ನಾರಾಯಣಪುರ: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಭಕ್ತರು ಶನಿವಾರ ಶಿವರಾತ್ರಿ ಉಪವಾಸ ಆಚರಣೆಯೊಂದಿಗೆ ಈಶ್ವರ ಲಿಂಗದ ದರ್ಶನ ಪಡೆದರು.
ಮುಖ್ಯ ಅರ್ಚಕ ಸಂಗಯ್ಯ ಹಿರೇಮಠರ ನೇತೃತ್ವದಲ್ಲಿ ಶಿವನಾಮ ಸ್ಮರಣೆ ಮಂತ್ರ ಪಠಣದೊಂದಿಗೆ ಈಶ್ವರ ಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬಳಿಕ ಲಿಂಗಕ್ಕೆ ಬೆಳ್ಳಿ ಹಾಗೂ ಪಂಚ ಲೋಹದ ಮುಖವಾಡ ಮತ್ತು ಹೂಮಾಲೆಯಿಂದ ಅಲಂಕರಿಸಿ ಮಹಾ ಮಂಗಳಾರತಿ ಮಾಡಲಾಯಿತು.
ದೇಗುಲದ ಆವರಣದಲ್ಲಿರುವ ಹನುಮ ದೇವರಿಗೆ, ಸೀತಾರಾಮ, ಲಕ್ಷ್ಮಣ ದೇವರುಗಳ, ಅಕ್ಕಮಹಾದೇವಿ ಮೂರ್ತಿಗೆ ಪಂಚಾಮೃತ ಅಭಿಷೇಕ ವಿಶೇಷ ಪೂಜೆಯನ್ನು ಅರ್ಚಕ ಈರಯ್ಯ ಸ್ವಾಮಿ ನೆರವೇರಿಸಿದರು.
ಭಕ್ತರ ದಂಡು: ಮಹಾಶಿವರಾತ್ರಿ ನಿಮಿತ್ತ ಶಿವಭಕ್ತರ ದಂಡು ತಂಡೋಪತಂಡವಾಗಿ ದೇಗುಲಕ್ಕೆ ಆಗಮಿಸಿ ಈಶ್ವರ ಲಿಂಗುವಿನ ದರ್ಶನ ಪಡೆದರು, ವಿಶೇಷವಾಗಿ ಮಹಿಳಾ ಭಕ್ತರು ನೈವಿದ್ಯ ಅರ್ಪಿಸಿ ಪ್ರಸಾದ ಸ್ವೀಕರಿಸಿದರು.
ಹಣ್ಣು ಪಾನಕ ವಿತರಣೆ: ಉಪವಾಸ ವ್ರತ ಆಚರಿಸಿದ ಭಕ್ತರಿಗೆ ಸಿಹಿ ಪಾನಕ, ವಿವಿಧ ಬಗೆಯ ಹಣ್ಣು, ಕಡಲೆ ಹುಸುಳಿಯನ್ನು ವಿತರಿಸಿದನ್ನು ಭಕ್ತರು ಸ್ವೀಕರಿಸಿ ಉಪವಾಸ ಸಂಪನ್ನಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.