ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಫಲಾನುಭವಿ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ವಿಜಯಪುರ, ಕಲಬುರಗಿಯ ಅಂದಾಜು 6.22 ಲಕ್ಷ ಹೆಕ್ಟೇರ್ ಕೃಷಿ ಜಮೀನುಗಳಿಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು, ಈ ಬಾರಿಯ ಬೇಸಿಗೆ ಹಂಗಾಮಿನ ಎರಡನೇ ಬೆಳೆಗೆ ಆತಂಕ ಶುರುವಾಗಿದೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮೂರ್ನಾಲ್ಕು ವರ್ಷದಿಂದ ಸಮರ್ಪಕವಾಗಿ ನಾರಾಯಣಪುರ ಎಡದಂಡೆ ಕಾಲುವೆಗೆ ಬೇಸಿಗೆ ಹಂಗಾಮಿನ ಬೆಳೆಗೆ ನೀರು ಸಿಗದೆ ರೈತರು ಸಂಕಷ್ಟ ಎದುರಿಸಿದ್ದರು. ಪ್ರಸಕ್ತ ವರ್ಷ ಉತ್ತಮ ಮಳೆಯ ಜತೆಯಲ್ಲಿ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಆದರೆ, ಬೇಸಿಗೆ ಹಂಗಾಮಿನಲ್ಲಿ ಎಷ್ಟು ದಿನಗಳ ಕಾಲ ಕಾಲುವೆಗೆ ನೀರು ಹರಿಸುತ್ತಾರೆ ಎಂಬ ಆತಂಕ, ದುಗುಡ ರೈತರಲ್ಲಿ ಮನೆ ಮಾಡಿದೆ.
ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗೆ ನೀರು ಹರಿಸುವ ಅವಧಿ ಇದೇ ನ.13ಕ್ಕೆ ಕೊನೆಗೊಳ್ಳಲಿದೆ. ಅದರಂತೆ ಬೇಸಿಗೆ ಹಂಗಾಮಿನ ಬೆಳೆಗೆ ಎಷ್ಟು ದಿನಗಳ ಕಾಲ ನೀರು ಹರಿಸಬೇಕು ಎಂಬ ನಿರ್ಣಯ ತೆಗೆದುಕೊಳ್ಳುವುದು ನೀರಾವರಿ ಸಲಹಾ ಸಮಿತಿಗೆ (ಐಸಿಸಿ) ಅಧಿಕಾರವಿದೆ. ಈಗ ರೈತರ ಚಿತ್ತ ಸಭೆಯ ಕಡೆ ನೆಟ್ಟಿದೆ.
'ಸಾಮಾನ್ಯವಾಗಿ ಕಾಲುವೆಗೆ ಬೇಸಿಗೆ ಹಂಗಾಮಿನಲ್ಲಿ ಲಘು ಬೆಳೆಗಳಿಗೆ 120 ದಿನ ನೀರು ಬೇಕಾಗುತ್ತದೆ. ಆದರೆ, ಕಾಲುವೆ ಜಾಲದ ಮೆಲ್ಭಾಗದ ರೈತರು ಬೆಳೆ ಪದ್ಧತಿ ಉಲ್ಲಂಘಿಸಿ ಭತ್ತ ನಾಟಿ ಮಾಡುತ್ತಾರೆ. ಅಲ್ಲದೆ ವಾರ ಬಂದ್ ನಿಯಮದ ಪ್ರಕಾರ ಕಾಲುವೆಗೆ ನೀರು ಹರಿಸುವುದರಿಂದ ಅದೇ ಕಾಲುವೆ ಜಾಲದ ರೈತರಿಗೆ ನೀರಿನ ಸಮಸ್ಯೆ ಕಂಟಕವಾಗಿ ಪರಿಣಮಿಸುತ್ತದೆ. ಅಲ್ಲದೆ ಬೇಸಿಗೆಯ ಕಾಲದಲ್ಲಿ ಮಳೆ ಹಾಗೂ ತಾಪಮಾನ ಏರಿಕೆಯಿಂದ ಹೆಚ್ಚಿನ ನೀರಿನ ಬೇಡಿಕೆ ರೈತರದ್ದು ಆಗಿರುತ್ತದೆ. ಕಾಲುವೆ ಜಾಲದ ಕೊನೆ ಭಾಗದ ರೈತರು ಮತ್ತೆ ಹೋರಾಟ, ಪ್ರತಿಭಟನೆ, ಧರಣಿಗೆ ಮುಂದಾಗುವುದು ಇದು ಪ್ರತಿ ವರ್ಷ ಸಾಮಾನ್ಯವಾಗಿ ಬಿಟ್ಟಿದೆ' ಎನ್ನುತ್ತಾರೆ ನಿಗಮದ ಅಧಿಕಾರಿ ಒಬ್ಬರು.
'ಬೇಸಿಗೆಯ ನೀರಿನ ಬೇಡಿಕೆ ಹೆಚ್ಚಾಗುತ್ತಾ ಸಾಗಿದಾಗ ತಣ್ಣಗೆ ವಿವಿಧ ರಾಜಕೀಯ ಪಕ್ಷಗಳು ರೈತರ ಪರ ಕಾಳಜಿಗೆ ಮುಂದಾಗಿ ರಾಜಕೀಯ ಕೆಸರಾಟಕ್ಕೆ ಮುನ್ನುಡಿಯು ಶುರುವಾಗುತ್ತದೆ. ಕಳೆದ ವರ್ಷ ಬೆಳೆದು ನಿಂತ ಮೆಣಸಿನಕಾಯಿ ಬೆಳೆಗೆ ನೀರು ಹರಿಸುವಂತೆ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯಲ್ಲಿ ರೈತರು ಹೋರಾಟವು ಹೊಸ ಸ್ವರೂಪ ಪಡೆದುಕೊಂಡಿತು. ಕೊನೆಗೆ ಮುಖ್ಯಮಂತ್ರಿ ಅವರು ಮಧ್ಯ ಪ್ರವೇಶ ಮಾಡಿ ನೀರು ಹರಿಸುವ ನಿರ್ಧಾರ ಪ್ರಕಟಿಸಿರುವುದು ಕಾಲುವೆ ನೀರು ರಾಜಕೀಯ ಸ್ವರೂಪದ ವಾಸ್ತವ ಕತೆಯಾಗಿದೆ' ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.
ರೈತರಿಗೆ ಮುಂಚಿತವಾಗಿಯೇ ಬೇಸಿಗೆ ಹಂಗಾಮಿನ ಬೆಳೆಗೆ ನೀರು ಹರಿಸುವ ನಿರ್ಧಾರವನ್ನು ಪ್ರಕಟಿಸಿದರೆ ಅದರಂತೆ ರೈತರು ಯಾವ ಬೆಳೆ ಬೆಳೆಯಬೇಕು ಎಂಬ ಸ್ಪಷ್ಟವಾದ ಚಿತ್ರಣ ಸಿಗುತ್ತದೆ ಎನ್ನುತ್ತಾರೆ ಕಾಲುವೆ ನೀರಿನ ಅವಲಂಬಿತ ರೈತಾಪಿ ವರ್ಗ.
ಪೂರಕ ಮಾಹಿತಿ: ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ
ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣೆ ಹಾಗೂ ಭೀಮಾ ಎರಡು ನದಿಯ ನೀರಿನ ಲಭ್ಯತೆಯನ್ನು ಪಡೆಯುವ ರೈತರು. ಬೇಸಿಗೆ ಹಂಗಾಮಿನಲ್ಲಿ ಬ್ರಿಜ್ ಕಂ ಬ್ಯಾರೇಜ್ ಹಾಗೂ ನದಿ ಪಾತ್ರದ ರೈತರು ಭತ್ತ ನಾಟಿ ಮಾಡುತ್ತಾರೆ. ಬೇಸಿಗೆ ಹಂಗಾಮಿನಲ್ಲಿ ತೀವ್ರವಾದ ನೀರಿನ ಸಮಸ್ಯೆ ಉಂಟಾಗುವುದರ ಜತೆಯಲ್ಲಿ ನದಿಯ ಜಲಚರಗಳು ಸಂಕಷ್ಟಕ್ಕೆ ಸಿಲುಕುತ್ತವೆ. 'ಜೆಸ್ಕಾಂ ಇಲಾಖೆಯು ನಾಲಾ ಪರವಾನಗಿ ನೀಡುವಾಗ ಫೆಬ್ರುವರಿ-ಜೂನ್ ತಿಂಗಳವರೆಗೆ ಹಳ್ಳ ನದಿಯ ನೀರು ಸೆಳೆದುಕೊಳ್ಳಬಾರದು. ಷರತ್ತು ಉಲ್ಲಂಘಿಸಿದರೆ ವಿದ್ಯುತ್ ಸಂಪರ್ಕ ಕಟ್ ಮಾಡಲಾಗುವುದು ಎಂಬ ಷರತ್ತು ಉಲ್ಲಂಘಿಸಿ ಭತ್ತ ನಾಟಿ ಮಾಡುತ್ತಾರೆ. ಇದರ ಬಗ್ಗೆ ಜಾಗೃತಿಯೂ ಅಗತ್ಯವಾಗಿದೆ. ಕಳೆದ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ನದಿ ಪಾತ್ರದ ವಿದ್ಯುತ್ ಮೋಟಾರ್ ಸಂಪರ್ಕ ಸ್ಥಗಿತಗೊಳಿಸಿದಾಗ ರಾಜಕೀಯ ಒತ್ತಡದ ಮೂಲಕ ಮತ್ತೆ ಸಂಪರ್ಕ ಪಡೆದುಕೊಂಡಿರುವುದು ಇತಿಹಾಸ. ಈಗ ಮತ್ತೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತ ಹೊಣೆಯಾಗಿದೆ' ಎನ್ನುತ್ತಾರೆ ರೈತ ಮುಖಂಡ ನಿಂಗಣ್ಣ.
ಶಹಾಪುರ: ‘ಬೇಸಿಗೆ ಹಂಗಾಮಿನ ಲಘು ಬೆಳೆಗಳಿಗೆ ನೀರು ಹರಿಸುವ ನಿರ್ಧಾರವನ್ನು ಪ್ರಕಟಿಸುವ ನೀರಾವರಿ ಸಲಹಾ ಸಮಿತಿಯು ನಂತರ ರಾಗ ಬದಲಾಯಿಸಿ ನಿಷೇಧಿತ ಬೆಳೆಗೆ ನೀರು ಹರಿಸುವಂತೆ ಆಯಾ ತಾಲ್ಲೂಕಿನ ಶಾಸಕರು ಒತ್ತಡ ಹೇರುವುದು ನಿಲ್ಲಿಸಬೇಕು. ಸಲಹಾ ಸಮಿತಿ ನಿರ್ಣಯವನ್ನು ಎಲ್ಲರೂ ಪಾಲಿಸುವುದರ ಜತೆಗೆ ಬದ್ದರಾಗಿರಬೇಕು’ ಎಂದು ಎಚ್ಚರಿಕೆ ನೀಡುತ್ತಾರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶ ಭೂಮಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಅಶೋಕರಾವ ಮಲ್ಲಬಾದಿ. ಪರ್ಯಾಯ ಬೆಳೆಯತ್ತ ರೈತರ ಚಿತ್ತ: ‘ಮುಂಗಾರು ಹಂಗಾಮಿನ ಬೆಳೆಯಾದ ನಿಷೇಧಿತ ಬೆಳೆ ಭತ್ತ ಕಟಾವ್ ಮಾಡಿದ ಬಳಿಕ ರೈತರು ಸಜ್ಜೆ ಬೆಳೆಯ ಪಡೆ ಮುಖ ಮಾಡುತ್ತಾರೆ. ಅಲ್ಲದೆ ಸಮರ್ಪಕವಾಗಿ ಹತ್ತಿ 2ನೇ ಬಾರಿಗೆ ಸರಿಯಾಗಿ ಇಳುವರಿ ಕಾಣದಿದ್ದರೆ ಪರ್ಯಾಯವಾಗಿ ಸಜ್ಜೆ ಶೇಂಗಾ ಸೂರ್ಯಕಾಂತಿ ಮೆಕ್ಕೆಜೋಳ ಬೆಳೆಯ ಕಡೆ ಮುಖ ಮಾಡುತ್ತೇವೆ’ ಎನ್ನುತ್ತಾರೆ ರೈತ ಶರಣಪ್ಪ.
ಹುಣಸಗಿ: ತಾಲ್ಲೂಕಿನಲ್ಲಿ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಹುತೇಕ ಭತ್ತವನ್ನೇ ನಾಟಿ ಮಾಡಲಾಗುತ್ತಿದ್ದು ಸುಮಾರು 15 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಹತ್ತಿ ಬೆಳೆಸಿದ್ದಾರೆ. ಈ ಹಿಂಗಾರು ಹಂಗಾಮಿನಲ್ಲಿ ಭತ್ತ ನಾಟಿಗೆ ಸಸಿ ಹಾಕಿಕೊಳ್ಳಲು ಮುಂದಾಗಿದ್ದಾರೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನಾರಾಯಣಪುರ ಎಡದಂಡೆಯ ಕಾಲುವೆಗೆ ಕಳೆದ ವರ್ಷ ಬೇಸಿಗೆ ಹಂಗಾಮಿಗೆ ನೀರು ಹರಿಸಲಿಲ್ಲ. ಇದರಿಂದಾಗಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಹಿಂಗಾರು ಬೆಳೆಯಿಲ್ಲದೆ ರೈತರು ಸಾಕಷ್ಟು ನಷ್ಟ ಅನುಭವಿಸಿದರು. ಆದರೆ ಈ ಬಾರಿ ವರುಣದೇವರ ಕೃಪೆಯಿಂದಾಗಿ ನವೆಂಬರ್ ಮೊದಲ ವಾರದವರೆಗೂ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯಗಳಲ್ಲಿ ಸಮರ್ಪಕವಾಗಿ ನೀರು ಲಭ್ಯವಾಗಲಿದೆ ಎಂದು ರೈತ ವಲಯದಲ್ಲಿ ಮಾತುಗಳು ಕೇಳಿಬರುತ್ತವೆ. ಆದರೆ ಹಿಂಗಾರಿಗೆ ಮಾರ್ಚ್ ಅಂತ್ಯದ ವರೆಗೆ ನೀರು ಹರಿಸುವ ಲಕ್ಷಣವಿದ್ದು ಸೋನಾ ತಳಿಯ ಭತ್ತವನ್ನು ಕೈ ಬಿಟ್ಟು ಆರ್.ಎನ್.ಆರ್ ಹಾಗೂ ಕಾವೇರಿ ತಳಿ ನಾಟಿ ಮಾಡಲು ಅಣಿಯಾಗುತ್ತಿರುವುದಾಗಿ ರೈತರು ಹೇಳುತ್ತಾರೆ.
ಆದರೆ ಮುಂಬರುವ ವಾರದಲ್ಲಿ ಐಸಿಸಿ ನೀರಾವರಿ ಸಲಹಾ ಸಮಿತಿ ಸಭೆ ಆಯೋಜಿಸುವ ಮಾಹಿತಿಯನ್ನು ಸಭೆಯಲ್ಲಿ ನೀರು ಹರಿಸುವ ದಿನಾಂಕ ನಿಶ್ಚಯವಾದ ಬಳಿಕ ರೈತರು ನೀರಿನ ದಿನಾಂಕ ಆಧರಿಸಿ ಸಸಿಕೊಳ್ಳಲು ಕೆಲ ರೈತರು ಆಶಯ ವ್ಯಕ್ತಪಡಿಸಿದರು. ಆದರೆ ಚಾಲು ಬಂದಿ ಮಾಡಿದಲ್ಲಿ ಕಾಲುವೆ ಕೊನೆಯ ಭಾಗದ ರೈತರಿಗೆ ನೀರು ತಲುಪುವುದು ಅನುಮಾನ ಎಂಬ ಮಾತುಗಳು ದೇವತಕಲ್ಲ ಬೆನಕನಹಳ್ಳಿ ಗ್ರಾಮದ ರೈತರು ವ್ಯಕ್ತಪಡಿಸಿದರು. ‘ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳಲ್ಲಿ ಕೃಷಿ ಬಳಕೆ ಸೇರಿದಂತೆ ನೀರು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದಾಗಿ ರೈತರಿಗೆ ಸಮರ್ಪಕ ನೀರು ಒದಗಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಐಸಿಸಿ ಸಭೆಯ ಸದಸ್ಯರು ಮುಂದಾಗಬೇಕು’ ಎಂದು ರಾಜ್ಯ ರೈತ ಸಂಘದ ರಾಜ್ಯ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಮಹದೇವಿ ಬೇನಾಳಮಠ ಆಗ್ರಹಿಸಿದ್ದಾರೆ.
ಯಾದಗಿರಿ: ಚಾಲೂ-ಬಂದ್ ಪದ್ಧತಿ ಅನುಸರಿಸಿ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ ಎಡದಂಡೆ ಕಾಲುವೆಗೆ ನವೆಂಬರ್ 13 ವರೆಗೆ ಕಾಲುವೆಗೆ ನೀರು ಹರಿಸಲಾಗುವುದು ಎಂದು ಭೀಮರಾಯನಗುಡಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಜೆಬಿಸಿ ವೃತ್ತ ಅಧೀಕ್ಷಕ ಎಂಜಿನಿಯರ್ ಲಕ್ಷ್ಮಣ ಎಂ.ನಾಯಕ ತಿಳಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯನ್ನು ಜುಲೈ 16ರಂದು ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 17ರಿಂದ ಕಾಲುವೆಗಳಲ್ಲಿ ನೀರು ಹರಿಸುತ್ತಿದ್ದು ಇದೇ ನವೆಂಬರ್ 13ರ ವರೆಗೆ ನೀರು ಹರಿಸಬೇಕಿದೆ. ರೈತರು ನೀರಿನ ಬಳಕೆ ಮಾಡಲು ಕೃಷ್ಣಾ ಭಾಗ್ಯ ಜಲ ನಿಗಮ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.