ವಡಗೇರಾ: ‘ಹಳ್ಳಿಗಳಲ್ಲಿ ಸುಗ್ಗಿಯ ಕಾಲ ಆರಂಭವಾಗಿದ್ದು, ತಾಲ್ಲೂಕಿನ ವ್ಯಾಪ್ತಿಯ ಎಲ್ಲ ಪಂಚಾಯಿತಿ ಪಿಡಿಒಗಳು ತೆರಿಗೆ ವಸೂಲು ಅಭಿಯಾನ ಆರಂಭಿಸಬೇಕು’ ಎಂದು ತಾ.ಪಂ.ಇಒ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಡಿಒ ಹಾಗೂ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರ ಬೇಡಿಕೆ ಅನುಸಾರ ಕೂಡಲೇ ನರೇಗಾದಲ್ಲಿ ಕಾರ್ಮಿಕರಿಗೆ ಕೆಲಸ ನೀಡಬೇಕು. ಪ್ರತಿದಿನ ಸ್ವಚ್ಛ ವಾಹಿನಿ ಮೂಲಕ ಕಸ ಸಂಗ್ರಹಣೆ ಮಾಡಿ, ಸ್ವಚ್ಛತೆ ಕಾಪಾಡಿ, ರೋಗ ರುಜಿನಗಳನ್ನು ತಡೆಗಟ್ಟಬೇಕು’ ಎಂದು ತಿಳಿಸಿದರು.
ದುರಸ್ತಿ ಹಂತದಲ್ಲಿ ಇರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುವಂತೆ ಕ್ರಮ ವಹಿಸಬೇಕು. ಹಾಗೆಯೇ ಕುಡಿಯುವ ನೀರಿನ ಘಟಕಗಳನ್ನು ನಿಯಮಿತವಾಗಿ ನಿರಂತರ ಶುಚಿಗೊಳಿಸಬೇಕು’ ಎಂದು ತಾಕೀತುಗೊಳಿಸಿದರು.
‘ಸಾರ್ವಜನಿಕರು ಹಾಗೂ ಗ್ರಾಮಸ್ಥರಲ್ಲಿ ಓದುವ ಹವ್ಯಾಸ ಬೆಳೆಸಲು ಈ ಸಾಲಿನ 15ನೇ ಹಣಕಾಸು ಕ್ರಿಯಾ ಯೋಜನೆಯಲ್ಲಿ ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕರು ಸೇರುವ ಸ್ಥಳದಲ್ಲಿ ಪುಸ್ತಕದ ಗೂಡು ಯೋಜನೆ ಜಾರಿಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು’ ಎಂದು ಸೂಚಿಸಿದರು.
‘ಕೂಸಿನ ಮನೆ, ಗ್ರಾ.ಪಂ ಅರಿವು ಕೇಂದ್ರ ಗ್ರಂಥಾಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆಗಳಿಗೆ ಪಿಡಿಒಗಳು ಭೇಟಿ ನೀಡಿ ಪರಿಶೀಲಿಸಿ ಮೂಲಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
‘ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ರಹಿತ ಕುಟುಂಬಗಳಿಗೆ ತ್ವರಿತ ಗತಿಯಲ್ಲಿ ಶೌಚಾಲಯ ನಿರ್ಮಿಸಲು ಕ್ರಮಕೈಗೊಳ್ಳಬೇಕು. ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಮಂಜೂರಾದ ಮನೆಗಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಂತರಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ತಾ.ಪಂ ಸಹಾಯಕ ನಿರ್ದೇಶಕ ಶರಣಗೌಡ ಬಿ. ಉಳ್ಳೆಸೂಗುರು, ತಾ.ಪಂ ಯೋಜನಾಧಿಕಾರಿ ರಾಘವೇಂದ್ರ ಕುಲಕರ್ಣಿ, ಪಿಡಿಒ ಗೋವಿಂದ ರಾಠೋಡ, ಪ್ರವೀಣಕುಮಾರ ಹಿರೇಮಠ, ಜಗನ್ನಾಥರಡ್ಡಿ, ಸಿದ್ದವೀರಪ್ಪ, ದೇವಿಂದ್ರಪ್ಪ ಹಸನಾಪುರ, ಎಂಜಿನಿಯರ್‌ಗಳು, ಕೃಷಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.