ADVERTISEMENT

ಯಾದಗಿರಿ: ಮೇವು ಬ್ಯಾಂಕ್ ಸ್ಥಾಪನೆಗೆ ಯೋಜನೆ

ಬಿ.ಜಿ.ಪ್ರವೀಣಕುಮಾರ
Published 6 ಮಾರ್ಚ್ 2024, 5:06 IST
Last Updated 6 ಮಾರ್ಚ್ 2024, 5:06 IST
ಯಾದಗಿರಿ ನಗರ ಹೊರವಲಯದಲ್ಲಿ ಸುಡುವ ಬಿಸಿಲಿನ ಮಧ್ಯೆ ಜಾನುವಾರುಗಳು ಮೇವು ನೀರು ಹರಸುತ್ತ ತೆರಳುವ ದೃಶ್ಯ
ಯಾದಗಿರಿ ನಗರ ಹೊರವಲಯದಲ್ಲಿ ಸುಡುವ ಬಿಸಿಲಿನ ಮಧ್ಯೆ ಜಾನುವಾರುಗಳು ಮೇವು ನೀರು ಹರಸುತ್ತ ತೆರಳುವ ದೃಶ್ಯ   

ಯಾದಗಿರಿ: ಜಿಲ್ಲೆಯ 6 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಮೇವು ಬ್ಯಾಂಕ್‌ ಮತ್ತು ಗೋಶಾಲೆ ಸ್ಥಾಪನೆಗೆ ‍ಪ‍ಶು ಇಲಾಖೆ ಯೋಜನೆ ರೂಪಿಸಿದೆ.

ಯಾದಗಿರಿ, ಶಹಾಪುರ, ಸುರಪುರ, ವಡಗೇರಾ, ಗುರುಮಠಕಲ್‌, ಹುಣಸಗಿ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಬಿಸಿಲು ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

ಎಲ್ಲೆಲ್ಲಿ ಮೇವು ಬ್ಯಾಂಕ್‌?: ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮೇವು ಬ್ಯಾಂಕ್‌, ಮೂರು ಕಡೆ ಗೋಶಾಲೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತೀವ್ರ ಮೇವಿಗೆ ಕೊರತೆ ಉಂಟಾದರೆ ಮಾತ್ರ ಕ್ರಮಕೈಗೊಳ್ಳಲಾಗುತ್ತದೆ.

ADVERTISEMENT

ಶಹಾಪುರ ತಾಲ್ಲೂಕಿನ ದೋರನಹಳ್ಳಿ, ಚಾಮನಾಳ, ಯಾದಗಿರಿ ತಾಲ್ಲೂಕಿನ ಸೈದಾ‍ಪುರ ಎಪಿಎಂಸಿ, ಸುರಪುರ ತಾಲ್ಲೂಕಿನ ಕಕ್ಕೇರಾ, ಕೆಂಭಾವಿ, ಗುರುಮಠಕಲ್‌ ಪಟ್ಟಣದ ಎಪಿಎಂಸಿ ಆವರಣ, ಮಾಧವರ, ವಡಗೇರಾ ತಾಲ್ಲೂಕಿನ ಹೈಯಾಳ ಬಿ., ಹುಣಸಗಿ ತಾಲ್ಲೂಕಿನ ಕೋಡೆಕಲ್ಲ, ಅಗತೀರ್ಥ ಗ್ರಾಮಗಳಲ್ಲಿ ಮೇವು ಬ್ಯಾಂಕ್‌, ಶಹಾಪುರ ತಾಲ್ಲೂಕಿನ ಗೋಗಿ, ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ, ಸುರಪುರ ತಾಲ್ಲೂಕಿನ ಗುತ್ತಿಬಸವ ಗ್ರಾಮದಲ್ಲಿ ಗೋಶಾಲೆ ತೆರೆಯುವ ಯೋಜನೆ ಇದೆ.

ಅನುದಾನ ಬಿಡುಗಡೆ: ‌ರಾಜ್ಯದ 227 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶದವೆಂದು ಸರ್ಕಾರ ಘೋಷಿಸಿದ್ದು, ಸರ್ಕಾರಿ ಗೋಶಾಲೆಗಳಲ್ಲಿ 100 ಟನ್‌ ಮೇವು ಸಂಗ್ರಹಿಸಿಡಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ‌‌ಯಾದಗಿರಿ, ರಾಯಚೂರು ಜಿಲ್ಲೆಗೆ ತಲಾ ₹5 ಲಕ್ಷದಂತೆ ₹10 ಲಕ್ಷ ಬಿಡುಗಡೆ ಮಾಡಲು ಆದೇಶಿಸಲಾಗಿದೆ.

ಜಾನುವಾರು ಅಲೆದಾಟ: ಜಿಲ್ಲೆಯಲ್ಲಿ 36ರಿಂದ 37 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಮುಂಗಾರು, ಹಿಂಗಾರು ಮಳೆ ಸಮರ್ಪಕವಾಗದ ಕಾರಣ ಹಸಿರು ಮೇವು ಇಲ್ಲದಂತೆ ಆಗಿದೆ. ಕೊಳವೆ ಬಾವಿ ಇದ್ದ ಕಡೆ ಮಾತ್ರ ಹಸಿರು ಕಾಣಿಸುತ್ತಿದ್ದು, ಉಳಿದೆಡೆ ಭೂಮಿ ಬರಡಾಗಿದೆ. ಸುಡುವ ಬಿಸಿಲಿನ ಮಧ್ಯೆ ಜಾನುವಾರುಗಳು ಮೇವು ನೀರು ಹರಸುತ್ತ ಹೊರಟಿರುವ ದೃಶ್ಯ ಕಾಣಸಿಗುತ್ತದೆ.

ಮೂರು ಕಡೆ ಚೆಕ್‌ ಪೋಸ್ಟ್‌

ತೆಲಂಗಾಣ ಗಡಿಯನ್ನು ಹಂಚಿಕೊಂಡಿರುವ ಜಿಲ್ಲೆಯಲ್ಲಿ ಮೂರುಕಡೆ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗಿದೆ. ಗುರುಮಠಕಲ್‌ ತಾಲ್ಲೂಕಿನ ಪುಟಪಾಕ ಕುಂಟಿಮರಿ ಯಾದಗಿರಿ ತಾಲ್ಲೂಕಿನ ಕಡೇಚೂರು ಗ್ರಾಮದ ಬಳಿ ಚೆಕ್ ಪೋಸ್ಟ್‌ಗಳ ಮೂಲಕ ಮೇವು ಹಾಗೂ ಮೇವನ್ನು ಯಾವುದೇ ರೂಪದಲ್ಲಿ ಸಂಸ್ಕರಿಸಿ ಹೊರ ರಾಜ್ಯಗಳಿಗೆ ಸಾಗಣಿಕೆಯಾಗಂದತೆ ಕ್ರಮ ವಹಿಸುವುದು ಹಾಗೂ ಮೇವಿನ ಕಳ್ಳ ಸಾಗಾಣಿಕೆ ಮಾಡದಂತೆ ಕ್ರಮವಹಿಸಲಾಗಿದೆ.

ಒಂದು ವೇಳೆ ಹೊರ ರಾಜ್ಯಗಳಿಗೆ ಮೇವು ಸಾಗಾಣಿಕೆ ನಿರ್ಬಂಧಿಸುವಲ್ಲಿ ಲೋಪವೆಸಗುವ ಅಧಿಕಾರಿ ನೌಕರರ ವಿರುದ್ಧ ಸೂಕ್ತ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. 2023ರ ಡಿಸೆಂಬರ್‌ 12ರಿಂದ ಜಾರಿಗೆ ಬರುವಂತೆ ಹೊರ ರಾಜ್ಯಗಳಿಗೆ ಮೇವು ಸಾಗಣೆಕೆಯಾಗದಂತೆ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಆದರೆ ಚೆಕ್‌ಪೋಸ್ಟ್‌ ನಲ್ಲಿ ಕಾರ್ಯನಿರ್ವಹಿಸುವ ಜಾನುವಾರು ಅಭಿವೃದ್ಧಿ ಅಧಿಕಾರಿ ಪಶು ವೈದ್ಯಕೀಯ ಪರೀಕ್ಷಕರಿಗೆ ಯಾವುದೇ ಸೌಲಭ್ಯಗಳಿಲ್ಲ ಎಂದು ಸಿಬ್ಬಂದಿ ದೂರುತ್ತಾರೆ.

ಲಭ್ಯವಿರುವ ಮೇವು (ಟನ್‌ಗಳಲ್ಲಿ)

ಯಾದಗಿರಿ;60712

ಗುರುಮಠಕಲ್‌;46391

ಶಹಾಪುರ;121051

ವಡಗೇರಾ;85349

ಸುರಪುರ;146936

ಹುಣಸಗಿ;159748

ಒಟ್ಟು;620187

ಆಧಾರ: ಪಶು ಇಲಾಖೆ

ಯಾದಗಿರಿ ನಗರ ಹೊರವಲಯದಲ್ಲಿ ಸುಡುವ ಬಿಸಿಲಿನ ಮಧ್ಯೆ ಜಾನುವಾರುಗಳು ಮೇವು ನೀರು ಹರಸುತ್ತ ತೆರಳುವ ದೃಶ್ಯ

Quote - ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮೇವು ಬ್ಯಾಂಕ್‌ ಮತ್ತು ಗೋಶಾಲೆ ತೆರೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಸದ್ಯಕ್ಕೆ ಅಂಥ ಯಾವ ಸ್ಥಿತಿಯೂ ಇಲ್ಲ ಡಾ.ರಾಜು ದೇಶಮುಖ ಉಪನಿರ್ದೇಶಕ ಪಶುಪಾಲನೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.