ADVERTISEMENT

ಸುರಪುರ: ದಂಡಿನ ಮರಗಮ್ಮ ದೇಗುಲದಲ್ಲಿ ‘ಮಾಂಗಲ್ಯ ಬಿಚ್ಚಿಡುವ ವಿಶಿಷ್ಟ ಸಂಪ್ರದಾಯ’

ಸುರಪುರ ದೊರೆಗಳ ದಿಗ್ವಿಜಯದ ದೇವಿ ದಂಡಿನ ಮರಗಮ್ಮ

ಅಶೋಕ ಸಾಲವಾಡಗಿ
Published 9 ನವೆಂಬರ್ 2024, 5:58 IST
Last Updated 9 ನವೆಂಬರ್ 2024, 5:58 IST
<div class="paragraphs"><p>ಸುರಪುರದ ವಾಲ್ಮೀಕಿ ವೃತ್ತದ ಹತ್ತಿರ ಇರುವ ದಂಡಿನ ಮರಗಮ್ಮ ದೇಗುಲ</p></div>

ಸುರಪುರದ ವಾಲ್ಮೀಕಿ ವೃತ್ತದ ಹತ್ತಿರ ಇರುವ ದಂಡಿನ ಮರಗಮ್ಮ ದೇಗುಲ

   

ಸುರಪುರ: ಸುದೀರ್ಘ 222 ವರ್ಷಗಳವರೆಗೆ ಸುರಪುರ ಸಂಸ್ಥಾನವನ್ನಾಳಿದವರು ಗೋಸಲ ದೊರೆಗಳು. ಅವರಿಗೆ ಬಿಚಗತ್ತಕೇರಿಯ ದಂಡಿನ ಮರಗಮ್ಮ ದಿಗ್ವಿಜಯ ಹಾಗೂ ಶಕ್ತಿ ದೇವತೆಯಾಗಿದ್ದಳು.

ಅರಸರು ಮತ್ತು ಸೈನಿಕರಿಗೆ ದಂಡಿನ ಮರಗಮ್ಮನ ಮೇಲೆ ವಿಶೇಷ ಭಕ್ತಿಯಿತ್ತು. ಆಕೆಯ ಆಶೀರ್ವಾದದಿಂದ ಯುದ್ಧಗಳನ್ನು ಗೆಲ್ಲುತ್ತೇವೆ ಎಂಬ ನಂಬಿಕೆಯಿತ್ತು. ಸೈನಿಕರಿಗೆ ಧೈರ್ಯ ತುಂಬಲು ಕಬಾಡಗೇರಿ ಗಡೇದುರ್ಗಮ್ಮ, ಡೊಣ್ಣಗೇರಿ ಕಿರಣಿ ಮರಗಮ್ಮ, ಹುಲಕಲ್ ಗುಡ್ಡದ ರತ್ನಮ್ಮ.. ಹೀಗೆ ಎಲ್ಲ ಕೇರಿಗಳಲ್ಲಿ ಅರಸರು ಶಕ್ತಿ ದೇವತೆಗಳ ಗುಡಿಗಳನ್ನು ನಿರ್ಮಿಸಿದ್ದರು.

ADVERTISEMENT

ಸೈನಿಕರು ತಮ್ಮ ಮಡದಿಯರೊಂದಿಗೆ ದಂಡಿನ ಮರಗಮ್ಮ ದೇವಿಗೆ ಯುದ್ಧಕ್ಕೆ ತೆರಳುವಾಗ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಯುದ್ಧ ಭೂಮಿಯಿಂದ ಯಾವತ್ತೂ ಹಿಂದೆ ಸರಿಯುವುದಿಲ್ಲ ಎಂದು ಶಪಥ ಮಾಡುತ್ತಿದ್ದರು. ದೇವಿಗೆ ಪೂಜೆ ಸಲ್ಲಿಸಿ ಯುದ್ಧಕ್ಕೆ ದಂಡೆತ್ತಿ ಹೋಗುತ್ತಿದ್ದರಿಂದ ಈಕೆಗೆ ದಂಡಿನ ಮರಗಮ್ಮ ಎಂಬ ಅಭಿದಾನವಿದೆ.

ಪ್ರತಿ ಕುಟುಂಬದಿಂದಲೂ ಪುರುಷರು ಸೈನ್ಯಕ್ಕೆ ಸೇರ್ಪಡೆಯಾಗುತ್ತಿದ್ದರು. ಕುಟುಂಬದಲ್ಲಿ ಗಂಡು ಮಗು ಜನಿಸಿದರೆ ರಾಜ ಎರಡು ಆಕಳು ಹಾಗೂ ದವಸ ಧಾನ್ಯಗಳನ್ನು ಕಾಣಿಕೆ ನೀಡುತ್ತಿದ್ದ. ಸೈನಿಕರ ವಾಸಕ್ಕಾಗಿಯೇ ಡೊಣ್ಣಿಗೇರಿ, ಬಿಚಗತ್ತಕೇರಿ, ನಡುಗೇರಿ, ಮ್ಯಾಗೇರಿ, ಗುಡಾಳಕೇರಿ, ಕಬಾಡಗೇರಿ, ಖಾನಿಕೇರಿ, ಝಂಡದಕೇರಿ ಇತರ 14 ಕೇರಿಗಳ(ಬಡಾವಣೆ) ವ್ಯವಸ್ಥೆ ಮಾಡಿದ್ದರು.

ಗೆರಿಲ್ಲಾ ಯುದ್ಧ ಶೈಲಿಗೆ ಹೆಸರಾಗಿದ್ದ ಸೈನಿಕರು, ಅನನ್ಯ ಸ್ವಾಮಿ ನಿಷ್ಠೆ ಹೊಂದಿದ್ದರು. ಪಕ್ಕದ ರಾಜನೊಂದಿಗೆ ಚರ್ಚೆಯ ಸಂದರ್ಭದಲ್ಲಿ ಸುರಪುರ ಸೈನಿಕರ ನಿಷ್ಠೆಯ ಪ್ರಶ್ನೆ ಮೂಡಿತು. ಆಗ ಸೈನಿಕನೊಬ್ಬನನ್ನು ಕರೆದು ಕೋಟೆ ಹತ್ತಿ, ಕೆಳಗೆ ಧುಮುಕು ಎಂಬ ರಾಜಾಜ್ಞೆಯನ್ನು ಸೈನಿಕ ಪಾಲಿಸಿ, ಸಂಸ್ಥಾನದ ಪ್ರತಿಷ್ಠೆ ಹೆಚ್ಚಿಸಿದ.

ಮಾಂಗಲ್ಯ ಕಳಚಿಡುವ ಸಂಪ್ರದಾಯ: ಯುದ್ಧಕ್ಕೆ ಹೊರಟ ಸೈನಿಕರ ಮಡದಿಯರು ದಂಡಿನ ಮರಗಮ್ಮಗೆ ಪೂಜೆ ಸಲ್ಲಿಸಿ ನಂತರ ತಮ್ಮ ಗಂಡಂದಿರಿಗೆ ಆರತಿ ಎತ್ತಿ ತಿಲಕವಿಟ್ಟು ಜಯಶಾಲಿಯಾಗಿ ಬನ್ನಿ ಎಂದು ಹಾರೈಸುತ್ತಿದ್ದರು. ತಮ್ಮ ಮಾಂಗಲ್ಯವನ್ನು ದೇವಿಯ ಪಾದಕ್ಕೆ ಅರ್ಪಿಸುತ್ತಿದ್ದರು.

ಈ ಸಂಪ್ರದಾಯದಿಂದ ಸೈನಿಕರಿಗೆ ತಮ್ಮ ಕುಟುಂಬದ ವ್ಯಾಮೋಹ ಹೋಗುತ್ತಿತ್ತು. ಯುದ್ಧ ಗೆಲ್ಲಬೇಕೆನ್ನುವ ಛಲಕ್ಕೆ ಮಡದಿ, ಮಕ್ಕಳ ನೆನಪು ಅಡ್ಡಿಯಾಗುತ್ತಿರಲಿಲ್ಲ. ಯುದ್ಧದ ನಂತರ ಬದುಕಿ ಬಂದ ಸೈನಿಕರು ಪುನಃ ದೇವಿಯ ಸಮ್ಮುಖದಲ್ಲಿ ತಮ್ಮ ಮಡದಿಯರಿಗೆ ಮಾಂಗಲ್ಯ ಕಟ್ಟುತ್ತಿದ್ದರು.

ಹುತಾತ್ಮರಾದ ಸೈನಿಕರ ಪತ್ನಿಯರ ಮಾಂಗಲ್ಯ ದೇಗುಲದಲ್ಲೆ ಉಳಿಯುತ್ತಿತ್ತು. ಈಗಿನ ಸೈನಿಕ ಪದ್ಧತಿಯಂತೆ ಆಗಿನ ಕಾಲದಲ್ಲೆ ರಾಜರು ಮರಣ ಹೊಂದಿದ ಸೈನಿಕರ ಕುಟುಂಬಗಳಿಗೆ ಪಿಂಚಣಿ, ಜಮೀನು ನೀಡುತ್ತಿದ್ದರು.

ಸಂಗೊಳ್ಳಿ ರಾಯಣ್ಣನ ನಂಟು: ಬ್ರಿಟಿಷರ ವಿರುದ್ಧ ಹೋರಾಡಲು ಮುಮ್ಮಡಿ ರಾಜಾ ವೆಂಕಟಪ್ಪನಾಯಕ 300 ನುರಿತ ಬೇಡರ ಪಡೆಯನ್ನು ಸಂಗೊಳ್ಳಿ ರಾಯಣ್ಣನಿಗೆ ನೀಡಿದ್ದ. ಆ ಸೈನಿಕರ ಪತ್ನಿಯರು ಮಾಂಗಲ್ಯವನ್ನು ಕಳಚಿಟ್ಟಿದ್ದರು. ಹೋರಾಟದಲ್ಲಿ ಅನೇಕರು ಮಡಿದರು. ಸಂಗೊಳ್ಳಿ ರಾಯಣ್ಣನೊಂದಿಗೆ ಸುರಪುರದ ಇಬ್ಬರು ಸೈನಿಕರನ್ನು ಗಲ್ಲಿಗೇರಿಸಿದ್ದರು. ಉಳಿದ ಕೆಲ ಸೈನಿಕರು ಕಿತ್ತೂರು ಸಂಗೊಳ್ಳಿ ಸುತ್ತಲಿನ ಗ್ರಾಮಗಳಲ್ಲಿ ನೆಲೆಗೊಂಡರು. ಈಗಲೂ ಆ ಕುಟುಂಬದವರು ವರ್ಷಕ್ಕೆ ಅಥವಾ ಎರಡು ವರ್ಷಕ್ಕೆ ಒಮ್ಮೆ ಸುರಪುರಕ್ಕೆ ಬಂದು ದಂಡಿನ ಮರಗಮ್ಮಗೆ ಪೂಜೆ ಸಲ್ಲಿಸಿ ಹೋಗುತ್ತಾರೆ ಎಂದು ಕಿತ್ತೂರು ಸಮೀಪದ ಗ್ರಾಮ ಹೊಳೆಹಡಗಲಿಯಲ್ಲಿ ವಾಸವಾಗಿರುವ ಇಲ್ಲಿನ ಸೈನಿಕ ಮನೆತನದ ಭೀಮರಾಯ ಹೇಳುತ್ತಾರೆ.

ಸುರಪುರ ಸಂಸ್ಥಾನದ ಇತಿಹಾಸ ಹೆಕ್ಕಿದಷ್ಟು ಲಭಿಸುತ್ತದೆ. ಸಂಶೋಧನಗೆ ಸಾಕಷ್ಟು ಸಂಗತಿಗಳಿದ್ದು ಸಂಶೋಧನಾ ವಿದ್ಯಾರ್ಥಿಗಳು ಈ ಬಗ್ಗೆ ಗಮನಹರಿಸಬೇಕು
-ಉಪೇಂದ್ರನಾಯಕ ಸುಬೇದಾರ, ಉಪನ್ಯಾಸಕ
ದಂಡಿನ ಮರಗಮ್ಮ ದೇಗುಲ ಈಗ ಪಕ್ಕದಲ್ಲಿರುವ ಕೆರೆ ನೀರಿನಿಂದ ತುಂಬಿ ಹೋಗಿದೆ. ಪೂಜೆ ಸಲ್ಲಿಸಲು ತೊಂದರೆಯಾಗುತ್ತಿದೆ. ಜೀರ್ಣೋದ್ಧಾರದ ಅವಶ್ಯಕತೆ ಇದೆ
-ಹುಲಗಮ್ಮ ಬಿಳ್ಹಾರ ಪೂಜಾರ್ತಿ, ಅರ್ಚಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.