ADVERTISEMENT

ಯಾದಗಿರಿ | ವಾಲ್ಯೂ ಮೆಟ್ರಿಕ್ ಗೇಟ್: ಮಾಹಿತಿ ಬರ

ಟಿ.ನಾಗೇಂದ್ರ
Published 30 ಜೂನ್ 2020, 18:30 IST
Last Updated 30 ಜೂನ್ 2020, 18:30 IST
ಶಹಾಪುರ ತಾಲ್ಲೂಕಿನ ಹೊಸಕೇರಾ ತಾಂಡಾದ ಬಳಿ ವಾಲ್ಯೂಮೆಟ್ರಿಕ್ ಗೇಟ್ ಅಳವಡಿಸಲು ತಂದಿರುವ ಕಚ್ಚಾ ಸಾಮಗ್ರಿಗಳು
ಶಹಾಪುರ ತಾಲ್ಲೂಕಿನ ಹೊಸಕೇರಾ ತಾಂಡಾದ ಬಳಿ ವಾಲ್ಯೂಮೆಟ್ರಿಕ್ ಗೇಟ್ ಅಳವಡಿಸಲು ತಂದಿರುವ ಕಚ್ಚಾ ಸಾಮಗ್ರಿಗಳು   

ಶಹಾಪುರ: ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ನಾರಾಯಣಪುರ ಹಾಗೂ ಭೀಮರಾಯನಗುಡಿ ವ್ಯಾಪ್ತಿಯಲ್ಲಿ ಸುಮಾರು ₹1,035 ಕೋಟಿ ವೆಚ್ಚದಲ್ಲಿ ಕಾಲುವೆಗಳಿಗೆ ಗೇಟ್ ಅಳವಡಿಸುವ ಕಾರ್ಯ ಅಂದಾಜು ಪಟ್ಟಿಯಂತೆ ನಡೆಯುತ್ತಿಲ್ಲ. ಕಾಮಗಾರಿ ಕುರಿತು ನಿಗಮದ ಹಿರಿಯ ಎಂಜಿನಿಯರ್ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ಅಕ್ಷೇಪ ರೈತರಿಂದ ಕೇಳಿಬರುತ್ತಿದೆ.

ಮುಖ್ಯ ಕಾಲುವೆ, ವಿತರಣಾ ಹಾಗೂ ಲ್ಯಾಟರಲ್ ಕಾಲುವೆಗಳಿಗೆ ಗೇಟ್ ಅಳವಡಿಸಲು ಆಸ್ಟ್ರೇಲಿಯಾ ಮೂಲದ ಮೇಧಾ ಹಾಗೂ ಸರ್ವೋ ಡ್ರೈವ್ ಕಂಪನಿ ಟೆಂಡರ್ ಪಡೆದುಕೊಂಡಿದೆ. ಬೃಹತ್‌ ಮೊತ್ತದ ಕಾಮಗಾರಿ ನಡೆಯುತ್ತಿದ್ದರೂ ಸಹ ಭೀಮರಾಯನಗುಡಿ ವ್ಯಾಪ್ತಿಯಲ್ಲಿ ಕಂಪನಿಯು ಕಚೇರಿ ತೆರೆದಿಲ್ಲ. ಕಾಮಗಾರಿ ನಿರ್ವಹಿಸುತ್ತಿರುವ ಬಗ್ಗೆ ನಾಮಫಲಕ ಹಾಕಿಲ್ಲ. ಕೆಲಸ ನಿರ್ವಹಿಸುವ ಸ್ಥಳದಲ್ಲಿ ತಜ್ಞ ಎಂಜಿನಿಯರ್ ತಂಡವಿಲ್ಲ. ಬಯಲು ಜಾಗದಲ್ಲಿ ಒಂದಿಷ್ಟು ಕಚ್ಚಾ ಸಾಮಗ್ರಿಗಳನ್ನು ಹಾಕಿ ತಗಡು, ಸ್ಟೀಲ್, ಚಿಕ್ಕದಾದ ಮಶಿನ್ ಸ್ಥಾಪಿಸಿದ್ದಾರೆ. ಕೆಲಸ ನಿರ್ವಹಿಸುವ ಸ್ಥಳದಲ್ಲಿ ಐದಾರು ಕಾರ್ಮಿಕರು ಮಾತ್ರ ಇದ್ದರು. ಫೋಟೊ ತೆಗೆಯಬೇಡಿ ಎಂದು ಅಡ್ಡಿಪಡಿಸಿದರು. ಟೆಂಡರ್ ಕೆಲಸದ ಉಪ ಗುತ್ತಿಗೆಯನ್ನು ಹೊಸಪೇಟದ ಗುತ್ತಿಗೆದಾರರೊಬ್ಬರು ಪಡೆದು ಕೆಲಸ ಮಾಡುತ್ತಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡು ಬಂದಿತು. ಇದು ರೈತರ ಹೆಸರಿನಲ್ಲಿ ನಡೆಯುತ್ತಿರುವ ಹಗಲು ದರೋಡೆಯ ಕೆಲಸವಾಗಿದೆ ಎಂದು ನೀರಾವರಿ ಸಲಹಾ ಸಮಿತಿ ಮಾಜಿ ಸದಸ್ಯ ಭಾಸ್ಕರರಾವ ಮುಡಬೂಳ ಆರೋಪಿಸಿದರು.

ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಅನುಕೂಲಕ್ಕಾಗಿ ಬೃಹತ್‌ ಮೊತ್ತದ ಯೋಜನೆಯ ಅನುಷ್ಠಾನವು ದಾಖಲೆಯಲ್ಲಿ ಮಾತ್ರ ಜಾರಿಯಾಗುತ್ತಲಿದೆ. ವಾಸ್ತವಾಗಿ ಗೇಟ್ ಅಳವಡಿಕೆ ಕಾರ್ಯವು ಹಳ್ಳ ಹಿಡಿದಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಆಯಾ ಮತಕ್ಷೇತ್ರದ ಶಾಸಕರು ಇದರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಇದರ ಬಗ್ಗೆ ರೈತರು ಎಚ್ಚೆತ್ತುಕೊಂಡು ಹೋರಾಟ ನಡೆಸದಿದ್ದರೆ ಇಡೀ ಯೋಜನೆ ಕೃಷ್ಣಾರ್ಪಣೆಯಾಗಲಿದೆ ಎಂದು ರೈತ ಮುಖಂಡ ಸಿದ್ದಯ್ಯ ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ADVERTISEMENT

ವಾಲ್ಯೂಮೆಟ್ರಿಕ್ ಗೇಟ್ ಯೋಜನೆ ಜಾರಿಯಲ್ಲಿ ಆದ ಅಪರ ತಪರಾವನ್ನು ಪತ್ತೆ ಹಚ್ಚಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಿ ಸಮಗ್ರ ತನಿಖೆ ನಡೆಸಬೇಕು. ರೈತರ ಹೆಸರಿನಲ್ಲಿ ನಡೆಯುವ ಅಕ್ರಮಕ್ಕೆ ಕಡಿವಾಣ ಹಾಕಬೇಕು. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಘಟಕದ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಭೂಮಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಅಶೋಕರಾವ ಮಲ್ಲಾಬಾದಿ, ಕರ್ನಾಟಕ ಕಿಸಾನ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಪ್ಯಾಟಿ ಅವರು ಮನವಿ ಮಾಡಿದ್ದಾರೆ.

***

ಕಳಪೆ ಸಾಮಗ್ರಿ ಉಪಯೋಗಿಸಿದ್ದರೆ ಮೂರನೇಯ ತಂಡ ತಪಾಸಣೆ ನಡೆಸಲಿದೆ. ರೈತರು ದೂರು ನೀಡಿದ್ದಾರೆ. ಗೇಟ್ ಅಳವಡಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ.
-ಎನ್.ಡಿ.ಪವಾರ,ಎಸ್.ಇ.ಭೀಮರಾಯನಗುಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.