ADVERTISEMENT

ರಾಜಾ ವೆಂಕಟಪ್ಪ ನಾಯಕ ಪಂಚಭೂತಗಳಲ್ಲಿ ಲೀನ

ಅಂತಿಮ ದರ್ಶನ ಪಡೆದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ; ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 16:05 IST
Last Updated 26 ಫೆಬ್ರುವರಿ 2024, 16:05 IST
<div class="paragraphs"><p>ರಾಜಾ ವೆಂಕಟಪ್ಪ ನಾಯಕ</p></div>

ರಾಜಾ ವೆಂಕಟಪ್ಪ ನಾಯಕ

   

ಸುರಪುರ: ಬೆಂಗಳೂರಿನಲ್ಲಿ ವಿಧಿವಶರಾದ ಶಾಸಕ ರಾಜಾ ವೆಂಕಟಪ್ಪ ನಾಯಕರ ಪಾರ್ಥಿವ ಶರೀರ ಸೋಮವಾರ ನಸುಕಿನಲ್ಲಿ ನಗರದ ಅವರ ನಿವಾಸ ತಲುಪಿತು. ಭಾನುವಾರ ರಾತ್ರಿಯಿಂದಲೇ ಜಮಾಯಿಸಿದ್ದ ಕುಟುಂಬಸ್ಥರು, ನೆಂಟರು, ಕಾರ್ಯಕರ್ತರ, ಅಭಿಮಾನಿಗಳ ದುಃಖದ ಕಟ್ಟೆಯೊಡೆಯಿತು.

ಮೂಡಣದಲ್ಲಿ ಸೂರ್ಯಮೂಡುವ ಹೊತ್ತಿಗೆ ನೂರಾರು ಅಭಿಮಾನಿಗಳು ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲು ಸಾಲುಗಟ್ಟಿದರು. ವಾಲ್ಮೀಕಿ ಜನಾಂಗದ ಸಂಪ್ರದಾಯದಂತೆ ಮನೆಯಲ್ಲಿ ರಾಜಾ ವೆಂಕಟಪ್ಪ ನಾಯಕರ ವಿಧಿ ವಿಧಾನಗಳನ್ನು ಪೂರೈಸಲಾಯಿತು.

ADVERTISEMENT

ಬೆಳಿಗ್ಗೆ 10 ಗಂಟೆಗೆ ಬಸ್‍ನಿಲ್ದಾಣದ ಹತ್ತಿರ ಇರುವ ಪ್ರಭು ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ವಿಧಾನಸಭಾ ಕ್ಷೇತ್ರದ ಮೂಲೆ–ಮೂಲೆಗಳಿಂದ ಸಹಸ್ರಾರು ಜನ ತಂಡೋಪ–ತಂಡವಾಗಿ ಭೇಟಿ ನೀಡಿ, ದರ್ಶನ ಪಡೆದರು. ಕೆಲವರು ಕೊಂಬು, ಕಹಳೆ ಊದುತ್ತಾ, ಹಲಗೆ ಬಾರಿಸುತ್ತಾ, ಪಟಾಕಿ ಸಿಡಿಸುತ್ತಾ ಮೆರವಣಿಗೆಯಲ್ಲಿ ಬಂದು ದರ್ಶನ ಪಡೆದರು. ಮಹಿಳೆಯರ ಸಾಲೂ ಉದ್ದವಾಗಿತ್ತು.

ಪೊಲೀಸರು ಬ್ಯಾರಿಕೇಡ್ ಹಾಕುವ ಮೂಲಕ ಜನರನ್ನು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ವ್ಯವಸ್ಥೆ ಮಾಡಿದರು. ಯಾದಗಿರಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳ ಮುಖಂಡರು ಪಕ್ಷಭೇದ ಮರೆತು ಅಂತಿಮ ದರ್ಶನ ಪಡೆದರು. ಪ್ರಮುಖರಿಗೆ ಪ್ರತ್ಯೇಕ ಸಾಲು ಮಾಡಲಾಗಿತ್ತು. ಕಾರ್ಯಕರ್ತರು, ಅಭಿಮಾನಿಗಳು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಮದಾನಕ್ಕೆ ಸಂಪರ್ಕ ಕಲ್ಪಿಸುವ ಮಹಾತ್ಮ ಗಾಂಧಿ ವೃತದಿಂದ ಬಸ್‍ನಿಲ್ದಾಣ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಸಾರಿಗೆ ಬಸ್‍ಗಳು ಬೈಪಾಸ್ ರಸ್ತೆಯ ಮೂಲಕ ಸಂಚರಿಸಿದವು. ‌ಹತ್ತಾರು ಕಡೆ ಹೂವಿನ ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡಿದರು.

ಸ್ವಯಂ ಪ್ರೇರಿತ ಬಂದ್:

ಮೃತರ ಗೌರವಾರ್ಥ ನಗರದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಗೌರವ ಸೂಚಿಸಿದರು. 1ರಿಂದ 9ನೇ ತರಗತಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ವಕೀಲರು ಕೋರ್ಟ್ ಕಲಾಪದಿಂದ ದೂರ ಉಳಿದು ಶ್ರದ್ಧಾಂಜಲಿ ಸಭೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದಿಂದಲೂ ಶ್ರದ್ಧಾಂಜಲಿ ಸಭೆ ನಡೆಸಿ, ನುಡಿ ನಮನ ಸಲ್ಲಿಸಲಾಯಿತು.

ಅಂತಿಮ ಯಾತ್ರೆಯಲ್ಲಿ ಜನಸಾಗರ:

ಸಂಜೆ 5 ಗಂಟೆ ಹೊತ್ತಿಗೆ ಆರಂಭವಾದ ನೆಚ್ಚಿನ ನಾಯಕನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಪ್ರಭು ಕಾಲೇಜು ಮೈದಾನದಿಂದ ಬಸ್‍ನಿಲ್ದಾಣ, ಗಾಂಧಿವೃತ್ತ, ಅರಮನೆ ರಸ್ತೆ, ಕಬಾಡಗೇರಾ ಮಾರ್ಗವಾಗಿ ಹೊಸಬಾವಿ ಹತ್ತಿರದ ವಾಲ್ಮೀಕಿ ರುದ್ರಭೂಮಿವರೆಗೆ ಯಾತ್ರೆ ಸಾಗಿತು.

ಶಾಸಕರ ಪುತ್ರ ರಾಜಾ ವೇಣುಗೋಪಾಲನಾಯಕ ಅವರು ತಮ್ಮ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿ ವಿಧಾನ ಪೂರೈಸಿದರು.

ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಶರೀರ ಪಂಚಭೂತಗಳಲ್ಲಿ ಲೀನವಾಗುವುದರ ಜೊತೆಗೆ ನಾಲ್ಕು ದಶಕಗಳ ಕಾಲ ರಾಜಕೀಯ ನಡೆಸಿದ ರಾಜಾ ವೆಂಕಟಪ್ಪ ನಾಯಕರ ಯುಗ ಅಂತ್ಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.