ADVERTISEMENT

ಶಹಾಪುರ: ಮಾದರಿ ಪದವಿ ಕಾಲೇಜು ಕಟ್ಟಡಕ್ಕೆ ಗ್ರಹಣ

ಟಿ.ನಾಗೇಂದ್ರ
Published 5 ಡಿಸೆಂಬರ್ 2023, 7:09 IST
Last Updated 5 ಡಿಸೆಂಬರ್ 2023, 7:09 IST
ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹತ್ತಿರ ನಿರ್ಮಾಣವಾಗುತ್ತಿರುವ ಸರ್ಕಾರಿ ಮಾದರಿ ಪದವಿ ಕಾಲೇಜು ಕಟ್ಟಡದ ನೋಟ
ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹತ್ತಿರ ನಿರ್ಮಾಣವಾಗುತ್ತಿರುವ ಸರ್ಕಾರಿ ಮಾದರಿ ಪದವಿ ಕಾಲೇಜು ಕಟ್ಟಡದ ನೋಟ   

ಶಹಾಪುರ: ನಗರಕ್ಕೆ ಮಂಜೂರಾಗಿರುವ ಸರ್ಕಾರಿ ಮಾದರಿ ಪದವಿ ಕಾಲೇಜಿನ ಕಟ್ಟಡ ಕಾಮಗಾರಿ ಆರಂಭವಾಗಿ ಐದು ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.

ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ(ರೂಸಾ) 2.0 ಯೋಜನೆಯ ಘಟಕ 5ರಡಿ ಯಾದಗಿರಿ ಜಿಲ್ಲೆಯ ಪೈಕಿ ಶಹಾಪುರಕ್ಕೆ 2018ರ ಮೇ 25ರಂದು ಕೇಂದ್ರದಿಂದ ಮಂಜೂರಾಗಿತ್ತು. ಈ ಕಾಲೇಜು ನಿರ್ಮಾಣಕ್ಕಾಗಿ ₹12.50 ಕೋಟಿ ಬಿಡುಗಡೆಯಾಗಿತ್ತು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 87 ಜಾಗದ ಪೈಕಿ 12 ಎಕರೆ 25 ಗುಂಟೆ ಜಮೀನನ್ನು ರಾಜ್ಯ ಸರ್ಕಾರವು ಮಾದರಿ ಪದವಿ ಕಾಲೇಜು ನಿರ್ಮಾಣಕ್ಕೆ ಕೊಟ್ಟಿತ್ತು.

ADVERTISEMENT

‘ಮಿನಿ ವಿಧಾನಸೌಧ ಮಾದರಿಯಲ್ಲಿಯೇ ಮೂರು ಅಂತಸ್ತಿನ ಭವ್ಯ ಕಟ್ಟಡ ನಿರ್ಮಾಣವಾಗುತ್ತಿದ್ದು, ಇನ್ನೂ ಕೆಲಸ ಮುಗಿದಿಲ್ಲ. ಪೀಠೋಪಕರಣಗಳ ಅಳವಡಿಕೆ ಬಾಕಿ ಇದೆ. ಕಟ್ಟಡ ನಿರ್ಮಾಣದ ಕೆಲಸವೇ ಇನ್ನೂ ಶೇ15ರಷ್ಟು ಬಾಕಿ ಉಳಿದಿದೆ. ಅದಲ್ಲದೇ, ಹಾಸ್ಟೆಲ್‌ ಕಟ್ಟಡದಂತ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಇದರಿಂದ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರವೇ ಉಳಿಯುವಂತಾಗಿದೆ’ ಎಂದು ಬಿಜೆಪಿ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಆರೋಪಿಸುತ್ತಾರೆ.

‘ಸುಸಜ್ಜಿತ ಕಟ್ಟಡ ನಿರ್ಮಾಣದ ಜತೆಗೆ ಅದರ ಸುತ್ತಲೂ ಕಾಂಪೌಂಡ್‌ ನಿರ್ಮಿಸಬೇಕು. ಪ್ರತ್ಯೇಕವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಬೆಳೆದು ನಿಂತ ಜಾಲಿ ಗಿಡ ತೆರವು ಮಾಡವ ಕೆಲಸಗಳೆಲ್ಲ ಬಾಕಿ ಉಳಿದಿವೆ’ ಎನ್ನುತ್ತಾರೆ ಅವರು.

ದಕ್ಷರನ್ನು ನೇಮಿಸಿ:

‘ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರಾಗಿದ್ದ ಎಸ್.ಎಸ್.ದೇಸಾಯಿ ಸ್ಥಳೀಯ ನಿವಾಸಿ. ಅವರಿಗೆ ಯಾದಗಿರಿ ಸರ್ಕಾರಿ ಪದವಿ ಕಾಲೇಜಿಗೆ ವರ್ಗಾವಣೆಯಾಗಿತ್ತು. ಆಗ ಮಾದರಿ ಪದವಿ ಕಾಲೇಜಿನ ನೋಡಲ್ ಅಧಿಕಾರಿಯೆಂದು ನಿಯೋಜನೆಗೊಂಡು ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ಸರ್ಕಾರಿ ಕೆಲಸಕ್ಕಿಂತ ಅವರು ಖಾಸಗಿ ಕೆಲಸದಲ್ಲಿ ಬ್ಯೂಸಿಯಾಗಿರುತ್ತಾರೆ. ತಕ್ಷಣ ಅವರನ್ನು ಬಿಡುಗಡೆಗೊಳಿಸಿ ದಕ್ಷ ನೋಡಲ್‌ ಅಧಿಕಾರಿಯನ್ನು ನೇಮಿಸಬೇಕು’ ಎಂದು ಯಲ್ಲಯ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

‘ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿ ವಿಫಲರಾಗಿದ್ದಾರೆ. ಕಟ್ಟಡ ಕಾಮಗಾರಿ ಮುಕ್ತಾಯಗೊಂಡು ಎರಡು ವರ್ಷದ ಹಿಂದೆ ಶೈಕ್ಷಣಿಕ ಕೆಲಸ ನಿರ್ವಹಿಸಬೇಕಾಗಿತ್ತು. ಇದು ಇಚ್ಛಾಶಕ್ತಿಯ ಕೊರತೆಯಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುವಂತೆ ಆಗಿದೆ ಎಂದೂ ಅವರು ಪತ್ರದಲ್ಲಿ ನಮೂದಿಸಿದ್ದಾರೆ.

ಇನ್ನೂ ನಿರ್ಮಾಣದ ಹಂತದಲ್ಲಿರುವ ಹಾಸ್ಟೆಲ್‌ ಕಟ್ಟಡ
3ಎಸ್ಎಚ್ಪಿ 1(3): ಶರಣಬಸಪ್ಪ ದರ್ಶನಾಪುರ
ಕಟ್ಟಡ ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿರುವೆ. ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ತ್ವರಿತವಾಗಿ ಕೆಲಸ ಪೂರ್ಣಗೊಳಿಸಲು ಸೂಚಿಸಿದೆ
ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಪ್ರಸಕ್ತ ಶೈಕ್ಷಣಿಕ ವರ್ಷದ ಕೋರ್ಸ್ ಆರಂಭವಾಗಿದೆ. 28 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು 6 ಅತಿಥಿ ಉಪನ್ಯಾಸಕರು ಪಾಠ ಬೋಧಿಸುತ್ತಿದ್ದಾರೆ
ಎಸ್.ಎಸ್.ದೇಸಾಯಿ ಕಾಲೇಜಿನ ಪ್ರಾಚಾರ್ಯ
ಅಗತ್ಯ ಸೌಲಭ್ಯ ಒದಗಿಸುವಲ್ಲಿ ಕಾಲೇಜಿನ ನೋಡಲ್‌ ಅಧಿಕಾರಿ(ಪ್ರಾಚಾರ್ಯರು) ವಿಫಲರಾಗಿದ್ದಾರೆ. ದಕ್ಷ ಅಧಿಕಾರಿ ನಿಯೋಜಿಸಿ ಗುಣಮಟ್ಟದ ಶಿಕ್ಷಣ ನೀಡಲು ಸಚಿವರು ಗಮನಹರಿಸಬೇಕು
ಯಲ್ಲಯ್ಯ ನಾಯಕ ವನದುರ್ಗ ಬಿಜೆಪಿಯ ಮುಖಂಡ
ಪ್ರತಿ ತಿಂಗಳೂ ದಂಡ...
‘ಹೌಸಿಂಗ್ ಬೋರ್ಡ್ ಮಂಡಳಿಯು ಟೆಂಡರ್ ಮೂಲಕ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರರೊಬ್ಬರಿಗೆ ನೀಡಿತ್ತು. ಕಟ್ಟಡದ ಅಡಿಪಾಯ ಹಾಕುವಾಗ ಹೆಚ್ಚಿನ ವೆಚ್ಚವಾಯಿತು. ಆಗ ಗುತ್ತಿಗೆದಾರರು ₹1.50 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ರೂಸಾಕ್ಕೆ ಪ್ರಸ್ತಾವ ಸಲ್ಲಿಸಿದರು. ಆದರೆ ಆ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿಲ್ಲ. ಈಗ ಸುಮಾರು ₹9 ಕೋಟಿ ವೆಚ್ಚದ ಕೆಲಸ ಮುಗಿದಿದೆ’ ಎನ್ನುತ್ತಾರೆ ಮಾದರಿ ಪದವಿ ಕಾಲೇಜಿನ ನೋಡಲ್‌ ಅಧಿಕಾರಿ ಎಸ್‌.ಎಸ್‌.ದೇಸಾಯಿ. ‘ನಿಗದಿಯಂತೆ ಎರಡು ವರ್ಷಗಳ ಹಿಂದೆಯೇ ಕಾಲೇಜು ಕಟ್ಟಡ ನಮಗೆ ಹಸ್ತಾಂತರಿಸಬೇಕಾಗಿತ್ತು. ಆದರ ಇನ್ನೂ ಹಸ್ತಾಂತರ ಆಗಿಲ್ಲ. ಇದರಿಂದ ಪ್ರತಿ ತಿಂಗಳು ₹500 ದಂಡ ವಿಧಿಸಲಾಗುತ್ತಿದೆ. ಇದರೊಂದಿಗೆ ಶುರುವಾಗಿದ್ದ ರಾಯಚೂರು ಜಿಲ್ಲೆಯಲ್ಲಿನ ಕಟ್ಟಡವು ವರ್ಷದ ಹಿಂದೆಯೇ ಅಲ್ಲಿ ಹಸ್ತಾಂತರವಾಗಿದೆ’ ಎಂದು ಅವರು ಹೇಳಿದರು. 28 ವಿದ್ಯಾರ್ಥಿಗಳ ಪ್ರವೇಶ: ‘2022-23ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಂದಿಕೊಂಡಿರುವ ಪಿ.ಜಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ. ಬಿ.ಎ ಕೋರ್ಸ್‌ಗೆ 16 ಹಾಗೂ ಬಿ.ಸಿ.ಎ ಕೋರ್ಸ್‌ಗೆ 12 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 28 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆರು ಅತಿಥಿ ಉಪನ್ಯಾಸಕರು ಬೋಧನೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಎಸ್.ಎಸ್.ದೇಸಾಯಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.