ADVERTISEMENT

ಶಹಾಪುರ | ರಾಜಕೀಯ ಆಶ್ರಯ ತಾಣವಾಗುತ್ತಿರುವ ಎಸ್‌ಡಿಎಂಸಿ!

ಮಕ್ಕಳ ಕಲಿಕಾ ಚಟುವಟಿಕೆಗೆ ಹಿನ್ನಡೆ; ಫಲಿತಾಂಶದ ಮೇಲೆ ಪರಿಣಾಮ

ಟಿ.ನಾಗೇಂದ್ರ
Published 12 ಜೂನ್ 2024, 6:13 IST
Last Updated 12 ಜೂನ್ 2024, 6:13 IST
ಶಹಾಪುರ ತಾಲ್ಲೂಕಿನ ರಸ್ತಾಪುರ ಪ್ರಾಥಮಿಕ ಶಾಲೆಗೆ ಬುಧವಾರ ಬಿಇಒ ಜಾಹೇದಾ ಬೇಗಂ ಭೇಟಿ ನೀಡಿ ಪರಿಶೀಲಿಸಿದರು
ಶಹಾಪುರ ತಾಲ್ಲೂಕಿನ ರಸ್ತಾಪುರ ಪ್ರಾಥಮಿಕ ಶಾಲೆಗೆ ಬುಧವಾರ ಬಿಇಒ ಜಾಹೇದಾ ಬೇಗಂ ಭೇಟಿ ನೀಡಿ ಪರಿಶೀಲಿಸಿದರು   

ಶಹಾಪುರ: ಸರ್ಕಾರ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯನ್ನು ನೇಮಿಸುವ ಮುಖ್ಯ ಉದ್ದೇಶ ಶಾಲೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ಖಚಿತಪಡಿಸುವುದು. ಶೈಕ್ಷಣಿಕ ಗುಣಮಟ್ಟ ಉತ್ತಮ ಪಡಿಸುವುದು ಆಗಿದೆ. ಆದರೆ ತಾಲ್ಲೂಕಿನಲ್ಲಿ ಹೆಚ್ಚಿನ ಎಸ್‌ಡಿಎಂಸಿಗಳು ರಾಜಕೀಯ ಆಶ್ರಯ ತಾಣವಾಗಿ ಮಾರ್ಪಪಟ್ಟಿವೆ ಎಂಬ ಆರೋಪ ಪಾಲಕರಿಂದ ಕೇಳಿ ಬರುತ್ತಲಿದೆ.

‘ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಮಕ್ಕಳ ಫಲಿತಾಂಶ ಕಳಪೆ ಮಟ್ಟದ್ದಾಗಿದೆ. ಫಲಿತಾಂಶ ಕಡಿಮೆಯಾಗಲು ಕಾರಣ ಹುಡುಕುತ್ತಾ ಸಾಗಿದಾಗ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದಿರುವುದು ಹಾಗೂ ಜತೆಗೆ ಎಸ್‌ಡಿಎಂಸಿ ಕಾರ್ಯವೈಖರಿ ಸರಿ ಇಲ್ಲ ಎಂಬುದು ತಿಳಿದು ಬಂದಿದೆ’ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದರು.

ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಪಾಲಕರು ನೇಮಿಸಿದರೆ, ಪ್ರೌಢಶಾಲೆಯ ಅಧ್ಯಕ್ಷರನ್ನು ಶಾಸಕರ ಶಿಫಾರಸ್ಸಿನ ಮೇಲೆ ನೇಮಕ ಮಾಡಲಾಗುತ್ತಿದೆ. ಪ್ರಾಥಮಿಕ ಶಾಲೆಗಳ ಬಹುತೇಕ ಎಸ್‌ಡಿಎಂಸಿ ಅಧ್ಯಕ್ಷರು ಅನಕ್ಷರಸ್ಥರಾಗಿರುತ್ತಾರೆ. ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗೆ ಬರುತ್ತಾರೆ ಅಥವಾ ಇಲ್ಲವೊ ಎಂಬುದನ್ನೂ ಗಮನಿಸುವುದಿಲ್ಲ. ಬೋಧನೆಯ ಬಗ್ಗೆ ವಿಚಾರಿಸುವುದಿಲ್ಲ. ಎಸ್‌ಡಿಎಂಸಿ ಅಧ್ಯಕ್ಷರು ಪ್ರಾಥಮಿಕ ಶಾಲೆಗೆ ದೊಡ್ಡ ತಲೆನೋವು ಆಗಿ ಪರಿಣಮಿಸಿದ್ದಾರೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.

ADVERTISEMENT

‘ಮುಖ್ಯಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರ ನಡುವೆ ಸದಾ ತಿಕ್ಕಾಟ ನಡೆಯುತ್ತದೆ. ಶಾಲಾ ಕಟ್ಟಡ ಹಾಗೂ ಇನ್ನಿತರ ಶಾಲಾ ಅಭಿವೃದ್ಧಿಗಾಗಿ ಸರ್ಕಾರದಿಂದ ಬರುವ ಅನುದಾನದಲ್ಲಿ ಇಂತಿಷ್ಟು ಪಾಲು ನಮಗೆ ಬೇಕು ಎಂದು ಹಠ ಹಿಡಿಯುತ್ತಾರೆ. ಗುಣಮಟ್ಟದ ಕೆಲಸ ಆಗುವುದಿಲ್ಲ. ಬಿಸಿಯೂಟ ವಿತರಣೆಯಲ್ಲಿಯೂ ಮೂಗು ತೂರಿಸುತ್ತಾರೆ. ಎಸ್‌ಡಿಎಂಸಿ ಅಧ್ಯಕ್ಷರು ತಮ್ಮ ಮಕ್ಕಳು ನಗರ ಪ್ರದೇಶದಲ್ಲಿ ಮಕ್ಕಳನ್ನು ತರಬೇತಿ ಶಾಲೆಯಲ್ಲಿ ಓದಲು ಬಿಡುತ್ತಾರೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಇರುತ್ತದೆ. ಇದನ್ನು ಪ್ರಶ್ನಿಸಿದರೆ ರಾಜಕೀಯ ಪ್ರಭಾವ ಬಳಿಸಿ ನಮ್ಮನ್ನು ತೆಪ್ಪಗೆ ಮಾಡುತ್ತಾರೆ’ ಎಂದು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ಎಷ್ಟೊ ಅಧ್ಯಕ್ಷರ ಅವಧಿ ಮುಗಿದರೂ ರಾಜಕೀಯ ಪ್ರಭಾವದಿಂದ ಮುಂದುವರೆಯುತ್ತಿದ್ದಾರೆ. ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿಯ ಹೊಣೆಗಾರಿಕೆ ಮರೆತು ಸಣ್ಣ ಪುಟ್ಟ ವಿಷಯ ಮುಂದೆ ಮಾಡಿ ಶಾಲಾ ಮುಖ್ಯಶಿಕ್ಷಕರ ಜೀವ ಹಿಂಡುತ್ತಾರೆ. ಇಂತಹ ಸಮಸ್ಯೆಯನ್ನು ಬಗೆಹರಿಸಿ ಎಸ್‌ಡಿಎಂಸಿಗಳು ಮಕ್ಕಳ ಓದಿಗೆ ಶಾಲೆಯಲ್ಲಿ ಪೂರಕ ವಾತಾವರಣ ನಿರ್ಮಿಸಿ ಶೈಕ್ಷಣಿಕ ಉನ್ನತಿಗೆ ಶ್ರಮಿಸಬೇಕು ಎಂಬುದು ಪಾಲಕರು ಮನವಿಯಾಗಿದೆ.

ಮೊಟ್ಟೆ, ತರಕಾರಿ ಖರೀದಿಸಬೇಕು

ಶಹಾಪುರ: ಶಾಲಾ ಮಕ್ಕಳಿಗೆ ಬಿಸಿಯೂಟಕ್ಕಾಗಿ ತರಕಾರಿ ಖರೀದಿಸಬೇಕು. ವಾರದಲ್ಲಿ ಮೂರು ದಿನ ಮೊಟ್ಟೆ ಖರೀದಿಸಿ ಮಕ್ಕಳಿಗೆ ನೀಡಬೇಕು. ಶೌಚಾಲಯ ಶುಚಿತ್ವ, ಕಸ ಗೂಡಿಸುವುದು ಸೇರಿದಂತೆ ಹಲವಾರು ಜವಾಬ್ದಾರಿ ಕೆಲಸಗಳನ್ನು ನಮ್ಮ ಹೆಗಲ ಮೇಲಿವೆ. ನಮ್ಮದು ಪಾಡು ನಾಯಿಪಾಡು ಆಗಿದೆ ಎಂದು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಯಾರು ಏನಂದರು?

ಪ್ರೌಢಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳ ನೇಮಕ ನಿಯಮಾನುಸಾರ ನಡೆದಿದೆ. ಕೆಲ ಪ್ರಾಥಮಿಕ ಶಾಲೆಗಳಲ್ಲಿ ಗೊಂದಲ ಹಾಗೂ ತಕರಾರು ಇದ್ದ ಕಾರಣ ನೇಮಕ ಆಗಿಲ್ಲ- ರೇಣುಕಾ ಪಾಟೀಲ ಬಿಆರ್‌ಸಿ ಶಹಾಪುರ

ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿ ಶಾಲೆಗೆ ಬಂದು ಪಾಠ ಮಾಡುತ್ತಾರೊ ಇಲ್ಲವೊ ಎಂಬುದು ಅನಕ್ಷರಸ್ಥ ಎಸ್‌ಡಿಎಂಸಿ ಅಧ್ಯಕ್ಷರಿಗೆ ಗೊತ್ತಾಗುವುದಿಲ್ಲ. ಸಭೆ ಸಮಾರಂಭದಲ್ಲಿ ಉತ್ಸವ ಮೂರ್ತಿಯಂತೆ ಕೂಡಿಸಿ ಮನೆಗೆ ಕಳುಹಿಸುತ್ತಾರೆ. ಇದು ಬದಲಾಗಬೇಕು - ಮಾನಪ್ಪ ಹಡಪದ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.