ಯಾದಗಿರಿ: ಭಾರತದ ಪ್ರಗತಿಪರ, ಧೈರ್ಯಶಾಲಿ, ಬುದ್ದಿವಂತ ಹಾಗೂ ಅಪ್ರತಿಮ ದೇಶ ಪ್ರೇಮ ಇರುವ ರಾಜರಲ್ಲಿ ಶಿವಾಜಿ ಮಹಾರಾಜರು ಒಬ್ಬರು. ಇವರ ಆಡಳಿತದ ಅವಧಿಯಲ್ಲಿ ಹಿಂದೂ, ಮುಸ್ಲಿಮರನ್ನು ಸಮಾನವಾಗಿ ಕಾಣುವ ಆದರ್ಶಗಳು, ರಾಷ್ಟ್ರಾಭಿಮಾನ ಇಂದಿನ ಯುವ ಪೀಳಿಗೆ ಪಾಲಿಸಬೇಕು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಯಾದಗಿರಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳು ಯಾದಗಿರಿ ಸಂಯುಕ್ತಾಶ್ರಯದಲ್ಲಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ-2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಮಾತನಾಡಿ, ದೇಶ ಹಲವು ಮಹಾಪುರುಷರಿಗೆ ಜನ್ಮ ನೀಡಿದ ಪುಣ್ಯ ಭೂಮಿ. ಇಲ್ಲಿ ಜನಸಿದ ಅವರೆಲ್ಲರೂ ಸ್ವತಃ ಅಖಾಡಕ್ಕಿಳಿದು ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ ಸ್ವತಂತ್ರ ಭಾರತದ ನಿರ್ಮಾಣಕ್ಕೆ ನಾಂದಿ ಹಾಡಿದರು. ಅವರ ಹೋರಾಟ ತ್ಯಾಗ, ಬಲಿದಾನ ಅವಿಸ್ಮರಣೀಯ. ಯುದ್ಧ ತಂತ್ರ, ಯುದ್ಧನೀತಿ ಮತ್ತು ಅಸೀಮ ಧೈರ್ಯಗಳಿಗೆ ಹೆಸರುವಾಸಿಯಾಗಿದ್ದ ಶಿವಾಜಿ ಮಹಾರಾಜರ ಆದರ್ಶಗಳು ಯುವ ಸಮುದಾಯಕ್ಕೆ ಪ್ರೇರಣೆ ಇದ್ದಂತೆ ಎಂದು ನುಡಿದರು.
ವಿಶೇಷ ಉಪನ್ಯಾಸಕರಾಗಿ ಯಾದಗಿರಿ ಶುಭಂ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಗುರುಪ್ರಸಾದ್ ವೈದ್ಯ ಮಾತನಾಡಿ, ರಾಷ್ಟ್ರ ಪ್ರೇಮ, ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಬೆಳೆಸಿದ ಹಾಗೂ ವಿಜಯನಗರ ಸಾಮ್ರಾಜ್ಯದ ನಂತರದಲ್ಲಿ ಹಿಂದೂ ಧರ್ಮಕ್ಕೆ ಅಪಾಯ ಬಂದಾಗ ಉಳಿಸಿ ಬೆಳೆಸಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರುದ್ರಗೌಡ ಪಾಟೀಲ, ಸಮಾಜದ ಪ್ರಮುಖರಾದ ರಾಜು ಚವಾಣ್ ಸೇರಿದಂತೆ ಕ್ಷತ್ರಿಯ ಸಮಾಜದ ಮುಖಂಡರು, ಯುವಕರು ಇದ್ದರು.
‘ತಮ್ಮದೆ ಛಾಪು ಮೂಡಿಸಿದ ಶೂರ’
ಸುರಪುರ: ‘ಭಾರತದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ, ಶೌರ್ಯ, ಸ್ಥೈರ್ಯ, ರಾಷ್ಟ್ರಪ್ರೇಮ, ನ್ಯಾಯವಂತ, ಧರ್ಮಶ್ರದ್ಧೆ, ಶೂರತನಕ್ಕೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಉತ್ತಮ ಆಡಳಿತಗಾರರು ಆಗಿದ್ದರು’ ಎಂದು ಗ್ರೇಡ್-2 ತಹಶೀಲ್ದಾರ್ ಮಲ್ಲಯ್ಯ ದಂಡು ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಅವರು ಮಾತನಾಡಿದರು.
ಸಂಸ್ಕೃತ ಪಂಡಿತ ಜನಾರ್ಧನ ಪಾಣಿಬಾತೆ, ಜ್ಞಾನೇಶ್ವರ ಪಾಣಿಭಾತೆ, ರಾಮಚಂದ್ರ ಟೊಣಪೆ ಮಾತನಾಡಿದರು.
ರಾಜೂ ಪುಲ್ಸೆ, ಅಂಬ್ರೇಶ್ ಜಾಲಬೆಂಚಿ, ಚುನಾವಣೆ ಶಿರಸ್ತೇದಾರ್ ಅವಿನಾಶ ಪಡಶೆಟ್ಟಿ, ಕಂದಾಯ ಇಲಾಖೆಯ ಅಶೋಕ ಯಾದಗಿರಿ, ರವಿಕುಮಾರ ನಾಯಕ ಬೆನಕನಹಳ್ಳಿ ಸೇರಿದಂತೆ ಕ್ಷತ್ರಿಯ ಸಮಾಜದ ಮುಖಂಡರು, ಯುವಕರು
ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.