ಶಹಾಪುರ: ಪ್ರಚೋದನಾಕಾರಿ ಭಾಷಣದ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಜೇವರ್ಗಿ ತಾಲ್ಲೂಕಿನ ಆಂದೋಲ ಕರುಣೇಶ್ವರಮಠದ ಸಿದ್ದಲಿಂಗಸ್ವಾಮಿ ಅವರಿಗೆ ತಾಲ್ಲೂಕು ಪ್ರವೇಶಕ್ಕೆ ಯಾದಗಿರಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ನಗರದಲ್ಲಿ ಶ್ರೀರಾಮ ಸೇನೆ ಸಂಘಟನೆಯ ವತಿಯಿಂದ ಸುಬೇದಾರ ಆಸ್ಪತ್ರೆಯ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯು ವಿಸರ್ಜನೆ ಶನಿವಾರ (ಸೆ.21) ಹಮ್ಮಿಕೊಳ್ಳಲಾಗಿತ್ತು. ಅದರ ಅಂಗವಾಗಿ ಶೋಭಾಯಾತ್ರೆಯಲ್ಲಿ ಸಿದ್ದಲಿಂಗಸ್ವಾಮಿ ಭಾಗವಹಿಸುವವರಿದ್ದರು.
ಆದರೆ ಕಳೆದ ಬಾರಿ 2023ರ ಅಕ್ಟೋಬರ್ 3ರಂದು ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಸಿದ್ದಲಿಂಗಸ್ವಾಮಿ ಪ್ರಚೋದನಕಾರಿ ಭಾಷಣ ಮಾಡಿದ್ದರಿಂದ ನಗರದಲ್ಲಿ ಪ್ರಕ್ಷುಬ್ಧ ವಾತಾವರಣೆ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಹಾಪುರ ನಗರ ಠಾಣೆಯಲ್ಲಿ ಕಲಂ 295ಎ, 153 ಐಸಿಸಿ ಅಡಿ ಪ್ರಕರಣ ದಾಖಲಾಗಿತ್ತು.
ಸಿದ್ದಲಿಂಗಸ್ವಾಮಿ ಪ್ರಚೋದನಕಾರಿ ಭಾಷಣ ಮಾಡುವ ಮನೋಭಾವವುಳ್ಳವರಾಗಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಿದ್ದಲಿಂಗಸ್ವಾಮಿ ಅವರಿಗೆ ಸೆ.20 ರಾತ್ರಿ 12 ಗಂಟೆಯಿಂದ ಸೆ.22ರ ಮಧ್ಯಾಹ್ನ 2 ಗಂಟೆಯವರೆಗೆ ಶಹಾಪುರ ತಾಲ್ಲೂಕಿನಾದ್ಯಂತ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಆದೇಶಿಸಿದ್ದಾರೆ.
ನಿರ್ಬಂಧ ಖಂಡಿಸುವೆ
ಶಹಾಪುರ: ಜೇವರ್ಗಿಯ ಅಂದೋಲ ಮಠದ ಸಿದ್ದಲಿಂಗಯ್ಯ ಸ್ವಾಮಿ ಅವರ ವಿರುದ್ಧ ತಾಲ್ಲೂಕು ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಹೊರಡಿಸಿದ ಆದೇಶದಲ್ಲಿ ಸಿದ್ದಲಿಂಗಯ್ಯಸ್ವಾಮಿ ಅವರ ತಂದೆ ಹೆಸರು ತಪ್ಪಾಗಿ ಬರೆದು ಮತ್ತು ಕರುಣೇಶ್ವರ ಮಠ ಎನ್ನುವ ಬದಲು ಗದ್ದುಗೆ ಎಂದು ನಮೂದಿಸಿರುವುದಕ್ಕೆ ಸಿದ್ದಲಿಂಗಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ಪೊಲೀಸರಿಗೆ ಕನಿಷ್ಠ ವ್ಯಕ್ತಿಗಳ ಸಮರ್ಪಕವಾಗಿ ಮಾಹಿತಿ ಇಲ್ಲ ಎನ್ನುವುದಕ್ಕೆ ಆದೇಶವೇ ಸಾಕ್ಷಿಯಾಗಿದೆ. ಜಿಲ್ಲಾಧಿಕಾರಿ ಆದೇಶದಲ್ಲಿ ತಪ್ಪಾಗಿ ನಮೂದಿಸಿರುವುದರ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ವಿಡಿಯೋ ವೈರಲ್: ಹಿಂದೂ ಧರ್ಮದ ಬಗ್ಗೆ ಮಾತನಾಡುವವರಿಗೆ ಸರ್ಕಾರ ಬಾಯಿಗೆ ಬೀಗ ಹಾಕುವ ಯತ್ನ ನಡೆದಿದೆ. ಪೊಲೀಸರ ಸೂಚನೆ ಮೇಲೆ ತಾಲ್ಲೂಕು ಪ್ರವೇಶಕ್ಕೆ ನಿರ್ಬಂಧ ಹಾಕಿರುವುದನ್ನು ಖಂಡಿಸುವೆ. ನಾನು ಶೋಭಾ ಯಾತ್ರೆಯಲ್ಲಿ ಭಾಗವಹಿಸುವೆ ಎಂದು ಪೊಲೀಸ್ ಅಧಿಕಾರಿಗೆ ಸೂಚನೆ ನೀಡುವ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.