ADVERTISEMENT

ಸುರಪುರ ಉಪಚುನಾವಣೆ | ಯುವ ಶಾಸಕರ ಮುಂದಿವೆ ಸವಾಲುಗಳು

ಸುರಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯ, ಉಳಿದಿವೆ ನಾಲ್ಕು ವರ್ಷಗಳು

ಬಿ.ಜಿ.ಪ್ರವೀಣಕುಮಾರ
Published 6 ಜೂನ್ 2024, 5:35 IST
Last Updated 6 ಜೂನ್ 2024, 5:35 IST
ರಾಜಾ ವೇಣುಗೋಪಾಲ ನಾಯಕ
ರಾಜಾ ವೇಣುಗೋಪಾಲ ನಾಯಕ   

ಯಾದಗಿರಿ: ಜಿಲ್ಲೆಯ ಸುರಪುರ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದ್ದು, ಯುವ ಶಾಸಕರ ಮುಂದೆ ಸಾಲು ಸಾಲು ಸವಾಲುಗಳಿವೆ.

ರಾಜಾ ವೇಣುಗೋಪಾಲ ನಾಯಕ ಸುರಪುರ ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಉಳಿದಿರುವ ನಾಲ್ಕು ವರ್ಷಗಳ ಅವಧಿಯಲ್ಲಿ ಈಗಾಗಲೇ ಕ್ಷೇತ್ರದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕಿದೆ.

ಸುರ‍ಪುರ, ಹುಣಸಗಿ ತಾಲ್ಲೂಕುಗಳನ್ನು ಒಳಗೊಂಡಿರುವ ಸುರಪುರ ಮತಕ್ಷೇತ್ರದಲ್ಲಿ ಗುಳೆ ತೆರಳುವುದು ಸಾಮಾನ್ಯವಾಗಿದೆ. ಇದನ್ನು ತಡೆಯುವುದು ಅವಶ್ಯವಿದೆ.

ADVERTISEMENT

ಈ ಕ್ಷೇತ್ರ ಸಂಪೂರ್ಣ ನೀರಾವರಿಗೆ ಒಳಪಟ್ಟರೂ ಶೇ 25ರಷ್ಟು ಭೂಮಿ ನೀರಿನಿಂದ ವಂಚಿತವಾಗಿದೆ. ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಿಸುವ ಸವಾಲು ಇದೆ. ಗುಳೆ ಸಮಸ್ಯೆ ಅಧಿಕವಾಗಿದೆ. ಪ್ರತಿ ಹಳ್ಳಿಗಳಲ್ಲಿ ಶೇ 20 ರಷ್ಟು ಕಾರ್ಮಿಕರು ದೊಡ್ಡ ನಗರಗಳಿಗೆ ದುಡಿಯಲು ಹೋಗುತ್ತಾರೆ.

ನಿರುದ್ಯೋಗ ಪದವೀಧರರ ಸಂಖ್ಯೆ ಅಧಿಕವಾಗಿದೆ. ಸರ್ಕಾರದಿಂದ ಕಾರ್ಖಾನೆಗಳನ್ನು ಸ್ಥಾಪಿಸುವ ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕಿದೆ. ಆರೋಗ್ಯ ಇಲಾಖೆಯಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಬೇಕಿದೆ. ಶಿಕ್ಷಕರ ನೇಮಕಾತಿಯ ಅವಶ್ಯಕತೆ ಇದೆ.

ಭತ್ತದ ಕಣಜವಾಗಿರುವುದರಿಂದ ಅಕ್ಕಿ ಗಿರಣಿಗಳ ಸ್ಥಾಪನೆ, ಹತ್ತಿ ಕಾರ್ಖಾನೆ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಬಡವರಿಗೆ ಮನೆ, ರಸ್ತೆ, ನೀರು ಮೂಲ ಸೌಕರ್ಯ ಒದಗಿಸುವ ಗುರುತರ ಜವಾಬ್ದಾರಿ ನೂತನ ಶಾಸಕರ ಮೇಲಿದೆ.

ಹುಣಸಗಿಗೆ ಬೇಕಿದೆ ಡಿಪೋ: ತಾಲ್ಲೂಕು ಕೇಂದ್ರವಾದ ಹುಣಸಗಿಯಲ್ಲಿ ಹಲವಾರು ವರ್ಷಗಳ ಬೇಡಿಕೆಯಾದ ಬಸ್‌ ಡಿಪೋ ಮಂಜೂರಾಗಬೇಕಿದೆ. ಸದ್ಯ ಸುರಪುರ ಡಿಪೋದಿಂದ ಕಾರ್ಯನಿರ್ವಹಿಸುತ್ತಿದ್ದು, ಹುಣಸಗಿಗೆ ಪ್ರತ್ಯೇಕ ಡಿಪೋ ವ್ಯವಸ್ಥೆಯಾದರೆ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ಈ ಭಾಗದ ಜನರ ಆಗ್ರಹವಾಗಿದೆ.

‘2018ರಲ್ಲಿ ಹೊಸ ತಾಲ್ಲೂಕುದ ಹುಣಸಗಿಯಲ್ಲಿ ಇಂದಿಗೂ ಅನೇಕ ಕಚೇರಿಗಳಿಲ್ಲ. ವಿಶೇಷವಾಗಿ ಬಸ್‌ ಡಿಪೋ, ಬಿಇಒ ಕಚೇರಿ, ಸರ್ವೆ ಇಲಾಖೆ, ನ್ಯಾಯಾಲಯ, ಅಗತ್ಯ ಮೂಲ ಸೌಲಭ್ಯಗಳು ಬೇಕು. ನೂತನವಾಗಿ ಆಯ್ಕೆಯಾಗಿರುವ ಶಾಸಕರು ಇತ್ತ ಗಮನ ಹರಿಸಬೇಕು’ ಎನ್ನುತ್ತಾರೆ ಹುಣಸಗಿ ಪಟ್ಟಣ ನಿವಾಸಿ ಬಸಲಿಂಗಯ್ಯ ಮಠ.

ಸೈನಿಕ ಶಾಲೆ: ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಸೈನಿಕ ಶಾಲೆ ಮಂಜೂರಾತಿಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದನ್ನು ಅನುಷ್ಠಾನಕ್ಕೆ ತರಲು ಸಂಸದರ ಜೊತೆಗೆ ಸಂವಹನ ಮಾಡಬೇಕಿದೆ.

2023ರ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನಿಂದ ಶಾಸಕರಾಗಿ ರಾಜಾ ವೆಂಕಟಪ್ಪ ನಾಯಕ ಆಯ್ಕೆಯಾಗಿದ್ದರು. ವರ್ಷದೊಳಗೆ ಅಕಾಲಿಕ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಮೇ 7ರಂದು ಲೋಕಸಭೆ ಚುನಾವಣೆ ಜೊತೆಗೆ ಸುರಪುರ ಉಪಚುನಾವಣೆ ನಡೆದಿತ್ತು. ಜೂ.4ರಂದು ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ನರಸಿಂಹ ನಾಯಕ (ರಾಜೂಗೌಡ) ಪರಾಭವಗೊಂಡಿದ್ದಾರೆ.

ಬೇಕಿದೆ ನೀರಾವರಿ ಯೋಜನೆಗಳು

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ಕಾಲುವೆ ಜಾಲದ ವಿಸ್ತರಣೆಯಾಗಬೇಕಿದೆ.  ಅತ್ಯಾಧುನಿಕ ರಿಮೋಟ್ ತಂತ್ರಜ್ಞಾನದ ಗೇಟ್‌ಗಳ ₹4699 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ಉದ್ಘಾಟನೆ ಹಾಗೂ ಜಲಧಾರೆ ಯೋಜನೆ ಅಡಿಯಲ್ಲಿ ₹2004 ಕೋಟಿ ವೆಚ್ಚದಲ್ಲಿ ಬಹು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಶಂಕುಸ್ಥಾಪನೆ ಹಾಗೂ ಭಾರತ ಮಾಲಾ ಯೋಜನೆ ಅಡಿಯಲ್ಲಿ ಅಂದಾಜು ₹2000 ಕೋಟಿ ವೆಚ್ಚದಲ್ಲಿ ಸೂರತ್ ಚೆನ್ನೈ ಹೆದ್ದಾರಿ ನಿರ್ಮಾಣ (ನಿಂಬಾಳನಿಂದ ಸಿಂಗನೋಡಿಗೆ) 6 ಪಥ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ ಕಾಮಗಾರಿಗೆ 2023ರ ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಅದರಲ್ಲಿ ಮುಖ್ಯವಾಗಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಮೇಲಿದೆ.

ಮೂರು ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌

ಜಿಲ್ಲೆಯಲ್ಲಿ ಮೂರು ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಯಾದಗಿರಿ ಶಹಾಪುರ ಸುರ‍ಪುರದಲ್ಲಿ ಕಾಂಗ್ರೆಸ್‌ನ ಶಾಸಕರಿದ್ದರೆ ಶಹಾಪುರದಿಂದ ಆಯ್ಕೆಯಾಗಿರುವ ಶರಣಬಸಪ್ಪ ದರ್ಶನಾಪುರ ಸಣ್ಣ ಕೈಗಾರಿಕಾ ಸಚಿವರಾಗಿದ್ದಾರೆ. ಗುರುಮಠಕಲ್‌ ಮತಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಇಷ್ಟು ದಿನಗಳ ಕಾಲ ಚುನಾವಣೆ ನೆಪದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದು ಚುನಾವಣೆ ಮುಗಿದ್ದರಿಂದ ಚುರುಕು ಪಡೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.