ADVERTISEMENT

ಜಿಲ್ಲೆಗೆ ಕೀರ್ತಿ ತಂದ ಹಾಡುಗಾರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 12:46 IST
Last Updated 16 ನವೆಂಬರ್ 2019, 12:46 IST
ಬಿ.ಲಕ್ಷ್ಮಣ ಗುತ್ತೇದಾರ
ಬಿ.ಲಕ್ಷ್ಮಣ ಗುತ್ತೇದಾರ   

ಕೆಂಭಾವಿ: ಹೆಗ್ಗಣದೊಡ್ಡಿ ಗ್ರಾಮದ ದುಂದುಮೆ ಹಾಡುಗಾರ ಬಿ.ಲಕ್ಷ್ಮಣ ಗುತ್ತೇದಾರ ಅವರನ್ನು ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್‌, ರಾಮನಗರದಲ್ಲಿ ನಡೆಯುವ ಲೋಕಸಿರಿ ಕಾರ್ಯಕ್ರಮಕ್ಕೆ ತಿಂಗಳ ಅತಿಥಿಯನ್ನಾಗಿ ಆಯ್ಕೆ ಮಾಡಿದೆ.

ಕರ್ನಾಟಕ ರಾಜ್ಯದಲ್ಲಿ ಸುರಪುರ ತಾಲ್ಲೂಕಿನಲ್ಲಿ ಮಾತ್ರ ದುಂದುಮೆ ಹಾಡುಗಾರಿಕೆಯನ್ನು ಕಾಣಬಹುದು.

ಹೆಗ್ಗನದೊಡ್ಡಿ ಗ್ರಾಮದಲ್ಲಿ ಜನಿಸಿದ ಲಕ್ಷ್ಮಣ ಗುತ್ತೇದಾರ ಅವರು ಇಳಿಯ ವಯಸ್ಸಿನಲ್ಲೂ ಕಲೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ‘ಲೋಕಸಿರಿ’ ಹಾಗೂ ‘ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ’ಗೂ ಭಾಜನರಾಗಿದ್ದಾರೆ.

ADVERTISEMENT

1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಕೆಚ್ಚೆದೆಯ ಹೋರಾಟ. ಕುಟಿಲತೆಯ ಕಾರಣಕ್ಕೆ ಸೆರೆಸಿಕ್ಕ ನಾಯಕನ ನೋವಿನ ಕಥನವನ್ನು ಪ್ರತಿ ಹೋಳಿ ಹುಣ್ಣಿಮೆಯ ದಿನ ಸುರಪುರದ ಓಣಿ ಓಣಿಯಲ್ಲಿ ಹಾಡುತ್ತಾರೆ ಇವರು.

ಸುರಪುರದ ನಾಲ್ವಡಿ ವೆಂಕಟಪ್ಪ ನಾಯಕನ ಕುರಿತಾದ ಇವರ ಹಾಡುಗಳು ಜಿಲ್ಲೆಯಾದ್ಯಂತ ಜನಮೆಚ್ಚುಗೆಗೆ ಪಾತ್ರವಾಗಿವೆ.

ಪದ, ಪದದಲ್ಲೂ, ನುಡಿ ನುಡಿಯಲ್ಲೂ ಹೋರಾಟದ ವೇಗ, ಕಿಚ್ಚು ಹೊಮ್ಮುವಂತೆ ಮಾಡುತ್ತದೆ ಇವರ ಹಾಡಿನ ಪರಿ.

ಇವರು ಎದೆತುಂಬಿ ಹಾಡುವ ಪರಿ ನೋಡಲೇಬೇಕು. ಸುತ್ತಿದ ತುಂಬು ಪೇಟ, ಬಿಳಿ ಪಂಚೆ, ಬಿಳಿ ಅಂಗಿ ಕೈಯ ಹಲಗೆಗೆ ಇವರ ಉಡುಗೆ. ಅವರ ಹಾಡಿನ ಗಮ್ಮತ್ತು ನಿಜಕ್ಕೂ ಮೈ ನವಿರೇಳಿಸುತ್ತದೆ.

‘ಲಕ್ಷ್ಮಣ ಗುತ್ತೇದಾರ ದುಂದುಮೆ ಪರಂಪರೆಯನ್ನು ಉಳಿಸಿ, ಬೆಳಸುತ್ತಿದ್ದಾರೆ. ಲೋಕಸಿರಿ ತಿಂಗಳ ಕಾರ್ಯಕ್ರಮಕ್ಕೆ ಗುತ್ತೇದಾರ ಅವರ ಆಯ್ಕೆ ತುಂಬಾ ಹರ್ಷ ತಂದಿದೆ’ ಎಂದು ಹೇಳುತ್ತಾರೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.