ADVERTISEMENT

ಶಹಾಪುರ | ಉಪನ್ಯಾಸಕರ ಕೊರತೆ: ‘ಅತಿಥಿ’ಗಳೇ ಆಧಾರ

ವಿಜ್ಞಾನ ವಿಭಾಗದಲ್ಲಿ ಕಡಿಮೆಯಾಗುತ್ತಿರುವ ವಿದ್ಯಾರ್ಥಿಗಳ ದಾಖಲಾತಿ

Shwetha Kumari
Published 23 ಜೂನ್ 2024, 5:17 IST
Last Updated 23 ಜೂನ್ 2024, 5:17 IST
<div class="paragraphs"><p>ಶಹಾಪುರದ ಸರ್ಕಾರಿ ಪದವಿಪೂರ್ವ ಬಾಲಕಿಯರ ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರಬಂದರು</p></div><div class="paragraphs"><p></p></div>

ಶಹಾಪುರದ ಸರ್ಕಾರಿ ಪದವಿಪೂರ್ವ ಬಾಲಕಿಯರ ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರಬಂದರು

   

ಶಹಾಪುರ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಜತೆಗೆ ಉಪನ್ಯಾಸಕರ ಕೊರತೆ ನಡುವೆಯೇ ವಿದ್ಯಾರ್ಥಿಗಳು ಪಾಠಗಳ್ನು ಆಲಿಸಬೇಕಿದೆ. ಉಪನ್ಯಾಸಕರ ಕೊರತೆಯಿಂದಾಗಿ ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳ ದಾಖಲಾತಿಯೂ ಕುಸಿದಿದೆ.

ADVERTISEMENT

ನಗರದಲ್ಲಿ ಬಾಲಕರ ಹಾಗೂ ಬಾಲಕಿಯರಿಗಾಗಿ ಪ್ರತ್ಯೇಕ ಪಿಯು ಕಾಲೇಜುಗಳು ಇವೆ. ಅದರಂತೆ ತಾಲ್ಲೂಕಿನ ಚಾಮನಾಳ, ಗೋಗಿ, ಸಗರ, ಭೀಮರಾಯನಗುಡಿಯಲ್ಲಿ ಪಿಯು ಕಾಲೇಜುಗಳಿವೆ. ಅದರಲ್ಲಿ ಶಹಾಪುರ ನಗರದಲ್ಲಿ ಎರಡು ಮತ್ತು ಭೀಮರಾಯನಗುಡಿಯಲ್ಲಿ ಒಂದು ವಿಜ್ಞಾನ ವಿಭಾಗವಿದೆ.

‘ನಗರದ ಸರ್ಕಾರಿ ಬಾಲಕರ ಪಿಯುಸಿ ಕಾಲೇಜಿನಲ್ಲಿ ಇಂಗ್ಲಿಷ್, ಸಮಾಜಶಾಸ್ತ್ರ, ಕನ್ನಡ ಉಪನ್ಯಾಸಕರು ಇಲ್ಲ. ಅದರಂತೆ ತಾಲ್ಲೂಕಿನ ಗೋಗಿ ಪಿಯುಸಿ ಕಾಲೇಜಿನಲ್ಲಿ ಕೊಳವೆಬಾವಿಯಲ್ಲಿ ಉಪ್ಪು ಮಿಶ್ರಿತ ನೀರು ಬರುವುದರಿಂದ ಕುಡಿಯಲು ಯೋಗ್ಯವಿಲ್ಲ. ಕುಡಿಯುವ ನೀರಿನ ಸಮಸ್ಯೆಯಿದೆ. ತಾಲ್ಲೂಕಿನ ಚಾಮನಾಳ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಪ್ರಥಮ ವರ್ಷ 49 ಹಾಗೂ ದ್ವಿತೀಯ ಪಿಯುಸಿಯಲ್ಲಿ 79 ವಿದ್ಯಾರ್ಥಿಗಳು ಇದ್ದಾರೆ. ಕನ್ನಡ ಉಪನ್ಯಾಸಕರ ಹುದ್ದೆ ಖಾಲಿಯಿದೆ’ ಎಂದು ಕಾಲೇಜಿನ ಪ್ರಾಚಾರ್ಯ ಸಂತೋಷ ಜುನ್ನಾ ಮಾಹಿತಿ ನೀಡಿದರು.

ಮಳೆ ಬಂದರೆ ಸೋರುವ ಕೊಠಡಿ


ತಾಲ್ಲೂಕಿನ ಸಗರ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷ 33 ಹಾಗೂ ದ್ವಿತೀಯ ವರ್ಷದಲ್ಲಿ 28 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸಮಾಜಶಾಸ್ತ್ರದ ಉಪನ್ಯಾಸಕರಿಲ್ಲ. ಅದರಂತೆ ನಗರದ ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ ಪ್ರಥಮ 70, ದ್ವಿತೀಯ ವರ್ಷದಲ್ಲಿ 150 ವಿದ್ಯಾರ್ಥಿಗಳು ಇದ್ದಾರೆ. ವಿಜ್ಞಾನ ವಿಭಾಗದಲ್ಲಿ 7 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಇಲ್ಲಿಯೂ ಉಪನ್ಯಾಸಕರ ಕೊರತೆಯಿದೆ.

‘ಶಹಾಪುರ ನಗರದ ಬಾಲಕಿಯರ ಪಿಯು ವಿಭಾಗದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ಪ್ರಥಮ ವರ್ಷದಲ್ಲಿ 300 ಹಾಗೂ ದ್ವಿತೀಯ 350 ವಿದ್ಯಾರ್ಥಿನಿಯರು ಇದ್ದಾರೆ. ಒಟ್ಟು 14 ಕೊಠಡಿಗಳಿವೆ. ಅದರಲ್ಲಿ ಐದು ಕೊಠಡಿಗಳು ಸೋರುತ್ತಿವೆ. ಇದು ತುಂಬಾ ತೊಂದರೆ ಅನುಭವಿಸುವಂತೆ ಆಗಿದೆ. ಅಲ್ಲದೆ ವಿಜ್ಞಾನ ವಿಭಾಗವು ಸಹ ಇದೆ. ಪ್ರಥಮ ವರ್ಷದಲ್ಲಿ 186 ಹಾಗೂ ದ್ವಿತೀಯ ವರ್ಷದಲ್ಲಿ 190 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. 15 ವರ್ಷದಿಂದ ಜೀವಶಾಸ್ತ್ರ ಪಾಠ ಮಾಡುವ ಉಪನ್ಯಾಸಕರಿಲ್ಲ. ಸಿಬ್ಬಂದಿಯ ಕೊರತೆ 7 ಇದ್ದು, ಅಲ್ಲದೆ 14 ಅತಿಥಿ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ’ ಎಂದು ವಿದ್ಯಾರ್ಥಿನಿಯರ ಪಾಲಕರೊಬ್ಬರು ಮಾಹಿತಿ ನೀಡಿದರು.

ಸದ್ಯ ಇರುವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದ್ದು, ಮಕ್ಕಳಿಗೆ ಅಭ್ಯಾಸದಲ್ಲಿ ಹಿನ್ನಡೆಯಾಗುತ್ತಿದೆ. ಹೀಗಾಗಿ ಸರ್ಕಾರಿ ಶೀಘ್ರ ಕಾಯಂ ಉಪನ್ಯಾಸಕರನ್ನು ನೇಮಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

‘ಪ್ರತ್ಯೇಕ ಮಹಿಳಾ ಕಾಲೇಜು ಸ್ಥಾಪಿಸಿ’

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಪ್ರತ್ಯೇಕವಾದ ಮಹಿಳಾ ಪದವಿ ಕಾಲೇಜು ಸ್ಥಾಪಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೆ ಪರಿಶಿಷ್ಟ ವಿದ್ಯಾರ್ಥಿನಿಯರಿಗೆ ಉಪಯೋಗವಾಗಲಿದೆ. ಮಹಿಳಾ ಪದವಿ ಕಾಲೇಜು ಇಲ್ಲದ ಕಾರಣ ಅನಿವಾರ್ಯವಾಗಿ ಖಾಸಗಿ ಕಾಲೇಜುಗಳಿಗೆ ದುಬಾರಿ ಶುಲ್ಕ ನೀಡಿ, ವಿದ್ಯಾಭ್ಯಾಸ ಮಾಡುವಂತೆ ಆಗಿದೆ ಎಂಬುದು ಪಾಲಕರ ಕೊರಗು.

ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಾರೆ. ಅಗತ್ಯ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ವಿಜ್ಞಾನ ವಿಭಾಗ ಅಯೋಮಯವಾಗಿದೆ.
ಹೆಸರು ಹೇಳಲಿಚ್ಛಿಸದ ಪ್ರಾಚಾರ್ಯ, ಸರ್ಕಾರಿ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.