ADVERTISEMENT

ವಡಗೇರಾ | ಕಡಿಮೆ ದಾಖಲಾತಿ ನೆಪ: ಕಾಲೇಜು ಸ್ಥಳಾಂತರ

ವಡಗೇರಾ ತಾಲ್ಲೂಕಿನ ಬಡ ಮಕ್ಕಳಿಗಿಲ್ಲ ಕಾಲೇಜು ಭಾಗ್ಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 6:30 IST
Last Updated 22 ಜೂನ್ 2024, 6:30 IST
<div class="paragraphs"><p>ವಡಗೇರಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದ ಪಿಯು ಕಾಲೇಜು ಕಟ್ಟಡ ಶಿಥಿಲಗೊಂಡಿರುವುದು</p></div>

ವಡಗೇರಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದ ಪಿಯು ಕಾಲೇಜು ಕಟ್ಟಡ ಶಿಥಿಲಗೊಂಡಿರುವುದು

   

ವಡಗೇರಾ: ಕಡಿಮೆ ದಾಖಲಾತಿ ನೆಪವೊಡ್ಡಿ ತಾಲ್ಲೂಕಿನಲ್ಲಿ ಇದ್ದ ಪಿಯು ಕಾಲೇಜನ್ನು ಸಿಬ್ಬಂದಿ ಸಹಿತ ಶಿರಸಿಗೆ ಸ್ಥಳಾಂತರಿಸಲಾಗಿದ್ದು, ಇದು ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಪಿಯು ಶಿಕ್ಷಣ ಹೊರೆಯಾಗುವಂತೆ ಮಾಡಿದೆ.

ಪಟ್ಟಣದಲ್ಲಿ ಪಿಯುಸಿ ಕಾಲೇಜು ಇಲ್ಲದಿರುವುದರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ADVERTISEMENT

ವಡಗೇರಾ, ಹೋಬಳಿಯಾಗಿದ್ದಾಗ ಅಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಎ.ಬಿ. ಮಾಲಕರೆಡ್ಡಿ ಅವರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ಪಕ್ಕದ ಸರ್ಕಾರಿ ಕಟ್ಟಡದಲ್ಲಿ ಕಾಲೇಜು ಆರಂಭಕ್ಕೆ ಕ್ರಮಕೈಗೊಂಡಿದ್ದರು.

ಹೋಬಳಿ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿತ್ತು. ಆರಂಭದ 3-4 ವರ್ಷ ವಿದ್ಯಾರ್ಥಿಗಳ ದಾಖಲಾತಿ ಉತ್ತಮವಾಗಿತ್ತು.

ಸರ್ಕಾರದ ನಿಯಮದ ಪ್ರಕಾರ ಒಂದು ತರಗತಿಯಲ್ಲಿ 25 ವಿದ್ಯಾರ್ಥಿಗಳು ದಾಖಲಾತಿ ಪಡೆಯಬೇಕಾಗಿತ್ತು. ಆದರೆ, 2009-10 ಎಸ್‌ಎಸ್‌ಎಲ್‌ಸಿ ವಾರ್ಷಿಕ ಫಲಿತಾಂಶ ಬಹಳ ಕಡಿಮೆ ಬಂದ ಕಾರಣ ಇಲ್ಲಿಯ ಕಾಲೇಜಿನಲ್ಲಿ ದಾಖಲಾತಿಯೂ ಬಹಳ ಕಡಿಮೆಯಾಯಿತು.

ಇದನ್ನೇ ನೆಪ ಮಾಡಿಕೊಂಡು ಆಗಿನ ಶಿಕ್ಷಣ ಸಚಿವ ಹಾಗೂ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆದೇಶದ ಪ್ರಕಾರ ಯಾದಗಿರಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು, ಇಲ್ಲಿಯ ಸಿಬ್ಬಂದಿ ಜತೆ ಕಾಲೇಜನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿರುವ ಪ್ರೌಢಶಾಲೆಗೆ 2011ರ ಜೂನ್ 4ರಂದು ಸ್ಥಳಾಂತರಿಸಲಾಯಿತು.

ಅಂದಿನಿಂದ ಈ ಭಾಗದ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣವನ್ನು ಪಡೆಯಬೇಕಾದರೆ ದೂರದ ಯಾದಗಿರಿ, ಇಲ್ಲವೆ ಶಹಾಪುರಕ್ಕೆ ಹೋಗಬೇಕು. ಉಳ್ಳವರ ಮಕ್ಕಳು ಹೇಗಾದರೂ ಮಾಡಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಬಡ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪಟ್ಟಣದಲ್ಲಿರುವ ಖಾಸಗಿ ಕಾಲೇಜುಗಳಿಗೆ ದುಬಾರಿ ಶುಲ್ಕ ಪಾವತಿಸಲು ಆಗದೆ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

2017ರಲ್ಲಿ ವಡಗೇರಾ ನೂತನ ತಾಲ್ಲೂಕು ಕೇಂದ್ರವೆಂದು ಘೋಷಣೆಯಾಯಿತು.ಅಂದಿನಿಂದ ಈ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಕೆಲ ಪ್ರೌಢಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶವಿದೆ. ಆದರೆ, ಪ್ರಯೋಜನವಾಗುತ್ತಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಪಿಯು ಕಾಲೇಜು ಇಲ್ಲದಿರುವುದರಿಂದ ವಿದ್ಯಾರ್ಥಿನಿಯರು ಮಧ್ಯದಲ್ಲಿಯೇ ತಮ್ಮ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ.

ಹಿಂದೆ ಇದ್ದ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಬಳಿ ಪಟ್ಟಣದ ಸಂಘ ಸಂಸ್ಥೆಯವರು ಹಾಗೂ ಪಾಲಕರು ಕಾಲೇಜು ಆರಂಭಿಸಲು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಆಗಿನ ಶಾಸಕರು ವಡಗೇರಾ ಪಟ್ಟಣಕ್ಕೆ ಪಿಯು ಕಾಲೇಜು ಮಂಜೂರು ಮಾಡಿಸಿದ್ದರು. ಆದರೆ, ಏಕಾಏಕಿ ಆದೇಶ ರದ್ದಾಯಿತು.

ಈಗಿನ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಅವರಿಗೂ ಕಾಲೇಜು ಆರಂಭಿಸಲು ಸಾರ್ವಜನಿಕರು ಮನವಿ ಸಲ್ಲಿಸಿದಾಗ 2024-25 ರಲ್ಲಿ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ಆದರೆ ಭರವಸೆ ಹಾಗೆ ಉಳಿದಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಶರಣು ಕುರಿ, ವಡಗೇರಾ ಗ್ರಾಪಂ ಸದಸ್ಯ

ಚನ್ನಾರೆಡ್ಡಿ ತುನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.