ADVERTISEMENT

ಸುರಪುರ: ಸಂಭ್ರಮದಿಂದ ನಾಗಪಂಚಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:16 IST
Last Updated 9 ಆಗಸ್ಟ್ 2024, 16:16 IST
ಸುರಪುರ ಸಮೀಪದ ರಂಗಂಪೇಟೆಯಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಮಹಿಳೆಯರು ಶುಕ್ರವಾರ ಹುತ್ತಗಳಿಗೆ ಹಾಲೆರೆದರು
ಸುರಪುರ ಸಮೀಪದ ರಂಗಂಪೇಟೆಯಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಮಹಿಳೆಯರು ಶುಕ್ರವಾರ ಹುತ್ತಗಳಿಗೆ ಹಾಲೆರೆದರು   

ಸುರಪುರ: ಅಣ್ಣ ತಂಗಿಯರ ಹಬ್ಬವೆಂದು ಕರೆಯಲ್ಪಡುವ ನಾಗರ ಪಂಚಮಿಯನ್ನು ನಗರದಾದ್ಯಂತ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಗುರುವಾರ ಬೆಲ್ಲದ ಹಾಲನ್ನು ನಾಗಮೂರ್ತಿಗೆ ಎರೆದು ಭಕ್ತಿ ಸಮರ್ಪಿಸಿದರು. ಗುರುವಾರ ಮಹಿಳೆಯರು ನಾಗರ ಕಟ್ಟೆಗಳಿಗೆ ತೆರಳಿ ಬಿಳಿ ಹಾಲು ಎರೆದರು.

ಮನೆಯಿಂದ ತಂದಿದ್ದ ಕಡಲೆ ಕಾಳು, ತಂಬಿಟ್ಟು, ನೈವೇದ್ಯ ಮಾಡಿ, ಕೊಬ್ಬರಿ ಬಟ್ಟಲಿನಿಂದ ಕಲ್ಲು ನಾಗಪ್ಪನಿಗೆ ಹಾಲೆರೆಯುವ ದೃಶ್ಯ ಎಲ್ಲೆಡೆ ಕಂಡು ಬಂತು. ಕೆಲವರು ಮನೆಯಲ್ಲಿ ಇನ್ನೂ ಕೆಲವರು ದೇವಸ್ಥಾನಗಳಿಗೆ ತೆರಳಿ ದೇವರಿಗೆ ಹಾಲೆರೆದರು.

ADVERTISEMENT

ಸಹೋದರಿಯರನ್ನು ತವರಿಗೆ ಕರೆದು ತಂದು ಸಹೋದರರು ಸೀರೆ, ಆಭರಣ ಕಾಣಿಕೆ ನೀಡಿದರು. ಮಹಿಳೆಯರು ಜೋಕಾಲಿ ಆಡಿ ಸಂಭ್ರಮಿಸಿದರು. ಹಾಡು ಹಾಡಿ ನಲಿದರು. ಚಿಕ್ಕ ಮಕ್ಕಳು ಕೊಬ್ಬರಿ ಬಟ್ಟಲಿನಿಂದ ಬಗರಿ ತಯಾರಿಸಿ ಆಡುವುದು ರಂಜನೆ ನೀಡಿತು.

ಮನೆಗಳಲ್ಲಿ ಪೂಜೆ ಸಲ್ಲಿಸಿ ಹಬ್ಬದ ಊಟ ಸವಿದರು. ನೆರೆ ಹೊರೆಯವರಿಗೆ, ಬಂಧು ಬಳಗದವರಿಗೆ ಉಂಡಿ, ಚಕ್ಕಲಿ, ಕುಪ್ಪಸ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.