ಶಹಾಪುರ: ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ (ಟಿಎಪಿಸಿಎಂಎಸ್)ನ ಉಗ್ರಾಣದಲ್ಲಿನ ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಸಂದರ್ಭದಲ್ಲಿ ತನಿಖೆ ನಡೆಸಿರುವ ಪೊಲೀಸರು ಅಗತ್ಯ ಕ್ರಮ ತೆಗೆದುಕೊಳ್ಳುವ ಮಾರ್ಗಸೂಚಿ ನಿಯಮ ಹಾಗೂ ಭದ್ರತೆಯ ಲೋಪದ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಯಾವುದೇ ಉಲ್ಲೇಖ ಇಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅಕ್ಕಿ ನಾಪತ್ತೆಯಾಗಿ 11 ತಿಂಗಳು ಕಳೆದರೂ ಪಡಿತರ ಅಕ್ಕಿ ಸಂಗ್ರಹಿಸಿ ಇಡುವ ಗೋದಾಮುಗಳ ಬಳಿ ಇಂದಿಗೂ ಭದ್ರತಾ ಸಿಬ್ಬಂದಿ ನೇಮಿಸಿಲ್ಲ. ಅಕ್ಕಿ ತುಂಬಿಕೊಂಡು ಸಾಗುವ ಲಾರಿ ವಾಹನದ ಮೇಲೆ ಅತ್ಯಾಧುನಿಕ ಜಿಪಿಎಸ್ ಸಾಧನವನ್ನು ಅಳವಡಿಸಬೇಕಾಗಿತ್ತು. ಹಿರಿಯ ಅಧಿಕಾರಿಗಳ ಕಣ್ಗಾವಲಿನಲ್ಲಿ ಅದರ ಚಲನ–ವಲನ ಪರಿಶೀಲಿಸುವ ಕ್ರಮವನ್ನು ಇಂದಿಗೂ ತೆಗೆದುಕೊಂಡಿಲ್ಲ. ಸಂಗ್ರಹದ ದಾಖಲು ಪುಸ್ತಕ (ಸ್ಟಾಕ್ ರಿಜಿಸ್ಟರ್) ಹಾಗೂ ವಾಹನಗಳ ನೋಂದಣಿ ಹಾಗೂ ಅಗತ್ಯ ಸೌಲಭ್ಯಗಳನ್ನು ನೀಡುವ ಕುರಿತು ಮುನ್ನೆಚ್ಚರಿಕೆ ಕ್ರಮದ ಮತ್ತು ಅಕ್ಕಿ ನಾಪತ್ತೆಯಾಗಲು ಪ್ರಮುಖ ಕಾರಣಗಳನ್ನು ತನಿಖಾಧಿಕಾರಿ ಪತ್ತೆ ಹಚ್ಚದೆ ಇರುವುದು ದೋಷಾರೋಪ ಪಟ್ಟಿಯಲ್ಲಿ ಎದ್ದು ಕಾಣುತ್ತಿದೆ.
ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಮುಖ್ಯವಾಗಿ ಅಕ್ಕಿ ಸರಬರಾಜು ಮಾಡುವ ಗುತ್ತಿಗೆದಾರನ ಪಾತ್ರ ಮುಖ್ಯವಾಗಿದೆ. ಯಾವ ಲಾರಿಯಲ್ಲಿ ಎಷ್ಟು ಆಹಾರ ಸರಬರಾಜು ಆಗುತ್ತಿದೆ. ಜಿಪಿಎಸ್ ಅಳವಡಿಕೆ, ಲಾರಿ ವಾಹನದ ಚಾಲಕನ ಮಾಹಿತಿ ಹಾಗೂ ತನಿಖೆಯ ಸಮಯದಲ್ಲಿ ಗುತ್ತಿಗೆದಾರನನ್ನು ವಿಚಾರಣೆಗೂ ಕರೆಯದೆ ಇರುವುದು ಪೊಲೀಸರ ಕ್ರಮ ಪ್ರಶ್ನಿಸುವಂತೆ ಆಗಿದೆ. ದೋಷಾರೋಪ ಪಟ್ಟಿಯಲ್ಲಿ ಎಲ್ಲಿಯೂ ಅನ್ನಭಾಗ್ಯದ ಅಕ್ಕಿ ಸರಬರಾಜು ಮಾಡುವ ಗುತ್ತಿಗೆದಾರನ ಹೆಸರು ಉಲ್ಲೇಖಿಸದೆ ಇರುವುದು ಪೊಲೀಸರ ನಡೆ ಅನುಮಾನವನ್ನು ಹುಟ್ಟಿಸಿದೆ ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡಲು ಉಪಯೋಗಿಸಿದ ಬಾಡಿಗೆ ವಾಹನಗಳ ಸಂಖ್ಯೆ, ಅಕ್ಕಿಯನ್ನು ತುಂಬಿಕೊಂಡು ವಾಹನಗಳನ್ನು ಯಾರು ಹಿಡಿಯದಂತೆ ನೋಡಿಕೊಂಡು ಗುರುಮಠಕಲ್ ಲಕ್ಷ್ಮಿ ವೆಂಕಟೇಶ್ವರ ರೈಸ್ ಮಿಲ್ ತೆಗೆದುಕೊಂಡು ಬಂದಾಗ ಸಾಕ್ಷಿದಾರ ಸಂಖ್ಯೆ 35 ಆನಂದ ಚೆನ್ನಾರಡ್ಡಿ ಅವರು ಲಕ್ಷ್ಮಿ ವೆಂಕಟೇಶ್ವರ ರೈಸ್ ಮಿಲ್‌ನಲ್ಲಿ ತೂಕ ಮಾಡಿ ಅಕ್ಕಿ ನೀಡಿದವರಿಗೆ ಚಂದ್ರಿಕಾ ರಾಠೋಡ (11ನೇ ಆರೋಪಿ) ಅವರು ಸಹಿ ಮಾಡಿ ಇಟ್ಟಿರುವ ಚೆಕ್ ನೀಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಿದ್ದಾರೆ. ವಿಚಿತ್ರವೆಂದರೆ ಅಕ್ರಮ ಸಾಗಣೆ ಮಾಡುವ ವಸ್ತುಗಳಿಗೆ ಸಾಥ್ ನೀಡುತ್ತಿದ್ದ ವ್ಯಕ್ತಿಯನ್ನು ಪ್ರಕರಣದ ಆರೋಪಿಯನ್ನು ಮಾಡದೇ ಸಾಕ್ಷಿದಾರರನ್ನಾಗಿ ಮಾಡಿರುವುದು ದೋಷಾರೋಪ ಪಟ್ಟಿಯಲ್ಲಿನ ಪ್ರಮುಖ ವೈಫಲ್ಯ ಎದ್ದು ಕಾಣುತ್ತಿದೆ ಎನ್ನುತ್ತಾರೆ ಹಿರಿಯ ವಕೀಲರೊಬ್ಬರು.
ವಿಚಿತ್ರವೆಂದರೆ ದೋಷಾರೋಪ ಪಟ್ಟಿಯಲ್ಲಿ ಲಖನ್ ಪಟೇಲ್ ಮುಂಬೈ ( 12ನೇ ಆರೋಪಿ) ಹಾಗೂ ಸಯ್ಯದ ಇಶಾನ್ ಬಂಗಾರಪೇಟೆ (13ನೇ ಆರೋಪಿ) ಎಂದು ಆರೋಪಿಗಳ ಸಂಪೂರ್ಣ ವಿಳಾಸವನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು, ಆರೋಪಿತರು ತಲೆ ಮರೆಸಿಕೊಂಡಿದ್ದು ಇರುತ್ತದೆ ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ನಮೂದಿಸಿರುವುದು ಇಡಿ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸದ ಯತ್ನ ಮಾಡಿರುವುದು ಮೆಲ್ನೋಟಕ್ಕೆ ಕಂಡು ಬರುತ್ತಿದೆ. ಸರ್ಕಾರ ಸ್ವಯಂ ಪ್ರೇರಣೆಯಿಂದ ಪ್ರತ್ಯೇಕವಾದ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಬೇಕು ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.