ಪಾಲನಾ ಕೇಂದ್ರ ಸಿದ್ದಾಪುರ ಜಲಾಶಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.