ಮುಖ್ಯಾಂಶಗಳು * 40 ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ * ಅಧಿಕಾರಿಗಳ ಭೇಟಿ, ಪರಿಶೀಲನೆ * ಪ್ರಯೋಗಾಲಯಕ್ಕೆ ನೀರಿನ ಮಾದರಿ ರವಾನೆ
ಗುರುಮಠಕಲ್ (ಯಾದಗಿರಿ): ತಾಲ್ಲೂಕಿನ ಇಮ್ಲಾಪುರ ಗ್ರಾಮದಲ್ಲಿ ಸೋಮವಾರ ಸಂಜೆಯಿಂದ ವಾಂತಿ-ಭೇದಿ ಪ್ರಕರಣಗಳು ಕಾಣಿಸಿಕೊಂಡಿದ್ದು, ಗ್ರಾಮದ ಶಾಲಾ ಕಟ್ಟಡದಲ್ಲಿ ಮಂಗಳವಾರ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸೋಮವಾರ ಸಂಜೆ ವೇಳೆ ನಾಲ್ಕು ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ರಾತ್ರಿ ವೇಳೆಗೆ ತೀವ್ರಗೊಂಡಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ 40 ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿತು ಎಂದು ಗ್ರಾಮಸ್ಥರು ತಿಳಿಸಿದರು.
ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ 5, ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 12, ಖಾಸಗಿ ಆಸ್ಪತ್ರೆಯಲ್ಲಿ 10, ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ 2, ರಾಯಚೂರಿನ ರಿಮ್ಸ್‌ನಲ್ಲಿ 1 ಸೇರಿ ಮಂಗಳವಾರ ಮಧ್ಯಾಹ್ನದ ವೇಳೆಗೆ 40 ಕ್ಕೂ ಹೆಚ್ಚು ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಇನ್ನೂ ಕೆಲವರು ಬೇರೆ ಬೇರೆ ಆಸ್ಪತ್ರೆಗಳಿಗೆ ತೆರಳಿದ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದರು.
ಯಾವಾಗ ಬಂದರೂ ವೈದ್ಯಾಧಿಕಾರಿ ಇರುವುದೇ ಇಲ್ಲ. ಆಸ್ಪತ್ರೆಯಲ್ಲಿ ಔಷಧಗಳೂ ಸರಿಯಾಗಿ ಸಿಗುವುದಿಲ್ಲ ಎಂದು ಗಾಜರಕೋಟ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಾಹೀಲ್‌ರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಗಾಜರಕೋಟ ಸಿಎಚ್‌ಸಿ ವ್ಯಾಪ್ತಿಯ ಎಚ್‌ಡಬ್ಲೂಸಿ (ಆರೋಗ್ಯ ಮತ್ತು ಕ್ಷೇಮ ಕೇಂದ್ರ)ಗಳಲ್ಲಿ ಔಷಧಗಳೇ ಇರುವುದಿಲ್ಲ. 'ನಮ್ಮೂರಿಗೆ ಒಮ್ಮೆಯೂ ಡಾಕ್ಟರ್ ಬಂದಿಲ್ಲ. ನಾವಾಗಿ ಗಾಜರಕೋಟ ಆಸ್ಪತ್ರೆಗೆ ಹೋದರೂ ಸಹ ಅವರು ಸಿಗುವುದಿಲ್ಲ. ಈಗ ವಾಂತಿ-ಭೇದಿಯಾದ ಕಾರಣ ಅವರನ್ನು ನೋಡುವ ಭಾಗ್ಯ ಸಿಕ್ಕಿದೆ' ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸ್ಥಳದಲ್ಲೆ ಇದ್ದ ಟಿಎಚ್‌ಒ ಡಾ.ಹಣಮಂತರೆಡ್ಡಿ 'ವೈದ್ಯರ ಅವ್ಯವಸ್ಥೆ ಕುರಿತು ನಾನು ವರದಿ ಮಾಡಿದ್ದೇನೆ. ನೀವೂ ಲಿಖಿತ ದೂರು ಕೊಡಿ, ಅವರ ಮೇಲೆ ಖಂಡಿತವಾಗಿಯೂ ಕ್ರಮ ವಹಿಸಲಾಗುವುದು' ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ ನಂತರ ಗ್ರಾಮಸ್ಥರು ಶಾಂತರಾದರು.
ನೀರಿನ ಪರೀಕ್ಷಾ ವರದಿ ಬರುವವರೆಗೂ ಗ್ರಾಮಸ್ಥರು ಶುದ್ಧೀಕರಣ ಘಟಕ (ಆರ್.ಒ) ದಿಂದ ನೀರು ಪಡೆದು ಕುಡಿಯಿರಿ- ಅಮರೇಶ ನಾಯ್ಕ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ
ಈಗಾಗಲೇ ಗ್ರಾಮದಲ್ಲಿ ನೀರಿನ ಟ್ಯಾಂಕ್‌ನ ಸರಬರಾಜು ನಿಲ್ಲಿಸಲಾಗಿದೆ. ಆರ್.ಒ. ನೀರು ಬಳಸುವಂತೆ ಗ್ರಾಮಸ್ಥರಿಗೆ ತಿಳಿಸಿದ್ದೇವೆ- ಶರಣಪ್ಪ ಮೈಪಾರಿ, ಪಿಡಿಒ
ಸದ್ಯ ಸಮಸ್ಯೆ ಗಂಭೀರವಾದ ಪ್ರಕರಣವಿಲ್ಲ. ಗ್ರಾಮದ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅವಶ್ಯಕ ಔಷಧಗಳನ್ನೂ ಪೂರೈಸುತ್ತೇವೆ.- ಡಾ.ಹಣಮಂತರೆಡ್ಡಿ, ತಾಲ್ಲೂಕು ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.